ಮಂಡ್ಯ/ನಾಗಮಂಗಲ: ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಹೇಳುವ ಮೂಲಕ ಉದ್ಧಟತನ ತೋರಿಸಿದ ಮಹಾರಾಷ್ಟ್ರ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗಮಂಗಲ ವಿಧಾನಸಭೆ ಕ್ಷೇತ್ರದಲ್ಲಿ ‘ಜೆಡಿಎಸ್ ಪಂಚರತ್ನ ರಥಯಾತ್ರೆ’ಯ ವೇಳೆ ಮಾತನಾಡಿರುವ ಅವರು,ಉದ್ಧವ್ ಠಾಕ್ರೆ ಹೇಳಿಕೆಗೆ ಕಿಡಿಕಾರಿದ್ದಾರೆ. ಸಾಮಾನ್ಯ ಪ್ರಜ್ಞೆ ಇರುವ ಯಾವೊಬ್ಬ ವ್ಯಕ್ತಿಯೂ ಹೀಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ನಾಯಕರ ಚಿತಾವಣೆಗೆ ತಿರುಗೇಟು ನೀಡುವ ಶಕ್ತಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇಲ್ಲ. ಈ ಬಿಜೆಪಿ ಸರ್ಕಾರಕ್ಕೆ ಬೆನ್ನು ಇಲ್ಲ, ಮೂಳೆನೂ ಇಲ್ಲ. ಬೆಳಗಾವಿ ವಿಷಯದಲ್ಲಿ ಧಮ್, ತಾಕತ್ ಅನ್ನು ಪ್ರಧಾನಿ ಮೋದಿ ಹತ್ತಿರ ತೋರಿಸಿ ಬನ್ನಿ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಎಚ್‍ಡಿಕೆ ನೇರ ಸವಾಲು ಹಾಕಿದರು.
ಇತ್ತೀಚಿನ ದಿನಗಳಲ್ಲಿ ಪುನಾ-ಮಹಾರಾಷ್ಟ್ರದ ಹಲವು ಪಕ್ಷಗಳು ಮತ್ತು ಸರ್ಕಾರದ ಜೊತೆಗೆ ಬಿಜೆಪಿ ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರ ಸೇರ್ಪಡೆಗೆ ಒತ್ತಾಯ ಮಾಡುತ್ತಿರುವುದು ದೊಡ್ಡ ಕುತಂತ್ರ. ಇದು ದೇಶದ ಒಕ್ಕೂಟದ ವ್ಯವಸ್ಥೆಯನ್ನೆ ಹಾಳು ಮಾಡುವಂತಹ ಅನಾಹುತ. ‘ಒಂದು ದೇಶ, ಒಂದು ಭಾಷೆ, ಒಂದು ದೇಶ, ಒಂದು ಚುನಾವಣೆ’ ಎನ್ನುವ ಬಿಜೆಪಿ ನಾಯಕರು ಬೆಳಗಾವಿಯನ್ನು ಲಪಟಾಯಿಸಿ ಮಹಾರಾಷ್ಟ್ರಕ್ಕೆ ಕೊಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಇದನ್ನೂ ಓದಿ: ಐಷಾರಾಮಿ ಕಾರು ಮಾರಿಸಿ ಕೊಡುವುದಾಗಿ ಪಡೆದು ವಂಚನೆ: ಖತರ್ನಾಕ್ ಕಿಲಾಡಿಯ ಬಂಧನ
ಗಡಿ ವಿಷಯದಲ್ಲಿ ಬಿಜೆಪಿ ಎರಡು ರೀತಿ ಮಾತನಾಡುತ್ತಿದೆ. ಮುಂಬಯಿಗೆ ಹೋದರೆ ಒಂದು ರೀತಿ, ಬೆಂಗಳೂರಿಗೆ ಬಂದರೆ ಇನ್ನೊಂದು ರೀತಿ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಸ್ವಲ್ಪ ಕಾಮನ್ ಸೆನ್ಸ್ ಇದ್ದವರು ಇಂತಹ ವಿಷಯಗಳನ್ನು ಇಟ್ಟುಕೊಂಡು ಪ್ರಚೋದನೆ ಮಾಡುವುದು ಸೂಕ್ತವಲ್ಲ. ಈಗಾಗಲೇ ಬೆಳಗಾವಿ ಕರ್ನಾಟಕದ ಸ್ವತ್ತು, ನಮ್ಮ ಅವಿಭಾಜ್ಯ ಅಂಗ. ಇಲ್ಲಿ ಯಾವುದೇ ವಿವಾದ ಇಲ್ಲ. ನಮ್ಮ ಮುಖ್ಯಮಂತ್ರಿ ಪದೇ ಪದೆ ಬೆಳಗಾವಿ ವಿವಾದ ಅಂತಾ ಪದ ಬಳಸಿದ್ದಾರೆ. ತಕ್ಷಣವೇ ಅವರು ವಿವಾದ ಎನ್ನುವ ಪದವನ್ನು ವಾಪಸು ಪಡೆಯಬೇಕು’ ಎಂದ ಎಚ್‍ಡಿಕೆ ಆಗ್ರಹಿಸಿದರು.
ಇದು ಬೆಳಗಾವಿ ವಿವಾದ ಅಲ್ಲ, ಬೆಳಗಾವಿ ವಿಷಯವಷ್ಟೆ. ಬೆಳಗಾವಿ ವಿಷಯವನ್ನು ಮಹಾರಾಷ್ಟ್ರದವರು ಎತ್ತಿಕೊಂಡಿದ್ದಾರೆ. ಅವರು ವಿವಾದ ಸೃಷ್ಟಿ ಮಾಡಿ ಕುತಂತ್ರ ಮಾಡಿದರೆ ನಾವು ಯಾಕೆ ವಿವಾದ ಅಂತಾ ಅನ್ಕೊಳ್ಳೋಣ? ಕರ್ನಾಟಕದ ಏಕೀಕರಣದಲ್ಲಿ ಬೆಳಗಾವಿ ಕರ್ನಾಟಕದ ಭಾಗ ಎಂದು ತೀರ್ಮಾನವಾಗಿದೆ. ಬೆಳಗಾವಿ ಇವತ್ತು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆ. ಅಪಾರ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದೇವೆ. ನೂರಾರು ಸಕ್ಕರೆ ಕಾರ್ಖಾನೆ ನಡೆಯುತ್ತಿದ್ದರೆ ಅದೆಲ್ಲ ಕರ್ನಾಟಕ ಕೊಟ್ಟಿರುವಂತ ಕೊಡುಗೆ. ಮಹಾರಾಷ್ಟ್ರದ ರಾಜಕೀಯ ಪಕ್ಷಗಳು ಬೆಳಗಾವಿಯ ಆರ್ಥಿಕ ಶಕ್ತಿ ಗಮನಿಸಿ ಲಪಟಾಯಿಸಲು ಹೊರಟಿವೆ. ಉದ್ಧವ್ ಠಾಕ್ರೆಯ ಉದ್ಧಟತನದ ಮಾತಿನ ಜಾಗಟೆಗೆ ರಾಜ್ಯ ಬಿಜೆಪಿ ಸರ್ಕಾರ ಡ್ರಮ್ ಹೊಡೆಯಲು ಹೊರಟಿದೆ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.
ಇದು ಬಿಜೆಪಿಯ ನಾಚಿಗೆಗೇಡಿನ ಕೆಲಸ. ಈ ದೇಶದಲ್ಲಿ ಒಕ್ಕೂಟದ ವ್ಯವಸ್ಥೆ, ಪ್ರಜಾಪ್ರಭುತ್ವ, ಸಂವಿಧಾನದ ಗೌರವ ಕಾಪಾಡಬೇಕಾದರೆ ಮಹಾರಾಷ್ಟ್ರದ ಸರ್ಕಾರ ಜವಾಬ್ದಾರಿಯುತವಾಗಿ ನಡೆಯುವುದನ್ನು ಕಲಿಯಬೇಕು. ಅಕ್ಕಪಕ್ಕದ ರಾಜ್ಯದಲ್ಲಿ ದ್ವೇಷ ಉಂಟು ಮಾಡಿ, ಸಂಘರ್ಷ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಅವರು ಮಹಾರಾಷ್ಟ್ರದವರು ಮಾಡುವ ಕುತಂತ್ರಕ್ಕೆ ಬಲಿಯಾಗಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.
ಇದನ್ನೂ ಓದಿ: "ಶೇ. 3ರಷ್ಟು ಮೀಸಲಾತಿ ಪಡೆಯಲು ಒಕ್ಕಲಿಗರೇನು ಭಿಕ್ಷುಕರಲ್ಲ"
ದೆಹಲಿಯಲ್ಲಿ ಇವರ ಡಬಲ್ ಎಂಜಿನ್ ಸರ್ಕಾರ ಕರ್ನಾಟಕದವರನ್ನು ಲೆಕ್ಕಕ್ಕೆ ಇಟ್ಟಿಲ್ಲ. 25 ಜನ ಲೋಕಸಭಾ ಸದಸ್ಯರಿದ್ದಾರೆ, ಅವರನ್ನು ಮೋದಿ, ಅಮಿತ್ ಶಾ ಎಲ್ಲಿ ಎಲ್ಲಿಟ್ಟಿದ್ದಾರೆ ಅನ್ನೋದು ಗೊತ್ತಿದೆ. ಧಮ್, ತಾಕತ್ ಬಗ್ಗೆ ಸಿಎಂ ಪ್ರತಿನಿತ್ಯ ಭಾಷಣ ಮಾಡ್ತಾರೆ. ಈ ವಿಷಯದಲ್ಲಿ ಧಮ್, ತಾಕತ್ ಅನ್ನು ಪ್ರಧಾನಿ ಹತ್ತಿರ ತೋರಿಸಿ ಬನ್ನಿ. ವೃಥಾ ಮಾತನಾಡುವುದನ್ನು ನಿಲ್ಲಿಸಿ. ಅಮಿತ್ ಶಾ ಅವರನ್ನು ಭೇಟಿಯಾಗಿ ನಿಮ್ಮ ಧಮ್, ತಾಕತ್ ಬಗ್ಗೆ ಹೇಳಿ ಎಂದು ಸಿಎಂ ಬೊಮ್ಮಾಯಿಗೆ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಮಹಾರಾಷ್ಟ್ರದ ವರ್ತನೆ ಅತ್ಯಂತ ಖಂಡನಿಯ. ಇದನ್ನು ಒಗ್ಗಟ್ಟಿನಿಂದ ಎದುರಿಸಬೇಕು. ಈ ಸರ್ಕಾರಕ್ಕೆ ಬೆನ್ನು ಇಲ್ಲ, ಮೂಳೆನೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಒಳೆಯ ಅವಕಾಶ ಅಂತಾ ಮಹಾರಾಷ್ಟ್ರ ದಬ್ಬಾಳಿಕೆ ಮಾಡ್ತಿದೆ. ಮಗು ಚಿವುಟಿ, ಅಳಿಸುವ ಕೆಲವನ್ನು ಬಿಜೆಪಿ ಸರ್ಕಾರ ಮಾಡ್ತಿದೆ ಎಂದು ಎಚ್‍ಡಿಕೆ ಆರೋಪ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಸದಸ್ಯ ಅಪ್ಪಾಜಿ ಗೌಡ, ಮನ್‍ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು ಇತರರು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.