ರಾಜ್ಯದಲ್ಲಿ ಗರಿಗೆದರಿದ ರಾಜಕೀಯ; ಎಸ್.ಎಂ.ಕೃಷ್ಣ ಭೇಟಿ ಬಳಿಕ ರಮೇಶ್ ಜಾರಕಿಹೊಳಿ ಹೇಳಿದ್ದೇನು?

ಎಸ್‌ಎಂ ಕೃಷ್ಣ ಹಿರಿಯ ರಾಜಕಾರಣಿ. ಅವರ ಆರೋಗ್ಯ ವಿಚಾರಿಸಲು ಬಂದಿದ್ದಾಗಿ ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

Last Updated : May 26, 2019, 04:41 PM IST
ರಾಜ್ಯದಲ್ಲಿ ಗರಿಗೆದರಿದ ರಾಜಕೀಯ; ಎಸ್.ಎಂ.ಕೃಷ್ಣ ಭೇಟಿ ಬಳಿಕ ರಮೇಶ್ ಜಾರಕಿಹೊಳಿ ಹೇಳಿದ್ದೇನು? title=

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ, ಶಾಸಕ ಸುಧಾಕರ್ ಇಂದು ಬಿಜೆಪಿ ನಾಯಕ ಎಸ್.ಎಂ.ಕೃಷ್ಣಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಎಸ್‌ಎಂ ಕೃಷ್ಣ ಹಿರಿಯ ರಾಜಕಾರಣಿ. ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಬೇರೆ ರಾಜಕೀಯ ವಿಚಾರ ಚರ್ಚೆ ಆಗಿಲ್ಲ. ಎಸ್.ಎಂ ಕೃಷ್ಣ ಯಾವುದೇ ಪಕ್ಷದಲ್ಲಿರಲಿ ನಮ್ಮ ನಾಯಕರು ಎಂದು ಹೇಳಿದರು.

ಶಾಸಕ ಡಾ. ಎಸ್.ಸುಧಾಕರ್ ಮಾತನಾಡಿ, ಎಸ್.ಎಂ.ಕೃಷ್ಣ ಬಿಜೆಪಿಯಲ್ಲಿದ್ದರೂ ಆದರ್ಶ ವ್ಯಕ್ತಿತ್ವ ಉಳ್ಳವರು. ಎಸ್.ಎಂ.ಕೃಷ್ಣ ಅವರು ನನ್ನ ರಾಜಕೀಯ ಗುರುಗಳು. ಅವರು ನನ್ನ ತಂದೆ ಸಮಾನ. ಇದು ನನ್ನ ವೈಯಕ್ತಿಕ ಭೇಟಿ. ನನ್ನ ಮನೆಗೆ ರಮೇಶ್ ಬಂದಿದ್ದರು. ನಾನು ಹೀಗೆ ಕೃಷ್ಣ ಅವರ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದೆ. ಹಾಗಾಗಿ ಅವರೂ ಜೊತೆಗೆ ಬಂದರು ಅಷ್ಟೇ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ಏತನ್ಮಧ್ಯೆ, ಬಿಜೆಪಿಯ ಆರ್‌. ಅಶೋಕ್‌ ಸಹ, ''ನಾನು ಮತ್ತು ಯಡಿಯೂರಪ್ಪ ಅವರು  ಎಸ್‌.ಎಂ. ಕೃಷ್ಣ ಅವರ ಜತೆ ಪಕ್ಷದ ವಿಚಾರಗಳನ್ನು ಚರ್ಚಿಸಲಷ್ಟೇ ಬಂದಿದ್ದೆವು. ರಮೇಶ್‌ ಜಾರಕಿಹೊಳಿ ಹಾಗೂ ಡಾ. ಸುಧಾಕರ್ ಜತೆಗೆ ನನಗೆ ಯಾವ ಗೆಳೆತನವೂ ಇಲ್ಲ. ಇದೆಲ್ಲಾ ಕಾಕತಾಳೀಯವಷ್ಟೇ'' ಎಂದು ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. 

ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ 25 ರಲ್ಲಿ ಗೆದ್ದಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್‌ ತಲಾ 1ರಲ್ಲಿ ಗೆಲುವು ಸಾಧಿಸಿದೆ. ಇನ್ನೊಂದೆಡೆ, ವಿಧಾನಸಭೆಯಲ್ಲಿ 105 ಶಾಸಕರನ್ನು ಹೊಂದಿರುವ ಬಿಜೆಪಿಗೆ ಬಹುಮತ ಸಾಧಿಸಲು ಕೇವಲ 8 ಶಾಸಕರ ಸಂಖ್ಯಾಬಲ ಅಗತ್ಯವಿದೆ. 
 

Trending News