ಸಿದ್ದರಾಮಯ್ಯ ನನ್ನ ಮೇಲೆ ಸುಳ್ಳು ಆರೋಪ ಮಾಡಿ ಜೈಲಿಗೆ ಕಳುಹಿಸಿದರು: ಜನಾರ್ಧನ ರೆಡ್ಡಿ ಆರೋಪ

ಸಿದ್ದರಾಮಯ್ಯ ಅವರು ಅಕ್ರಮ ಗಣಿಗಾರಿಕೆ ನೆಪದಲ್ಲಿ ಬಳ್ಳಾರಿಗೆ ಪಾದಯಾತ್ರೆ ನಡೆಸಿ ನನ್ನ ಮೇಲೆ ಸುಳ್ಳು ಆರೋಪ ಮಾಡಿದರು. ನನ್ನನ್ನು ನಾಲ್ಕು ವರ್ಷ ಜೈಲಿಗೆ ಕಳುಹಿಸಿದರು ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. 

Last Updated : Oct 29, 2018, 02:16 PM IST
ಸಿದ್ದರಾಮಯ್ಯ ನನ್ನ ಮೇಲೆ ಸುಳ್ಳು ಆರೋಪ ಮಾಡಿ ಜೈಲಿಗೆ ಕಳುಹಿಸಿದರು: ಜನಾರ್ಧನ ರೆಡ್ಡಿ ಆರೋಪ title=

ಮೊಣಕಾಲ್ಮೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನನ್ನ ಮನೆಗಳ ಮೇಲೆ ದಾಳಿ ಮಾಡಿದಿದ್ದರು. ಆದರೆ ಇದರಿಂದ ಅವರಿಗೆ ಒಂದು ಪೈಸೆ ಅಕ್ರಮ ಹಣವಾದರೂ ಸಿಕ್ತಾ? ಎಂದು ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ಧನ ರೆಡ್ಡಿ ಪ್ರಶ್ನಿಸಿದರು. 

ಬಳ್ಳಾರಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ತಮ್ಮ ಸ್ನೇಹಿತ ಹಾಗೂ ಶಾಸಕ ಬಿ.ಶ್ರೀರಾಮುಲು ಜೊತೆ ಪ್ರಚಾರಕ್ಕೆ ಮುಂದಾಗಿರುವ ಜನಾರ್ಧನ್ ರೆಡ್ಡಿ, ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. 

ಸಿದ್ದರಾಮಯ್ಯ ಅವರು ಅಕ್ರಮ ಗಣಿಗಾರಿಕೆ ನೆಪದಲ್ಲಿ ಬಳ್ಳಾರಿಗೆ ಪಾದಯಾತ್ರೆ ನಡೆಸಿ ನನ್ನ ಮೇಲೆ ಸುಳ್ಳು ಆರೋಪ ಮಾಡಿದರು. ನನ್ನನ್ನು ನಾಲ್ಕು ವರ್ಷ ಜೈಲಿಗೆ ಕಳುಹಿಸಿದರು. ರೆಡ್ಡಿ ಕುಟುಂಬ ಅಕ್ರಮ ಗಣಿಗಾರಿಕೆ ನಡೆಸಿ ಒಂದು ಲಕ್ಷ ಕೋಟಿ ಹಣ ಲೂಟಿ ಮಾಡಿದೆ. ಅದನ್ನು ವಾಪಸ್ ತರುತ್ತೇವೆ ಎಂದು ಪ್ರಚಾರ ಮಾಡಿದರು. ಆದರೆ ಮುಖ್ಯಮಂತ್ರಿ ಆದ ನಂತರ ಎಷ್ಟು ಹಣ ಜಪ್ತಿ ಮಾಡಿದ್ದೀರಿ? ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. 

ನನ್ನ ಹೆಸರಿನಲ್ಲಿ ಆನಂದ್ ಸಿಂಗ್ ಮತ್ತು ನಾಗೇಂದ್ರ ಅಕ್ರಮ ಗಣಿಗಾರಿಕೆ ನಡೆಸಿದ್ದರು. ಈ ಪ್ರಕರಣದಲ್ಲಿ ಅವರೇ ಪ್ರಮುಖ ಆರೋಪಿಗಳು. ನಿಮ್ಮ ಎಡ-ಬಲದಲ್ಲಿ ಆನಂದ್ ಸಿಂಗ್ ಮತ್ತು ನಾಗೇಂದ್ರ ಅವರನ್ನು ಕೂರಿಸಿಕೊಂಡು ನನ್ನ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಮಾಡಿದ್ದೀರಿ. ಸಿದ್ದರಾಮಯ್ಯ ಅವರೇ ನಿಮಗೆ ಮಾನ ಮರ್ಯಾದೆ ಇದೆಯೇ? ಎಂದು ಕರ್ನಾಟಕ ರಾಜ್ಯದ ಜನರ ಪರವಾಗಿ ಕೇಳಬೇಕಾಗಿದೆ ಎಂದು ರೆಡ್ಡಿ ಹೇಳಿದರು.

ಲಿಂಗಾಯತ - ವೀರಶೈವ ಧರ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದನ್ನು ಒಡೆಯುವ ಪ್ರಯತ್ನವನ್ನು ಕಾಂಗ್ರೆಸ್​ ಪಕ್ಷ ಮಾಡಿತು. ಭಗವಂತನ ಶಾಪದಿಂದ ಪಕ್ಷ ಅಧಿಕಾರ ಕಳೆದುಕೊಳ್ಳುವಂತೆ ಆಗಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಸಚಿವ ಡಿ.ಕೆ. ಶಿವಕುಮಾರ್​ ಈಗ ಮನಸಾಕ್ಷಿಯಿಂದ ಮಾತನಾಡುತ್ತಿದ್ದಾರೆ. ಈಗ ಈ ಕುರಿತು ಪಶ್ಚಾತಾಪ ವ್ಯಕ್ತಪಡಿಸುತ್ತಿರುವ ನಿಮಗೆ ಆತ್ಮಸಾಕ್ಷಿ ಇದ್ದಿದ್ದರೆ, ಅವತ್ತೆ ರಾಜೀನಾಮೆ ನೀಡಿ ಹೊರ ಬಂದಿದ್ದರೆ ಶಹಬಾಸ್ ಎನ್ನುತ್ತಿದ್ದೆವು ಎಂದು ಜನಾರ್ಧನ ರೆಡ್ಡಿ ಕುಟುಕಿದರು.

ಮುಂದುವರೆದು ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಬಳ್ಳಾರಿಯನ್ನು ಸರ್ವನಾಶ ಮಾಡಿದ್ದಾರೆ. ಬಳ್ಳಾರಿ ಅಭಿವೃದ್ಧಿಗೆ ಸಿದ್ದರಾಮಯ್ಯ ಮಾಡಿರುವುದಾದರೂ ಏನು ಎಂಬುದನ್ನು ಅಂಕಿ ಅಂಶಗಳ ಮೂಲಕ ಮುಂದಿಡಲಿ. ಈ ಬಗ್ಗೆ ಬಹಿರಂಗ ಚರ್ಚೆ ನಡೆಸಲಿ ಎಂದು ಸವಾಲು ಹಾಕಿದರು.

Trending News