ಬೆಂಗಳೂರು: 'ಕೇವಲ ಶೇ.3ರಷ್ಟು ಮೀಸಲಾತಿ ಪಡೆಯಲು ಒಕ್ಕಲಿಗರು ಭಿಕ್ಷುಕರಲ್ಲ. ಜನಸಂಖ್ಯೆ ಅನುಗುಣವಾಗಿ ಈ ಸಮುದಾಯಕ್ಕೆ ಶೇ.12 ರಷ್ಟು ಮೀಸಲಾತಿ ಸಿಗಬೇಕು. ಬೇರೆ ಸಮುದಾಯದವರು ತಮ್ಮ ಹಕ್ಕು ಕೇಳುವುದರಲ್ಲಿ ತಪ್ಪಿಲ್ಲ. ನಾವು ಅದನ್ನು ವಿರೋಧಿಸುವುದಿಲ್ಲ. ಒಕ್ಕಲಿಗರಿಗೆ ಸಿಗಬೇಕಾದ ಹಕ್ಕನ್ನು ಆಗ್ರಹಿಸುತ್ತಿದ್ದೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಜೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಹೇಳಿದ್ದಿಷ್ಟು;
' ಒಕ್ಕಲಿಗರಾರೂ ಭಿಕ್ಷುಕರಲ್ಲ. ಅವರು ಒಕ್ಕಲುತನ ಮಾಡಿಕೊಂಡು, ಅನ್ನದಾತರಾಗಿದ್ದಾರೆ. ಒಕ್ಕಲುತನ ಮಾಡುವವರು ಶ್ರಮಪಟ್ಟು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. 3 % ಮೀಸಲಿಗೆ ಯಾರೂ ಭಿಕ್ಷೆ ಬೇಡುತ್ತಿಲ್ಲ. ನಮ್ಮ ಸಮುದಾಯದ ಸ್ವಾಮೀಜಿಗಳ ಮುಖಂಡತ್ವದಲ್ಲಿ ಸಚಿವರಾದ ಅಶೋಕ್ ಅವರನ್ನು ಕರೆಸಿ ಅವರಿಗೆ ನಮ್ಮ ಮನವಿ ಸಲ್ಲಿಸಿದ್ದೇವೆ. ನಮ್ಮ ಸಮುದಾಯದ ಜನಸಂಖ್ಯೆ ಶೇ.15-16 ರಷ್ಟು ಇದ್ದರೂ ನಾವು ಶೇ.12 ರಷ್ಟು ಮೀಸಲಾತಿ ಕೇಳಿದ್ದೇವೆ. ಬೇರೆಯವರ ಮೀಸಲಾತಿಯನ್ನು ಕಿತ್ತುಕೊಂಡು ನಮಗೆ ಮೀಸಲಾತಿ ನೀಡುವುದು ಬೇಡ. ಬೇರೆಯವರಿಗೆ ಅನ್ಯಾಯ ಮಾಡಲು ನಾವು ಬಯಸುವುದಿಲ್ಲ. ಅಲ್ಪಸಂಖ್ಯಾತರಿಗೆ ಏನು ಸಿಗಬೇಕೊ ಸಿಗಲಿ, ವೀರಶೈವರು, ಪಂಚಮಸಾಲಿಗಳು, ಬ್ರಾಹ್ಮಣರು, ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗಗಳಿಗೆ ಏನು ಸಿಗಬೇಕೊ ಸಿಗಲಿ. ಅದಕ್ಕೆ ನಮ್ಮ ತಕರಾರಿಲ್ಲ. ನಮ್ಮ ಸಮಾಜದ ಜನಸಂಖ್ಯೆ ಆಧಾರದಲ್ಲಿ ನಾವು ಶೇ.12 ರಷ್ಟು ಕೇಳಿದ್ದು, ಸಚಿವರು ಸರ್ಕಾರಕ್ಕೆ ತಿಳಿಸಿ ಇದನ್ನು ನೀಡುವುದಾಗಿ ಹೇಳಿದ್ದರು. ಆದರೆ ಈಗ ಶೇ. 3 ರಷ್ಟು ಮೀಸಲಾತಿಗೆ ಏರಿಕೆ ಮಾಡಲು ನಮ್ಮ ಸ್ವಾಮಿಗಳನ್ನು ಒಪ್ಪಿಸುತ್ತೇವೆ ಎಂದು ಹೇಳಿದ್ದಾರೆ. ಶೇ.3 ರಷ್ಟು ಮೀಸಲಾತಿ ಪಡೆಯಲು ನಾವೇನು ಭಿಕ್ಷುಕರಲ್ಲ. ಶೇ.12 ರಷ್ಟು ಮೀಸಲಾತಿ ನಮ್ಮ ಹಕ್ಕು ನಾವದನ್ನು ಆಗ್ರಹಿಸುತ್ತೇವೆ.'
ಇದನ್ನೂ ಓದಿ :ಜನವರಿ 12 ರಂದು ಅವಳಿ ನಗರದಲ್ಲಿ ಪ್ರಧಾನ ಮಂತ್ರಿ ಮೋದಿಯಿಂದ ಯುವಜನೋತ್ಸವ ಉದ್ಘಾಟನೆ
ಕೋವಿಡ್ ನಿಯಮ ಪಾಲಿಸಿ ಬಸ್ ಯಾತ್ರೆ ಮಾಡಲಿ ಎಂಬ ಸಚಿವ ಸುಧಾಕರ್ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ' ಅವರು ಹೇಳಿದರೂ, ಹೇಳದಿದ್ದರೂ ನಾವು ಬಸ್ ಯಾತ್ರೆ ಮಾಡುತ್ತೇವೆ. ಎಸಿ ಹಾಕಿಕೊಳ್ಳಬಾರದು ಎಂದಾದರೆ, ಇವರ ಮನೆ, ಕಚೇರಿ ಹಾಗೂ ಕಾರಿನಲ್ಲಿ ಎಸಿ ನಿರ್ಬಂಧ ಮಾಡಲಿ. ಸುಮ್ಮನೆ ಜನರಿಗೆ ಭಯ ಹುಟ್ಟಿಸಬಾರದು. ಜನ ಈಗಾಗಲೇ 2 ವರ್ಷದ ಆಘಾತದಿಂದ ಸುಧಾರಿಸುತ್ತಿದ್ದಾರೆ. ಹಿಂದೆ ಸರ್ಕಾರ ಸಾಕಷ್ಟು ಜನರಿಗೆ ಸಹಕಾರ ಸಹಾಯ ಮಾಡಬೇಕಿದ್ದರೂ ಮಾಡಲಿಲ್ಲ. ಈಗ ಜನರನ್ನು ಭಯದ ವಾತಾವರಣಕ್ಕೆ ನೂಕುವುದು ಬೇಡ ' ಎಂದು ತಿಳಿಸಿದರು.
ಅವಧಿಪೂರ್ವ ಚುನಾವಣೆಯನ್ನು ಬಿಜೆಪಿ ತಳ್ಳಿಹಾಕಿದೆ ಎಂದು ಕೇಳಿದಾಗ, ' ಹಾಗಿದ್ದರೆ ಈ ವಿಚಾರವಾಗಿ ಅವರು ಅಧಿಕಾರಿಗಳ ಬಳಿ ಚರ್ಚೆ ಮಾಡಿದ್ದು ಯಾಕೆ? ಅಧಿಕಾರಿಗಳ ಜತೆ ಅವರು ಏನು ಚರ್ಚೆ ಮಾಡಿದ್ದಾರೆ?' ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮೊದಲ ಟಿಕೆಟ್ ಪಟ್ಟಿ ಯಾವಾಗ ಎಂದು ಕೇಳಿದಾಗ, ' ಸ್ಥಳೀಯ ನಾಯಕರುಗಳಿಗೆ ಡಿ.31ರ ಒಳಗಾಗಿ ಸಭೆ ಮುಕ್ತಾಯ ಮಾಡಿ ಎಂದು ಹೇಳಿದ್ದೇವೆ. ನಂತರ ಪರಿಷ್ಕೃತ ಪಟ್ಟಿ ನಮ್ಮ ಕೈ ಸೇರಲಿದೆ. ನಂತರ ಚುನಾವಣಾ ಸಮಿತಿ ಸಭೆ ಮಾಡಿ ಚರ್ಚೆ ಮಾಡಲಿದೆ. ನಾವು ಜ.15ರ ಗುರಿ ಇಟ್ಟುಕೊಂಡಿದ್ದು, ಅಷ್ಟರ ಒಳಗೆ ಅಭ್ಯರ್ಥಿ ಘೋಷಣೆ ಮಾಡುತ್ತೇವೆ' ಎಂದು ತಿಳಿಸಿದರು.
ಜ.2ರ ಮಹದಾಯಿ ಹೋರಾಟ ವಿಚಾರವಾಗಿ ಕೇಳಿದ ಪ್ರಶ್ನೆಗೆ, ' ಈ ವಿಚಾರವಾಗಿ ನಮ್ಮ ನಾಯಕರಾದ ಹೆಚ್.ಕೆ ಪಾಟೀಲ್ ಏನು ಹೇಳಿದ್ದಾರೋ ಅದೇ ಅಂತಿಮ ' ಎಂದು ತಿಳಿಸಿದರು.
ಜನಾರ್ದನ ರೆಡ್ಡಿ ಅವರ ಪಕ್ಷದಿಂದ ಯಾರಿಗೆ ಲಾಭ ಎಂದು ಕೇಳಿದ ಪ್ರಶ್ನೆಗೆ, ' ಮಗು ಹುಟ್ಟಲಿ, ಚಿಹ್ನೆ ಬರಲಿ. ಮಗು ಹುಟ್ಟಿದ ಬಳಿಕ ಮೂಗು ಚುಚ್ಚಬೇಕು, ನಾಮಕರಣ ಮಾಡಬೇಕು, ಇದೆಲ್ಲಾ ಆಗಬೇಕು. ನಮ್ಮ ಸಂಪರ್ಕದಲ್ಲಿ ಯಾರೂ ಇಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಸಾಧ್ಯ. ಯಾವುದನ್ನೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಯಾರಿಗೆ ಎಷ್ಟು ಶಕ್ತಿ ಇದೆಯೋ ಗೊತ್ತಿಲ್ಲ. ನಾನು ಯಾಕೆ ಬೇರೆಯವರ ಶಕ್ತಿ ಕುಂದಿಸಲು ಹೋಗಲಿ? ಕೇವಲ ಪತ್ರಿಕಾಗೋಷ್ಠಿಗೆ ತೀರ್ಮಾನಕ್ಕೆ ಬರುವುದಿಲ್ಲ. ನನಗೂ ಸಾಕಷ್ಟು ಅನುಭವಗಳು ಇವೆ. ದುಡ್ಡು ನೀಡುವ ವಿಚಾರವಾಗಿ ನನಗೆ ಗೊತ್ತಿರುವುದು, ಪ್ರತಾಪ್ ಸಿಂಹ, ಶ್ರೀನಿವಾಸ ಪ್ರಸಾದ್, ಯತ್ನಾಳ್ ಅವರ ಹೇಳಿಕೆಗಳು. ಅದರ ಬಗ್ಗೆ ನೀವು, ಅವರು, ಸಿಬಿಐ ಯಾರೂ ಮಾತನಾಡುತ್ತಿಲ್ಲ? ಯಾರಿಗೆ ನೊಟೀಸ್ ನೀಡಿದ್ದಾರೆ? ಈ ಬಗ್ಗೆ ಮಾಧ್ಯಮಗಳು ಮಾತನಾಡುತ್ತಿಲ್ಲ ' ಎಂದು ತಿಳಿಸಿದರು.
ಇದನ್ನೂ ಓದಿ :ಕೊರೊನಾ ಬಗ್ಗೆ ಗಾಬರಿಯಾಗಬೇಕಾಗಿಲ್ಲ-ಸಿಎಂ ಬೊಮ್ಮಾಯಿ
ರಾಹುಲ್ ಗಾಂಧಿ ಅವರು ದೇಶವನ್ನು ಒಗ್ಗೂಡಿಸಲು, ಜನ ಸಾಮಾನ್ಯರ ಬವಣೆಗಳಾದ ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದಾರೆ.
ರಾಜ್ಯದ ಗಡಿ ಭಾಗದ ತಾಲೂಕುಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂಬ ಉದ್ಧವ್ ಠಾಕ್ರೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, ' ನಮ್ಮ ರಾಜ್ಯದ ಗಡಿ ಅಂತಿಮವಾಗಿದೆ. ಅವರ ಹಳ್ಳಿ ನಮಗೆ ಬೇಡ, ನಮ್ಮ ಹಳ್ಳಿ ಅವರಿಗೆ ಬೇಡ. ಸುಮ್ಮನೆ ಅವರ ಮಂತ್ರಿ, ನಾಯಕರು ನಮ್ಮ ಗಡಿ ಪ್ರವೇಶ ಮಾಡದಿದ್ದರೆ ಸಾಕು. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು ಬೆಳಗಾವಿ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಜನ ವಲಸೆ ಹೋಗುವುದನ್ನು ತಪ್ಪಿಸುತ್ತೇವೆ. ಈಗಾಗಲೇ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಮಾಡಲಾಗಿದೆ. ಆದರೂ ಶಾಂತಿ ಭಂಗ ಮಾಡಲು ಯಾಕೆ ಪ್ರಯತ್ನಿಸುತ್ತಿದ್ದಾರೆ ಗೊತ್ತಿಲ್ಲ. ಅವರ ಮಂತ್ರಿಗಳು ಅತಿಕ್ರಮಣ ಮಾಡುವುದು ಸರ್ಕಾರದ ದೌರ್ಬಲ್ಯಕ್ಕೆ ಸಾಕ್ಷಿ. ಗೃಹ ಸಚಿವರು ಉಭಯ ರಾಜ್ಯಗಳ ಮುಖ್ಯಮತ್ರಿಗಳ ಜತೆ ಮಾಡಿದ ಚರ್ಚೆಗೆ ಕಿಮ್ಮತ್ತು ಇಲ್ಲದಂತೆ ಆಗಿದೆ. ಇದು ಬಿಜೆಪಿಯ ಆಂತರಿಕ ಯೋಜನೆ. ಮಹಾರಾಷ್ಟ್ರ ನಾಯಕರಾಗಲಿ, ಶಿವಸೇನೆ, ಬಿಜೆಪಿ, ಎನ್ ಸಿಪಿ ನಾಯಕರಾಗಲಿ, ಅವರು ಅವರ ಗಡಿ ಭಾಗದ ಬಗ್ಗೆ ನೋಡಿಕೊಳ್ಳಲಿ. ನಾವು ನಮ್ಮ ಗಡಿ ಭಾಗದ ಬಗ್ಗೆ ಗಮನಹರಿಸುತ್ತೇವೆ. ಒಂದು ಅಡಿ ಜಾಗವನ್ನು ಆಚೆ ಈಚೆ ಮಾಡುವುದಿಲ್ಲ. ನಾವು ಕನ್ನಡಿಗರ ಹಿತ, ನೆಲ, ಜಲ, ಸಂಸ್ಕೃತಿ ರಕ್ಷಣೆಗೆ ಬದ್ಧರಾಗಿದ್ದೇವೆ. ಇಲ್ಲಿರುವ ಮರಾಠಿಗರು ನಮ್ಮ ಸಹೋದರರು, ನಾವು ಅವರ ಜತೆ ಬದುಕುತ್ತೇವೆ, ಅವರ ಜತೆ ಸಾಯುತ್ತೇವೆ, ಅವರ ಹಿತವನ್ನೂ ಕಾಯುತ್ತೇವೆ ' ಎಂದು ತಿಳಿಸಿದರು.
ಸಾಧ್ವಿ ಪ್ರಜ್ಞಾ ಸಿಂಗ್ ಅವರು ನಿಮ್ಮ ಮನೆಯಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳಿ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ' ಈ ವಿಚಾರವಾಗಿ ದೇಶದ ಗೃಹ ಸಚಿವರು ಮಾತನಾಡಲಿ' ಎಂದು ತಿಳಿಸಿದರು.
ಖರ್ಗೆ ಅವರ ವಿರುದ್ಧ ಬಿಜೆಪಿ ನಾಯಕರು ಲೋಕಾಯುಕ್ತಕ್ಕೆ ನೀಡಿರುವ ದೂರಿನ ಬಗ್ಗೆ ಕೇಳಿದಾಗ, ' ಇದೆಲ್ಲವೂ ಚುನಾವಣೆ ಸಮಯದಲ್ಲಿ ಬಿಜೆಪಿ ಮಾಡುತ್ತಿರುವ ಗಿಮಿಕ್ ' ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.