ಬೆಂಗಳೂರು: ನೂತನ ಸಚಿವರು, ಪ್ರವಾಹ ಪೀಡಿತ ಜಿಲ್ಲೆಗಳ ಪ್ರವಾಸ ಮತ್ತು ಪರಿಶೀಲನೆ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸಂಪುಟ ವಿಸ್ತರಣೆಯ ನಂತರ ನಡೆದ ಔಪಚಾರಿಕ ಸಚಿವ ಸಂಪುಟ ಸಭೆಯಲ್ಲಿ ನಿರ್ದೇಶನ ನೀಡಿದರು.
ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರ ನೋವಿಗೆ ಸ್ಪಂದಿಸುವುದು ನಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಎರಡು ದಿನಗಳ ಕಾಲ ಜಿಲ್ಲಾ ಪ್ರವಾಸ ಕೈಗೊಂಡು ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಪರಿಶೀಲನಾ ಸಭೆ ನಡೆಸುವುದಲ್ಲದೆ ಪ್ರವಾಹದಿಂದ ತೀವ್ರ ತೊಂದರೆಯಾಗಿರುವ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತರೊಂದಿಗೆ ವಿಚಾರ ವಿನಿಮಯ ಮಾಡಿ, ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.
ಶೀಘ್ರದಲ್ಲಿಯೇ ಖಾತೆ ಹಂಚಿಕೆ ಮತ್ತು ಜಿಲ್ಲಾ ಉಸ್ತುವಾರಿಯ ಹೊಣೆಗಾರಿಕೆಯನ್ನು ನಿರ್ಧರಿಸಲಾಗುವುದು. ಅಷ್ಟರಲ್ಲಿ ಭೀಕರ ಪ್ರವಾಹ ಪರಿಸ್ಥಿತಿಗೆ ಒಳಗಾಗಿರುವ ಸಮಸ್ಯೆಗಳ ಅಧ್ಯಯನ ಕೈಗೊಂಡು ಪರಿಹಾರೋಪಾಯಗಳ ವರದಿ ಸಿದ್ಧಪಡಿಸಿ, ಮುಂದಿನ ಸಚಿವ ಸಂಪುಟ ಸಭೆಯೊಳಗೆ ಅನುಷ್ಠಾನಯೋಗ್ಯ ಕಾರ್ಯತಂತ್ರ ರೂಪಿಸುವಂತೆ ಎಲ್ಲ ಸಚಿವರಿಗೆ ಸೂಚಿಸಿದ ಮುಖ್ಯಮಂತ್ರಿಗಳು, ಕರ್ನಾಟಕವನ್ನು ಅಭಿವೃದ್ಧಿಯೆಡೆಗೆ ಮುನ್ನಡೆಸಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಂಡಸ್ಪೂರ್ತಿಯೊಂದಿಗೆ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಪ್ರವಾಹಪೀಡಿತ ಜಿಲ್ಲೆಗಳ ಉಸ್ತುವಾರಿ:
* ಬೆಳಗಾವಿ - ಲಕ್ಷಣ ಸವದಿ
* ಚಿಕ್ಕೋಡಿ (ಬೆಳಗಾವಿ) - ಶಶಿಕಲಾ ಜೊಲ್ಲೆ
* ಬಾಗಲಕೋಟೆ - ಕೆ.ಎಸ್.ಈಶ್ವರಪ್ಪ
* ವಿಜಯಪುರ - ಗೋವಿಂದ ಕಾರಜೋಳ
* ಹಾವೇರಿ - ಬಸವರಾಜ ಬೊಮ್ಮಾಯಿ
* ಧಾರವಾಡ - ಜಗದೀಶ ಶೆಟ್ಟರ್
* ಉತ್ತರ ಕನ್ನಡ
* ಗದಗ - ಸಿ. ಸಿ.ಪಾಟೀಲ್
* ಕೊಪ್ಪಳ
* ಬಳ್ಳಾರಿ - ಶ್ರೀರಾಮುಲು
* ರಾಯಚೂರು
* ಯಾದಗಿರಿ - ಶ್ರೀರಾಮುಲು ಮತ್ತು ಪ್ರಭುಚೌಹಾಣ್
* ಚಿಕ್ಕಮಗಳೂರು - ಸಿ.ಟಿ.ರವಿ
* ಹಾಸನ - ಜೆ.ಸಿ. ಮಾಧುಸ್ವಾಮಿ
* ಕೊಡಗು - ಎಸ್.ಸುರೇಶ್ ಕುಮಾರ್
* ಮೈಸೂರು - ಆರ್.ಅಶೋಕ್
* ಚಾಮರಾಜನಗರ - ವಿ.ಸೋಮಣ್ಣ
* ದಕ್ಷಿಣ ಕನ್ನಡ
* ಉಡುಪಿ - ಕೋಟ ಶ್ರೀನಿವಾಸ್ ಪೂಜಾರಿ