ಕಲಬುರಗಿ: ರೈತರಿಗಾಗಿ ಕೃಷಿ ಇಲಾಖೆಯಲ್ಲಿ ನೂತನವಾಗಿ ಸೆಕಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ(Secondary Agriculture Directorate)ವನ್ನು ದೇಶದಲ್ಲಿಯೇ ಪ್ರಥಮವಾಗಿ ಕರ್ನಾಟಕ ರಾಜ್ಯವು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಸೋಮವಾರ ಆಳಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ತಾಲೂಕು ಆಡಳಿತ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ’ ನೀಡುವ ಯೋಜನೆಯನ್ನು ಪ್ರಾರಂಭಿಸಿತು. ರೈತರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಜಾರಿಗೆ ತಂದಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ರೈತರಿಗಾಗಿ ನಿದೇಶನಾಲಯವನ್ನು ಪ್ರಾರಂಭಿಸಿಲಿದೆ ಎಂದು ಹೇಳಿದರು.
ಅಧಿಕಾರ ವಿಕೇಂದ್ರೀಕರಣ
ಆಳಂದ ತಾಲೂಕಿನ ಜನರಿಗೆ ತಾಲೂಕು ಆಡಳಿತ ಭವನ ವಿಧಾನಸೌಧವಿದ್ದಂತೆ. ಜನರ ಸಮಸ್ಯೆಗಳನ್ನು ಬಗೆಹರಿಸುವ, ಅವರ ಬೇಕು ಬೇಡಗಳನ್ನು ಈಡೇರಿಸವ ಆಡಳಿತದ ಕೇಂದ್ರ. ಅಧಿಕಾರದ ವಿಕೇಂದ್ರೀಕರಣದಲ್ಲಿ ಸಾಕಷ್ಟು ಅಧಿಕಾರವನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನೀಡಲಾಗಿದೆ. ಅಧಿಕಾರ ವಿಕೇಂದ್ರೀಕರಣದ ಮೂಲ ಉದ್ದೇಶ ಜನರ ಸುತ್ತಲೂ ಅಭಿವೃದ್ಧಿಯಾಗಬೇಕು. ಅಭಿವೃದ್ಧಿಗಾಗಿ ಜನ ಸುತ್ತುವಂತಾಗಬಾರದು. ರಾಜಕೀಯವಾಗಿ ಅಧಿಕಾರ ಕೊಟ್ಟರೂ, ಹಣಕಾಸಿನ ವಿಕೇಂದ್ರೀಕರಣ ಆಗಬೇಕು. ಆಗ ಮಾತ್ರ ಆಡಳಿತ ಜನರ ಕೈಯಲ್ಲಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯನಿರ್ವಹಿಸಲಿದೆ. ನಮ್ಮ ಸರ್ಕಾರ ಕೇವಲ ತಾಲೂಕು ಕಚೇರಿಗೆ ಸೀಮಿತವಾಗಿಲ್ಲ. ಪ್ರತಿಯೊಂದು ಮನೆಗೂ ಸರ್ಕಾರ ಸ್ಪಂದಿಸುತ್ತದೆ. 30ಕ್ಕೂ ಹೆಚ್ಚು ಸರ್ಕಾರಿ ಸೇವೆಗಳು ಜನಸೇವೆಕ ಯೋಜನೆಯ ಮೂಲಕ ಪ್ರತಿ ಮನೆಯನ್ನು ತಲುಪಲಿದೆ. ತನ್ಮೂಲಕ ಬಡವರಿಗೆ, ದೀನದಲಿತರಿಗೆ ಸೌಲಭ್ಯಗಳನ್ನು ತಲುಪಿಸಲು ಸಾಧ್ಯವಿದೆ. ಜನವರಿ 26ರಿಂದ ಜನಸೇವಕ(JanaSevaka) ಪ್ರಾರಂಭವಾಗಲಿದೆ ಎಂದರು.
ಇದನ್ನೂ ಓದಿ: ಮಿಸ್ಟರ್ ಡಿ.ಕೆ.ಶಿವಕುಮಾರ್ ಗೂಂಡಾಗಿರಿ ಬಿಡಿ: ಸಚಿವ ಅಶ್ವತ್ಥ್ ನಾರಾಯಣ ಎಚ್ಚರಿಕೆ
ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವ
ಪ್ರಜಾಪ್ರಭುತ್ವದಲ್ಲಿ ಜನರು ಕೇವಲ ಮತಗಳನ್ನು ಹಾಕುವುದಲ್ಲ, ಅವರು ಎಲ್ಲಾ ಯೋಜನೆಗಳ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವವಿದ್ದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರಲಿದೆ ಎಂದು ಸಿಎಂ ಬೊಮ್ಮಾಯಿ(Basavaraj Bommai) ಇದೇ ವೇಳೆ ತಿಳಿಸಿದರು.
ಬೆಳೆ ಪರಿಹಾರ
ಒಣಬೇಸಾಯಕ್ಕೆ 6,800ರೂ., ನೀರಾವರಿಗೆ 13,500 ರೂ. ಹಾಗೂ ತೋಟಗಾರಿಕಾ ಬೆಳೆಗಳಿಗೆ 18,000 ರೂ.ಗಳನ್ನು ಬೆಳೆಪರಿಹಾರ ರೂಪದಲ್ಲಿ ನೀಡಲಾಗುವುದು. ಕೇಂದ್ರ ಸರ್ಕಾರದ 6,800 ರೂ.ಗಳಿಗೆ ರಾಜ್ಯ ಸರ್ಕಾರವೂ ಅಷ್ಟೇ ಮೊತ್ತವನ್ನು ಸೇರಿಸಿ ಒಟ್ಟು 13,600 ರೂ.ಗಳನ್ನು ನೀಡಲಿದ್ದೇವೆ. 13,500ಕ್ಕೆ 11,000 ರೂ.ಗಳನ್ನು ಸೇರಿಸಿ ಒಟ್ಟು 25 ಸಾವಿರ ರೂ. ನೀರಾವರಿಗೆ ಹಾಗೂ ತೋಟಗಾರಿಕಾ ಬೆಳೆಗಳಿಗೆ 27 ಸಾವಿರ ರೂ.ಗಳನ್ನು ನೀಡುವ ತೀರ್ಮಾನ ಮಾಡಲಾಗಿದೆ ಎಂದರು. ರೈತರು ಸಂಕಷ್ಟದಲ್ಲಿದ್ದಾಗ ರೈತರ ಪರ ನಿಂತು ಜೀವಂತ ಸರ್ಕಾರವೆಂದು ನಾವು ನಿರೂಪಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಕರುನಾಡಲ್ಲಿ ‘ಕೊರೊನಾ’ ಸ್ಫೋಟ: ಒಂದೇ ದಿನ 2,479 ಕೇಸ್ ಕನ್ಫರ್ಮ್..!
4 ಕೆರೆಗಳಿಗೆ ಆರ್ಥಿಕ ಅನುಮೋದನೆ
ಆಳಂದ ತಾಲೂಕಿನಲ್ಲಿ ಸಣ್ಣ ನೀರಾವರಿಯಡಿ 4 ಕೆರೆಗಳಿಗೆ ಆರ್ಥಿಕ ಅನುಮೋದನೆ ನೀಡಲಾಗುವುದು ಎಂದು ಸಿಎಂ(Basavaraj Bommai) ಭರವಸೆ ನೀಡಿದ್ದಾರೆ. ಮುಖ್ಯರಸ್ತೆ ಅಗಲೀಕರಣವನ್ನು ನಗರೋತ್ಥಾನ ಯೋಜನೆಯಡಿ ಅಳವಡಿಸಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. 7 ಕೆರೆಗಳನ್ನು ತುಂಬುವ ಯೋಜನೆ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು. ಸಮಾರಂಭದಲ್ಲಿ ಸಚಿವ ಮುರುಗೇಶ್ ನಿರಾಣಿ, ಸಂಸದ ಉಮೇಶ್ ಜಾಧವ್, ಶಾಸಕರಾದ ಶುಭಾಶ್, ಆರ್.ಗುತ್ತೇದಾರ್, ರಾಜ್‍ಕುಮಾರ್ ತೇಲ್ಕೂರ್, ಶಶೀಲ್ ನಮೋಶಿ ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.