ಬೆಂಗಳೂರು: ನೋಂದಣಿ ಪ್ರಕ್ರಿಯೆಯಲ್ಲಿ ನಾಗರೀಕ ಸೇವೆಯನ್ನು ಮತ್ತಷ್ಟು ಸರಳ ಮತ್ತು ಜನಸ್ನೇಹಿಗೊಳಿಸುವ ಉದ್ದೇಶದಿಂದ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ-2024 ಮಂಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಬುಧವಾರ ವಿಧಾನಸಭೆಯಲ್ಲಿ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ-2024 ಅನ್ನು ಮಂಡಿಸಿ ಮಾತನಾಡಿದ ಅವರು, “ನೋಂದಣಿ ಕಚೇರಿಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ಎರಡು ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ. ಆ ಪೈಕಿ ಮೊದಲ ತಿದ್ದುಪಡಿ ಆಸ್ತಿ ಮಾರಾಟಗಾರರು ಹಾಗೂ ಕೊಳ್ಳುವವರು ಇಬ್ಬರ ಉಪಸ್ಥಿತಿಯೂ ಇಲ್ಲದೆ ತಾವಿದ್ದಲ್ಲಿದಂಲೇ ತಾಂತ್ರಿಕವಾಗಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಮುಂದುವರೆದು, “ಈ ಹಿಂದೆ ಉಪ ನೋಂದಣಾಧಿಕಾರಿ ಕಚೇರಿಗೆ ಎರಡೂ ಕಡೆಯವರ ಉಪಸ್ಥಿತಿ ಅನಿವಾರ್ಯವಾಗಿತ್ತು. ಹೀಗಾಗಿ ಸರ್ಕಾರಿ ಕಚೇರಿಯಲ್ಲಿ ಜನಸಂದಣಿ ಹೆಚ್ಚಾಗಿತ್ತು. ಎಲ್ಲರಿಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಅಸಾಧ್ಯವಾಗಿತ್ತು. ಹೀಗಾಗಿ ಜನಸಾಮಾನ್ಯರು ಅನಗತ್ಯವಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ಓಡಾಡುವುದನ್ನು ತಪ್ಪಿಸುವ ಸಲುವಾಗಿ ತಾಂತ್ರಿಕ ನೋಂದಣಿಗೆ ಅಂಕಿತ ಹಾಕಲಾಗಿದೆ.
ಇದನ್ನೂ ಓದಿ: ಪ್ರಧಾನಮಂತ್ರಿ ಮೋದಿಯವರಿಂದ ಗಂಗಾವತಿ ಕೇಂದ್ರಿಯ ವಿದ್ಯಾಲಯ ಲೋಕಾರ್ಪಣೆ
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ), ಕರ್ನಾಟಕ ಹೌಸಿಂಗ್ ಬೋರ್ಡ್, ಸ್ಲಂ ಬೋರ್ಡ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಂತಹ ನಂಬಿಕಾರ್ಹ ಮೂಲಗಳ ಸಹಾಯದಿಂದ ನಾಗರೀಕರು ತಾಂತ್ರಿಕವಾಗಿಯೇ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು. ಈ ಹೊಸ ಮಾದರಿ ಈಗಾಗಲೇ ಮಹಾರಾಷ್ಟ್ರದಲ್ಲಿ ಯಶಸ್ವಿಯಾಗಿದ್ದು, ಕರ್ನಾಟಕದಲ್ಲೂಸಹ ಜನರಿಗೆ ಉತ್ತಮ ಆಡಳಿತ ನೀಡಲು ಸಹಕಾರಿಯಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪೇಪರ್ ಖಾತಾ ನೋಂದಣಿಗೆ ತಡೆ:
ನೋಂದಣಿ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ಹಣ ಸೋರಿಕೆಯನ್ನು ತಡೆಯುವ ಸಲುವಾಗಿ ಪೇಪರ್ ಖಾತಾ ನೋಂದಣಿಗೆ ತಡೆಯೊಡ್ಡಲು ವಿಧೇಯಕದಲ್ಲಿ ತಿದ್ದುಪಡಿ ತರಲಾಗಿದೆ ಎಂದು ಸದನದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಸದನಕ್ಕೆ ಈ ಕುರಿತು ಮಾಹಿತಿ ನೀಡಿದ ಅವರು,“ನಗರ ಭಾಗದಲ್ಲಿ ಪೇಪರ್ ಖಾತಾ ಮೂಲಕವೂ ನೋಂದಣಿ ನಡೆಸಲಾಗುತ್ತಿದೆ. ಅನೇಕ ಪ್ರಕರಣಗಳಲ್ಲಿ ನಕಲಿ ಪೇಪರ್ ಖಾತಾ ಬಳಸಿ ನೋಂದಣಿ ಮಾಡುತ್ತಿರುವುದು ತಿಳಿದುಬಂದಿದೆ. ಅಲ್ಲದೆ, ಈ ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ರೆವೆನ್ಯೂ ಲೇಔಟ್‌ಗಳಲ್ಲಿ ಮೂಲ ಮಾರ್ಗಸೂಚಿ ದರವನ್ನೇ ಇಳಿಸಿ ನೋಂದಣಿ ಮಾಡಲಾಗಿತ್ತು. ಪರಿಣಾಮ ಸರ್ಕಾರಕ್ಕೆ 400 ಕೋಟಿ ರೂ. ನಷ್ಟ ಉಂಟಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸಿದ್ದರಾಮಯ್ಯನವರು 28 ಜನ ಉಪನೋಂದಣಾಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶಿಸಿದ್ದರು. ಆದರೆ, ವಿಚಾರಣೆ ನಡೆಸಿದ್ದ ಸಮಿತಿ, ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ನಿಯಮ ಉಲ್ಲಂಘನೆ ನಡೆದಿರುವುದು ಕಂಡುಬಂದಿಲ್ಲ ಎಂದು ವರದಿ ನೀಡಿದ್ದರು. ಪರಿಣಾಮ ಎಲ್ಲಾ 28 ಜನ ಉಪ ನೋಂದಣಾಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಲಾಗಿತ್ತು” ಎಂದು ಅವರು ವಿಷಾದಿಸಿದರು.
ಇದನ್ನೂ ಓದಿ: ಸಿದ್ಧಗಂಗಾ ಮಠದಿಂದ BCM ಹಾಸ್ಟೆಲ್‌ಗಳಿಗೆ ಅಕ್ಕಿ ಸಾಲ ಕೇಸ್
ಮುಂದುವರೆದು, “ಇಂತಹ ಪ್ರಕರಣಗಳಲ್ಲಿ ಉಪ ನೋಂದಣಾಧಿಕಾರಿಯನ್ನು ಅಮಾನತು ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಏಕೆಂದರೆ ಅವರು ಒಂದೇ ದಿನದಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ. ಪರಿಣಾಮ ಸರ್ಕಾರದ ಮರ್ಯಾದೆ ಹರಾಜಾಗುತ್ತದೆ. ಹೀಗಾಗಿ ಸಮಸ್ಯೆಯ ಮೂಲವನ್ನು ಹುಡುಕಿ ಅದಕ್ಕೆ ಚಿಕಿತ್ಸೆ ನೀಡಬೇಕಿದೆ. ಇದೇ ಕಾರಣಕ್ಕೆ ವಿಧೇಯಕದಲ್ಲಿ ಮತ್ತೊಂದು ತಿದ್ದುಪಡಿಯನ್ನು ತರಲಾಗಿದೆ.
ಇನ್ನು ಮುಂದೆ ಇ-ಆಸ್ತಿ ಮೂಲಕ ಖಾತೆ ಆಗಿದ್ದರೆ ಮಾತ್ರ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೌಸಿಂಗ್ ಬೋರ್ಡ್ ಹಾಗೂ ಕಾವೇರಿ ಡೇಟಾಬೇಸ್‌ನಿಂದ ಅಸಲಿ ಖಾತಾ ಪರಿಶೀಲನೆ ನಡೆಸಿದ ನಂತರವೇ ನೋಂದಣಿ ಮುಂದುವರೆಯಲಿದೆ. ಆ ಮೂಲಕ ಇ-ಖಾತಾವನ್ನು ನೀಡಲಾಗುವುದು. ಇಂತಹ ಕ್ರಮಗಳಿಂದ ಅಕ್ರಮಗಳಿಗೂ ತಡೆಯೊಡ್ಡಿದಂತಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.