ನಾನು ಗೌರವದಿಂದ ತಲೆಬಾಗಿದ್ದ ಧರ್ಮ ಗುರುಗಳೆಂದರೆ ತೋಂಟದಾರ್ಯ ಶ್ರೀಗಳು- ದಿನೇಶ್ ಅಮೀನ್ ಮಟ್ಟು

 ಕನ್ನಡ ಮತ್ತು ಕರ್ನಾಟಕದ ಸಾಕ್ಷಿ ಪ್ರಜ್ಞೆಯಂತಿದ್ದ ಗದುಗಿನ ಶ್ರೀ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಗಳು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಈಗ ಶ್ರೀಗಳೊಂದಿಗಿನ ಒಡನಾಟದ ಬಗ್ಗೆ ಹಿರಿಯ ಪತ್ರಕರ್ತರಾದ ದಿನೇಶ್ ಅಮಿನ್ ಮಟ್ಟು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. 

Last Updated : Oct 20, 2018, 04:59 PM IST
ನಾನು ಗೌರವದಿಂದ ತಲೆಬಾಗಿದ್ದ ಧರ್ಮ ಗುರುಗಳೆಂದರೆ ತೋಂಟದಾರ್ಯ ಶ್ರೀಗಳು- ದಿನೇಶ್ ಅಮೀನ್ ಮಟ್ಟು title=
Photo:facebook

ಕನ್ನಡ ಮತ್ತು ಕರ್ನಾಟಕದ ಸಾಕ್ಷಿ ಪ್ರಜ್ಞೆಯಂತಿದ್ದ ಗದುಗಿನ ಶ್ರೀ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಗಳು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಈಗ ಶ್ರೀಗಳೊಂದಿಗಿನ ಒಡನಾಟದ ಬಗ್ಗೆ ಹಿರಿಯ ಪತ್ರಕರ್ತರಾದ ದಿನೇಶ್ ಅಮಿನ್ ಮಟ್ಟು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. 

"ಮೊದಲಬಾರಿ ನಾನು ಅತ್ಯಂತ ಗೌರವದಿಂದ ತಲೆಬಾಗಿದ್ದ ಧರ್ಮ ಗುರುಗಳೆಂದರೆ ಗದುಗಿನ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಗಳು. ಧಾರವಾಡದಲ್ಲಿ ಪ್ರಜಾವಾಣಿಗೆ ವರದಿಗಾರನಾಗಿದ್ದಾಗ ಅವರ ಸಂಪರ್ಕಕ್ಕೆ ಬಂದಿದ್ದ ನಾನು ಹಲವಾರು ಬಾರಿ ಅವರನ್ನು ಭೇಟಿ ಮಾಡಿದ್ದೇನೆ, ಮಠಕ್ಕೆ ಹೋಗಿದ್ದೇನೆ, ಸುದೀರ್ಘವಾಗಿ ಧರ್ಮ,ರಾಜಕೀಯ, ಸಂಸ್ಕೃತಿ ವಿಚಾರವಾಗಿ ಚರ್ಚಿಸಿ ಮಾರ್ಗದರ್ಶನ ಪಡೆದಿದ್ದೇನೆ.

ನನಗೆ ಈಗಲೂ ನೆನಪಿದೆ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿನ ರಾಷ್ಟ್ರಧ್ವಜಾರೋಹಣ ರಾಜಕೀಯ ತಿರುವು ಪಡೆದು ವಿವಾದವಾಗಿದ್ದ ದಿನಗಳಲ್ಲಿ ಧಾರವಾಡದ ಕಲಾಭವನದಲ್ಲಿ ಸಭೆಯೊಂದು ಏರ್ಪಾಡಾಗಿತ್ತು. ಪೇಜಾವರ ಮತ್ತು ಗದಗ ಮಠದ ಸ್ವಾಮೀಜಿಗಳು ಮುಖ್ಯ ಅತಿಥಿಗಳು. ತೋಂಟದಾರ್ಯ ಸ್ವಾಮೀಜಿಗಳನ್ನು ನಾನು ಮುಖತ: ಮೊದಲು ನೋಡಿದ್ದು ಅದೇ ದಿನ. ಸ್ವಾಮೀಜಿಗಳು ಭಾಷಣದಲ್ಲಿ ಈದ್ಗಾ ವಿವಾದ ಪ್ರಸ್ತಾಪಿಸುತ್ತಾ ‘’ಏನ್ರಿ, ಇದೆಲ್ಲ ಗಲಾಟೆ. ಒಂದು ಹೆಣ್ಣಿನ ಮಾನಮುಚ್ಚುವಷ್ಟೂ ಬಟ್ಟೆ ಇಲ್ಲದ ರಾಷ್ಟ್ರಧ್ವಜಕ್ಕಾಗಿ ಕಿತ್ತಾಡ್ತಿದ್ದಿರಲ್ಲಾ?’’ ಎಂದು ತಣ್ಣಗೆ ನಗುನಗುತ್ತಲೇ ಚಾಟಿಯೇಟಿನಂತಹ ಮಾತು ಹೇಳಿದ್ದರು. ಒಂದುಕ್ಷಣ ಪೇಜಾವರರು ಸೇರಿದಂತೆ ಸೇರಿದವರು ಬೆಚ್ಚಿ ಬಿದ್ದಿದ್ದರು.ಪೇಜಾವರರು ಅದಕ್ಕೆ ಪ್ರತಿಕ್ರಿಯಿಸದೆ ಮಾತು ತೇಲಿಸಿ ಬಿಟ್ಟಿದ್ದರು. 

ಧಾರವಾಡದಿಂದ ನನಗೆ ವರ್ಗವಾಣೆಯಾಗಿದ್ದಾಗ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭಕ್ಕೂ ಅವರೇ ಮುಖ್ಯ ಅತಿಥಿ (ಅದೇ ಚಿತ್ರ). ಆ ದಿನ ಎರಡು ವರ್ಷದ ನನ್ನ ಮಗಳು ಆಕೆಯ ಸಾಕು ಅವ್ವನಿಂದ ಕಲಿತಿದ್ದ ಯಾವುದೋ ವಚನಗಳ ಎರಡು ಸಾಲು ಹೇಳಿದಾಗ ಸ್ವಾಮೀಜಿಗಳು ಖುಷಿಪಟ್ಟಿದ್ದರು.

ನಡುವೆ ಅವರನ್ನು ಮುಖತ: ಭೇಟಿಯಾಗಿರಲೇ ಇಲ್ಲ. ಸುಮಾರು ಹತ್ತು ವರ್ಷಗಳ ನಂತರ ದೆಹಲಿಗೆ ಬಂದಿದ್ದರು. ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ನಾನು ಅವರಿಗೊಂದು ಪ್ರಶ್ನೆ ಕೇಳಿದ್ದೆ. ಅವರು ಅದಕ್ಕೆ ಉತ್ತರ ನೀಡುವ ಬದಲಿಗೆ ‘’ ಮಟ್ಟು ಅವರೇ, ಐಸಿರಿ ಹೆಂಗಿದ್ದಾಳೆ?’; ಎಂದು ಜೋರಾಗಿ ಎಲ್ಲರೆದುರು ಕೇಳಿಬಿಟ್ಟರು. ಸುಮಾರು ಹತ್ತು ವರ್ಷಗಳ ಹಿಂದೆ ನೋಡಿದ್ದ ಮಗುವಿನ ಹೆಸರು ನೆನಪಿಟ್ಟುಕೊಂಡಿದ್ದಾರಲ್ಲಾ, ಅದೂ ಸ್ವಾಮೀಜಿಗಳು ಎಂದು ನನಗೆ ಶಾಕ್ ಆಗಿತ್ತು. ಅದೇ ದಿನ ನನ್ನ ಮಗಳ ಹುಟ್ಟುಹಬ್ಬವಾಗಿತ್ತು. ಅದನ್ನು ಸಹಜವಾಗಿ ಹೇಳಿಬಿಟ್ಟೆ.

ಸಂಜೆ ಹೊತ್ತಿಗೆ ಸ್ವಾಮೀಜಿಗಳು ಮನೆಗೆ ಬರುತ್ತಿದ್ದಾರೆ ಎಂದು ಅವರ ಸಹಾಯಕನ ಪೋನ್ ಬಂತು. ಮಯೂರ್ ವಿಹಾರದಲ್ಲಿದ್ದ ನನ್ನ ಮನೆ ವಿಳಾಸ ಕೇಳಿಕೊಂಡು ಬಂದು ಮಗಳಿಗೆ ಆಶೀರ್ವಾದ ಮಾಡಿ ಒಂದು ಶಾಲು, ಮಣಿಸರ ಮತ್ತು ಒಂದಷ್ಟು ದುಡ್ಡು ಕೊಟ್ಟು ಹೋದರು. ಭಾವುಕನಾಗಿದ್ದ ನಾನು ಮೊದಲ ಬಾರಿ ಸ್ವಾಮೀಜಿಯವರ ಕಾಲಿಗೆ ನಮಸ್ಕರಿಸಿದ್ದೆ.

ದೆಹಲಿಯ ಕರೋಲ್ ಬಾಗ್ ನ ಜಾಟವ್ ಸಮುದಾಯಕ್ಕೆ ಸೇರಿದ ದಲಿತರು ಅವರ ಸಂಪರ್ಕಕ್ಕೆ ಬಂದ ನಂತರ ಹಲವಾರು ಬಾರಿ ದೆಹಲಿಗೆ ಬಂದಿದ್ದರು. ಅವರೆಲ್ಲ ಲಿಂಗಾಯತರಾಗಬೇಕೆಂಬ ಬಯಕೆ ವ್ಯಕ್ತಪಡಿಸಿದಾಗ ಅವರಿಗೆ ಲಿಂಗದೀಕ್ಷೆ ನೀಡಿದ್ದರು. ಅಷ್ಟಕ್ಕೆ ಸುಮ್ಮನಾಗದೆ ಅವರು ವಾಸಿಸುವ ಕೊಳೆಗೇರಿಗೆ ಭೇಟಿ ನೀಡಿ ಅಲ್ಲೊಂದು ಕಚೇರಿ ತೆರೆದು ಅಲ್ಲಿನ ನಿರುದ್ಯೋಗಿ ಯುವಕ-ಯುವತಿಯರು ಕಂಪ್ಯೂಟರ್ ತರಬೇತಿ ತರಗತಿಗಳನ್ನು ಪ್ರಾರಂಭಿಸಿದ್ದರು.

ಧಾರವಾಡದಲ್ಲಿದ್ದಾಗ ಅವರ ಹಲವಾರು ಭಾಷಣಗಳನ್ನು ವರದಿ ಮಾಡಿದ್ದೆ. ಅಚ್ಚಗನ್ನಡದಲ್ಲಿ ತಮಾಷೆಯಾಗಿಯೇ ಗಂಭೀರ ವಿಚಾರಗಳನ್ನು ಹೇಳುತ್ತಿದ್ದ ಸ್ವಾಮೀಜಿಗಳು ಡಾ.ಕಲಬುರ್ಗಿ ಅವರ ಹತ್ಯೆಯಿಂದ ಬಹಳ ನೊಂದುಕೊಂಡಿದ್ದರು. ಮಂಡಿನೋವಿನಿಂದಾಗಿ ಇತ್ತೀಚೆಗೆ ದೂರದ ಊರುಗಳಿಗೆ ಅಡ್ಡಾಡುವುದನ್ನು ಕಡಿಮೆ ಮಾಡಿದ್ದರು.

ಮೊನ್ನೆಯಷ್ಟೇ ಸ್ವಾಮೀಜಿಗಳ ಸಮೀಪವರ್ತಿಯಾಗಿದ್ದ ಕಳಸದ ಅವರು ದಸರಾ ಶುಭಾಶಯಗಳನ್ನು ತಿಳಿಸಲು ಪೋನ್ ಮಾಡಿದ್ದಾಗ ಸ್ವಾಮೀಜಿಗಳನ್ನು ಕೇಳಿದ್ದೇನೆಂದು ತಿಳಿಸಿ ಎಂದಿದ್ದೆ. ವಾರ್ತಾಭಾರತಿಯ ವಿಶೇಷಾಂಕಕ್ಕೆ ಅವರಿಂದ ಲೇಖನ ಬರೆಸಿ ಕೊಡಿ ಎಂದು ಅಲಿ ಹೇಳಿದ್ದು ನೆನಪಾಗಿ ಪೋನ್ ಮಾಡಬೇಕೆಂದಿದ್ದೆ. ಅಷ್ಟರಲ್ಲಿ….ಈ ಸಾವು. ಮನೆಹಿರಿಯನನ್ನು ಕಳೆದುಕೊಂಡಷ್ಟು ದು:ಖವಾಗಿದೆ".

Trending News