ಕಲಬುರ್ಗಿ: ಮೇ 23ರಂದು ರಾಜ್ಯ ರಾಜಕೀಯದಲ್ಲಿ ಭೂಕಂಪ ಆಗುತ್ತದೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೇದಾರ್ ಭವಿಷ್ಯ ನುಡಿದಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಮೇ 23ರ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕದಲ್ಲಿ ಭೂಕಂಪ ಆಗುತ್ತೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ.
ಇದೇ ವೇಳೆ ಈ ಬಾರಿಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲುವುದು ಖಚಿತ ಎಂದಿರುವ ಗುತ್ತೇದಾರ್, ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪುತ್ರ ಪ್ರಿಯಾಂಕ್ ಖರ್ಗೆಯನ್ನು ಮುಂದೆ ತರಲು ಎಲ್ಲರನ್ನೂ ಮುಗಿಸುತ್ತಿದ್ದಾರೆ ಎಂದು ಆರೋಪಿಸಿದ ಗುತ್ತೇದಾರ್, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮತ್ತು ಖರ್ಗೆಯವರು ಎಲ್ಲರ ಸಮಸ್ಯೆಗಳೇನಿದೆ ಎಂದು ಅರಿತು ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಭಸ್ಮಾಸುರ ಯಾರು ಎಂಬುದು ಮೇ 23ರ ಬಳಿಕ ಗೊತ್ತಾಗುತ್ತದೆ ಎಂದು ಕಿಡಿ ಕಾರಿದ್ದಾರೆ.