ವಿದ್ಯಾರ್ಥಿ ನಿಲಯಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 140 ಕೋಟಿ ರೂ. ವೆಚ್ಚದ ಯೋಜನೆ; ಡಿಸಿಎಂ ಗೋವಿಂದ ಎಂ ಕಾರಜೋಳ

ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ ಯುವತಿಯರನ್ನು ಉದ್ಯಮಶೀಲರನ್ನಾಗಿಸುವ ಸಮೃದ್ಧಿ ಯೋಜನೆಯ ಅನುಷ್ಠಾನಕ್ಕೆ 175 ಕೋಟಿ ರೂ. ಅನ್ನು ವಿನಿಯೋಗಿಸಲಾಗುತ್ತಿದೆ ಎಂದರು.   

Updated: Nov 8, 2019 , 08:42 PM IST
ವಿದ್ಯಾರ್ಥಿ ನಿಲಯಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 140 ಕೋಟಿ ರೂ. ವೆಚ್ಚದ ಯೋಜನೆ; ಡಿಸಿಎಂ ಗೋವಿಂದ ಎಂ ಕಾರಜೋಳ

ಬೆಂಗಳೂರು: ರಾಜ್ಯಾದ್ಯಂತ  ಪರಿಶಿಷ್ಟ ಜಾತಿ ಮತ್ತು ಪಂಗಡದ  ವಿದ್ಯಾರ್ಥಿ ನಿಲಯಗಳಲ್ಲಿ 140 ಕೋಟಿ ರೂ.ವೆಚ್ಚದ  ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಕ್ರಿಯಾಯೋಜನೆಯನ್ನು ಸಿದ್ದಪಡಿಸಲಾಗಿದ್ದು, 8 ದಿನಗಳೊಳಗೆ ಈ ಪ್ರಸ್ತಾವನೆಯು ಮಂಜೂರಾತಿಯಾಗಲು ಕ್ರಮಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ‌ಗೋವಿಂದ ಎಂ ಕಾರಜೋಳ ತಿಳಿಸಿದರು. 

ದೊಡ್ಡಬಳ್ಳಾಪುರದಲ್ಲಿಂದು ಸಮೃದ್ಧಿ ಯೋಜನೆಯ ಫಲಾನುಭವಿ  ಕು.ನಂದಿನಿ ಅವರಿಗೆ ಕಾರ್ಯಾದೇಶವನ್ನು ಹಸ್ತಾಂತರಿಸುವ ಮೂಲಕ  ಸಮೃದ್ಧಿ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ ಯುವತಿಯರನ್ನು ಉದ್ಯಮಶೀಲರನ್ನಾಗಿಸುವ ಸಮೃದ್ಧಿ ಯೋಜನೆಯ ಅನುಷ್ಠಾನಕ್ಕೆ 175 ಕೋಟಿ ರೂ. ಅನ್ನು ವಿನಿಯೋಗಿಸಲಾಗುತ್ತಿದೆ ಎಂದರು. 

ಮೊದಲನೇ ಹಂತದಲ್ಲಿ ಈಗಾಗಲೇ 233 ಫಲಾನುಭವಿಗಳಿಗೆ ಮೊದಲನೇ ಕಂತಿನ‌ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕೋಳಿ ಕುರಿಗಳ ಸಾಕಾಣಿಕೆ  ಯೋಜನೆಗಳಿಗಿಂತ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡಿ, ಸ್ವಯಂ ಉದ್ಯೋಗಗಳನ್ನು‌ ನೀಡುವಂತಹ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಅನುಷ್ಠಾನ ಗೊಳಿಸುತ್ತಿದೆ. ದಲಿತ ಸಮುದಾಯ ಯುವಕರು ಉನ್ನತ ಶಿಕ್ಣಣ ಪಡೆಯಬೇಕು. ವಿದ್ಯಾವಂತರು ಆಸಕ್ತಿಯಿಂದ ಈ ಯೋಜನೆಗಳನ್ನು ಆಯ್ಕೆ ಮಾಡಿಕೊಂಡು ಸ್ವಾವಭಿಗಳಾಗಬೇಕು. ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. 

ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ನಿಗಮಗಳು ನೀಡುವ ಸಾಲಸೌಲಭ್ಯಗಳ ಯೋಜನೆಗಳಿಗೆ ಬ್ಯಾಂಕುಗಳು ಸಾಲ ನೀಡದಿರುವುದು ಕಂಡು ಬಂದಿದೆ. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಬ್ಯಾಂಕರ್ಸ್ ಸಭೆಯಲ್ಲಿ ಈ‌ಕುರಿತು ಚರ್ಚಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಸೂಚನೆ ನೀಡಲಾಗಿದೆ. ಯಾವುದೇ ಸಮುದಾಯಗಳು ಆಚರಿಸುವ ಜಯಂತಿ, ಹಬ್ಬಗಳ ಸಂದರ್ಭದಲ್ಲಿ ಸೂಕ್ತ ಕಾನೂನು‌ಸುವ್ಯಸ್ಥೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರವು ನಿರ್ದೇಶಿಸಿದೆ ಎಂದರು. 

ನೆರೆ ಸಂತ್ರಸ್ತರಿಗೆ ಪರಿಹಾರ ಕಾಮಗಾರಿಗಳನ್ನು‌ ಸಮರೋಪಾದಿಯಲ್ಲಿ‌ ಕೈಗೊಳ್ಳಲಾಗುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ  870 ಗ್ರಾಮಗಳು ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 195 ಗ್ರಾಮಗಳು ಬಾದಿತಗೊಂಡಿವೆ. ತುರ್ತು ಪರಿಹಾರವಾಗಿ ಹತ್ತು ಸಾವಿರ ರೂ ನೀಡಲಾಗುತ್ತಿದೆ. ಶಾಶ್ವತ ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ನೀಡಲಾಗುತ್ತಿದೆ.‌ ಮೊದಲ ಕಂತಾಗಿ 1 ಲಕ್ಷ  ರೂ ನೀಡಲಾಗುತ್ತಿದೆ. 7.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಾಶವಾಗಿದ್ದು,  ಪ್ರತಿ ಹೆಕ್ಟರ್ ಬೆಳೆ ನಾಶಕ್ಕೆ ಎನ್ ಡಿ ಆರ್ ಎಫ್ ನಿಯಮದಡಿ‌ ನೀಡುವುದಕ್ಕಿಂತ‌ ಹತ್ತು ಸಾವಿರ ರೂ.ಅಧಿಕ ಪರಿಹಾರವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.

ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಂ ಮಾದರ್, ಡಿಸಿಎಂ ಅವರ ಆಪ್ತಕಾರ್ಯದರ್ಶಿ ವಿ.ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.