ರೋಷನ್ ಬೇಗ್ ಒಬ್ಬ ಈ ಕಾಲದ ಮೀರ್ ಸಾದಿಕ್: ಸಿದ್ದರಾಮಯ್ಯ ವಾಗ್ಧಾಳಿ

ಟಿಪ್ಪು ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿದರೂ ಅವರೊಬ್ಬ ದೇಶ ಮೆಚ್ಚುವ ಸ್ವಾತಂತ್ರ್ಯಹೋರಾಟಗಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Yashaswini V Yashaswini V | Updated: Dec 2, 2019 , 11:01 AM IST
ರೋಷನ್ ಬೇಗ್ ಒಬ್ಬ ಈ ಕಾಲದ ಮೀರ್ ಸಾದಿಕ್: ಸಿದ್ದರಾಮಯ್ಯ ವಾಗ್ಧಾಳಿ

ಬೆಂಗಳೂರು: ರೋಷನ್ ಬೇಗ್ ಒಬ್ಬ ಈ ಕಾಲದ ಮೀರ್ ಸಾದಿಕ್. ಇಂತಹ ಮೀರ್ ಸಾದಿಕ್‌ಗಳನ್ನು ರಾಜಕೀಯದಲ್ಲಿ ತಲೆ ಎತ್ತಲು ಬಿಡಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.

ಶಿವಾಜಿನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ರಿಜ್ವಾನ್ ಅರ್ಷದ್ ಅವರ ಪರ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಟಿಪ್ಪು ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿದರೂ ಅವರೊಬ್ಬ ದೇಶ ಮೆಚ್ಚುವ ಸ್ವಾತಂತ್ರ್ಯಹೋರಾಟಗಾರ. ಅದೇ ಟಿಪ್ಪುವಿನ ಅಸ್ಥಾನದಲ್ಲಿ ಮೀರ್ ಸಾದಿಕ್ ಎಂಬ ರಾಜದ್ರೋಹಿ, ಮಿತ್ರದ್ರೋಹಿ ಇದ್ದ. ರೋಷನ್ ಬೇಗ್(Roshan baig) ಒಬ್ಬ ಈ ಕಾಲದ ಮೀರ್ ಸಾದಿಕ್ ಎಂದು ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.

ರೋಷನ್ ಬೇಗ್ ಐಎಂಎ ಹಗರಣದಲ್ಲಿ ಒಬ್ಬ ಆರೋಪಿ. ಸಾವಿರಾರು ಅಮಾಯಕರ ದುಡ್ಡು ಮುಳುಗಿಸಿದ ಆ ಪ್ರಕರಣದಲ್ಲಿ ಜೈಲು ಪಾಲಾಗುತ್ತೇನೆ ಎಂಬ ಭಯದಿಂದ ಅವರು ಬಿಜೆಪಿ ಸೇರಿದ್ದಾರೆ. 'ಕ್ಷೇತ್ರದ ಜನತೆಗಾಗಿ ಬಿಜೆಪಿ ಜೊತೆ ಹೋದೆ' ಎನ್ನುವುದು ಅಪ್ಪಟ ಸುಳ್ಳು. ರೋಷನ್ ಬೇಗ ಆಗಾಗ ಬಣ್ಣ ಬದಲಾಸುವ ಗೋಸುಂಬೆ ಎಂದು ಉಪಚುನಾವಣಾ ಪ್ರಚಾರದ ವೇಳೆ ರೋಷನ್ ಬೇಗ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಮುಸ್ಲಿಮರಿಗೆ  ಚುನಾವಣೆಯಲ್ಲಿ ಟಿಕೆಟ್ ಕೊಡ್ಬೇಕಾದರೆ ಅವರು 10 ವರ್ಷ ಬಿಜೆಪಿ ಕಚೇರಿಯಲ್ಲಿ ಕಸ ಹೊಡೆಯಬೇಕು ಎಂದು ಈಶ್ವರಪ್ಪ ವಿಧಾನ ಪರಿಷತ್ ನಲ್ಲಿ ಹೇಳಿದ್ದರು. ಈ ಕಾರಣಕ್ಕಾಗಿಯೇ ರೋಷನ್ ಬೇಗ್‌ಗೆ ಟಿಕೆಟ್ ಕೊಟ್ಟಿಲ್ಲ. ಅವರು ಕಸಗುಡಿಸಲು ಈಗಷ್ಟೆ ಶುರು ಮಾಡಿದ್ದಾರೆ, 10 ವರ್ಷಗಳ ನಂತರ ಅವರಿಗೆ ಟಿಕೆಟ್ ಕೊಡ್ತಾರೆ ಎಂದು ಹೇಳಿದರು.