ವಿಪಕ್ಷದ ಆಮಿಷಕ್ಕೆ ಬಲಿಯಾಗಿ ಡಿ.ಕೆಂಪಣ್ಣರಿಂದ ಸರ್ಕಾರದ ವಿರುದ್ಧ ವಿನಾಕಾರಣ ಆರೋಪ: ಬಿಜೆಪಿ

ರಾಜಕೀಯವಾಗಿ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಸುತ್ತಲಿನವರನ್ನು ಬಳಸಿ ಬಿಸಾಡುವುದು ಸಿದ್ದರಾಮಯ್ಯನವರಿಗೆ ಹೊಸದೇನಲ್ಲ. ಆ ದೊಡ್ಡ ಸಾಲಿಗೆ ಈಗ ಕೆಂಪಣ್ಣನವರ ಹೆಸರು ಸೇರಿಕೊಂಡಿದೆ ಎಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Dec 26, 2022, 07:04 PM IST
  • ವಿಪಕ್ಷದ ಆಮಿಷಕ್ಕೆ ಬಲಿಯಾಗಿ ಸರ್ಕಾರದ ವಿರುದ್ಧ ಡಿ.ಕೆಂಪಣ್ಣರಿಂದ ವಿನಾಕಾರಣ ಆರೋಪ
  • ಪ್ರಚಾರಕ್ಕಾಗಿ ಕೆಂಪಣ್ಣ ಪ್ರಧಾನಿ ಕಚೇರಿಗೆ ಪತ್ರ ಕೂಡ ಬರೆದರೂ ದಾಖಲೆ ಒದಗಿಸುವಲ್ಲಿ ವಿಫಲರಾದರು
  • ಸರ್ಕಾರದ ವಿರುದ್ಧದ ಕೆಂಪಣ್ಣನವರ ಆರೋಪ ಭ್ರಷ್ಟ ಕಾಂಗ್ರೆಸ್ಸಿನ ಟೂಲ್ ಕಿಟ್‍ನ ಭಾಗ ಎಂಬುದು ಸುಸ್ಪಷ್ಟ
ವಿಪಕ್ಷದ ಆಮಿಷಕ್ಕೆ ಬಲಿಯಾಗಿ ಡಿ.ಕೆಂಪಣ್ಣರಿಂದ ಸರ್ಕಾರದ ವಿರುದ್ಧ ವಿನಾಕಾರಣ ಆರೋಪ: ಬಿಜೆಪಿ title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ವಿರೋಧ ಪಕ್ಷದ ಆಮಿಷಕ್ಕೆ ಬಲಿಯಾಗಿ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿನಾಕಾರಣ ಆರೋಪ ಮಾಡುತ್ತಲೇ ಬಂದಿದ್ದರು. ಆದರೆ ದಾಖಲೆ ಎಲ್ಲಿ ಎಂದರೆ ಉತ್ತರವಿಲ್ಲ’ವೆಂದು ಬಿಜೆಪಿ ಕಿಡಿಕಾರಿದೆ. #CorruptCongress ಹ್ಯಾಶ್‍ಟ್ಯಾಗ್ ಬಳಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕೆಂಪಣ್ಣನವರು ಪ್ರಚಾರಕ್ಕಾಗಿ ಪ್ರಧಾನಿ ಕಚೇರಿಗೆ ಪತ್ರ ಕೂಡ ಬರೆದರು. ಆದರೆ ದಾಖಲೆ ಒದಗಿಸುವಲ್ಲಿ ವಿಫಲರಾದರು. ದಾಖಲೆ ಇದ್ದರಲ್ಲವೇ ಒದಗಿಸೋದು!’ ಎಂದು ಟೀಕಿಸಿದೆ.

‘ಇದೇ ಕೆಂಪಣ್ಣನವರು, ಬಾದಾಮಿ ಶಾಸಕರಾದ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಚರ್ಚಿಸಿ ಹೊರ ಬಂದು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಿದ್ದು ಜಗತ್ತಿಗೇ ತಿಳಿದಿದೆ. ಇದೂ ಕೂಡ ನಮ್ಮ ಪಕ್ಷದ ವಿರುದ್ಧ ಭ್ರಷ್ಟ ಕಾಂಗ್ರೆಸ್ಸಿನ ಟೂಲ್ ಕಿಟ್‍ನ ಭಾಗ ಎಂಬುದು ಸುಸ್ಪಷ್ಟ’ವೆಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ: Covid BF. 7 ನಿಯಂತ್ರಣ ಸಭೆ; ಸರ್ಕಾರ ಸಿದ್ಧತೆ ಹೇಗಿದೆ? ರಾಜಕೀಯ ಕಾರ್ಯಕ್ರಮಕ್ಕೆ ನಿರ್ಬಂಧನೆ ಇಲ್ಲ!

‘ಈಗ ಕೆಂಪಣ್ಣನವರು ಕೋರ್ಟ್ ಆದೇಶದ ಮೇಲೆ ಬಂಧನಕ್ಕೊಳಗಾಗಿದ್ದಾಗ ಸಿದ್ದರಾಮಯ್ಯನವರು ಇದು ದ್ವೇಷದ ರಾಜಕಾರಣವೆಂದು ಬೊಬ್ಬಿರಿಯುತ್ತಿದ್ದಾರೆ. ಕೆಂಪಣ್ಣನವರನ್ನು ಹರಕೆಯ ಕುರಿಯಂತೆ ಬಳಸಿಕೊಂಡ ಸ್ವತಃ ವಕೀಲರಾಗಿದ್ದ ಸಿದ್ದರಾಮಯ್ಯನವರಿಗೆ ಕಾನೂನು ಹೇಗೆ ಕೆಲಸ ಮಾಡುತ್ತದೆ ಎಂಬ ಅರಿವಿಲ್ಲದೇನಿಲ್ಲ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.

‘ರಾಜಕೀಯವಾಗಿ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಸುತ್ತಲಿನವರನ್ನು ಬಳಸಿ ಬಿಸಾಡುವುದು ಸಿದ್ದರಾಮಯ್ಯನವರಿಗೆ ಹೊಸದೇನಲ್ಲ. ಆ ದೊಡ್ಡ ಸಾಲಿಗೆ ಈಗ ಕೆಂಪಣ್ಣನವರ ಹೆಸರು ಸೇರಿಕೊಂಡಿದೆ. ಸದನದೊಳಗೆ ವೀರನಂತೆ ತೋಳು ತಟ್ಟುವ ಸಿದ್ದರಾಮಯ್ಯನವರು ಈ ಸುಳ್ಳು ಆರೋಪದಲ್ಲಿ ಹುರುಳಿಲ್ಲದ್ದನ್ನು ಕಂಡೇ ಹಿಂದೆ ನಿಂತರು. ನಮ್ಮ ಸರ್ಕಾರದ ವಿರುದ್ಧ ದಿನಬೆಳಗಾದರೆ ಸುಳ್ಳು ಆರೋಪ ಮಾಡುತ್ತಿರುವ ಸಿದ್ದರಾಮಯ್ಯನವರಿಗೆ, ಅವೆಲ್ಲವೂ ತಮಗೇ ತಿರುಗಿ ಬೀಳುತ್ತಿರುವುದು ಗಾಬರಿ ಹುಟ್ಟಿಸಿದೆ. ಪಿಎಸ್ಐ ನೇಮಕಾತಿ, ಶಿಕ್ಷಕರ ನೇಮಕಾತಿಯಲ್ಲಿನ ಭ್ರಷ್ಟಾಚಾರಗಳೆಲ್ಲವೂ ಅವರ ಆಡಳಿತದಲ್ಲೇ ಹುಟ್ಟಿಕೊಂಡ ಸಸಿ, ಈಗ ಅವರ ಕಾಲಿಗೇ ಮುಳ್ಳಾಗುತ್ತಿದೆ’ ಎಂದು ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ: ಇ-ತ್ಯಾಜ್ಯ ಸಂಗ್ರಹ ಅಭಿಯಾನದ ಮೂಲಕ ಗಮನ ಸೆಳೆದ ಆರ್ಕಿಡ್ಸ್‌ ಅಂತರಾಷ್ಟ್ರೀಯ ಶಾಲೆ

‘ಸ್ವತಃ ಪ್ರಧಾನಿ ಕಚೇರಿಯೇ ಕೆಂಪಣ್ಣನವರನ್ನು ಸಂಪರ್ಕಿಸಿ ದಾಖಲೆ ಕೇಳಿದಾಗಲಾದರೂ, ಈ ಸುಳ್ಳು ಆರೋಪ ಹೆಚ್ಚು ದಿನ ಬಾಳುವುದಿಲ್ಲ ಎಂಬುದನ್ನರಿಯಬೇಕಿತ್ತು. ಈಗ ಜೈಲು ಹಕ್ಕಿಗಳಿಂದಲೇ ತುಂಬಿದ ಪಕ್ಷದವರ ಮಾತು ಕೇಳಿ ಗಾಳಿಯಲ್ಲಿ ಗುಂಡು ಹಾರಿಸಿಕೊಂಡು ಓಡಾಡುತ್ತಿದ್ದರೆ ತಮಗೂ ಜೈಲೇ ಗತಿ ಎಂಬುದರಿವಾಗಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News