ಮತ್ತೊಂದು ಬೈಕ್ ರ್ಯಾಲಿಗೆ ತಯಾರಾದ ಬಿಜೆಪಿ

ಕಾಂಗ್ರೇಸ್ ನ ಮನೆ-ಮನೆ ಪ್ರಚಾರಕ್ಕೆ, ಬಿಜೆಪಿಯ ಬೈಕ್ ರ್ಯಾಲಿ ಟಾಂಗ್.

Last Updated : Sep 25, 2017, 06:04 PM IST
ಮತ್ತೊಂದು ಬೈಕ್ ರ್ಯಾಲಿಗೆ ತಯಾರಾದ ಬಿಜೆಪಿ title=
ಸಾಂದರ್ಭಿಕ ಚಿತ್ರ

ನವ ದೆಹಲಿ: ಮಂಗಳೂರು ಚಲೋ ಬೈಕ್ ರ್ಯಾಲಿ ವಿಫಲವಾದ ಬೆನ್ನಲ್ಲೇ ಮತ್ತೊಂದು ಬೈಕ್ ರ್ಯಾಲಿ ನಡೆಸಲು ರಾಜ್ಯ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಈ ಮೂಲಕ ಕಾಂಗ್ರೇಸ್ ಆರಂಭಿಸಿರುವ ಮನೆ ಮನೆ ಪ್ರಚಾರಕ್ಕೆ ಟಾಂಗ್ ನೀಡಲು ಬಿಜೆಪಿ ಪ್ರಯತ್ನಿಸುತ್ತಿದೆ. 

ಭಾನುವಾರ ರಾತ್ರಿ ನವ ದೆಹಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ದೇಕರ್ ನಿವಾಸದಲ್ಲಿ ನಡೆಸಲಾದ ಕೋರ್ ಕಮಿಟಿ ಸಭೆಯಲ್ಲಿ ಮತ್ತೊಂದು ಬೈಕ್ ರ್ಯಾಲಿ ನಡೆಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಅಕ್ಟೋಬರ್ 2 ರಂದು ಕರ್ನಾಟಕ ಪರಿವರ್ತನಾ ರ್ಯಾಲಿ ಆರಂಭಿಸಲು ಯೋಜಿಸಿದ್ದು, ಪರಿವರ್ತನಾ ಯಾತ್ರೆಯನ್ನು ಬೆಂಗಳೂರಿನಿಂದ ಆರಂಭಿಸುವ ಅಭಿಲಾಷೆಯನ್ನು ಬಿಜೆಪಿ ನಾಯಕರು ವ್ಯಕ್ತಪಡಿಸಿದರು. 

ಅಕ್ಟೋಬರ್ 2 ರಂದು ಸುಮಾರು ಒಂದು ಲಕ್ಷದಷ್ಟು ಬೈಕ್ಗಳನ್ನು ಬೀದಿಗಿಳಿಸುವ ಇರಾದೆ ಹೊಂದಿರುವ ಬಿಜೆಪಿಕೆ ರಾಜ್ಯ ಸರ್ಕಾರದ ಗ್ರೀನ್ ಸಿಗ್ನಲ್ ದೊರೆಯುವುದೇ ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡತೊಡಗಿದೆ. ಬೈಕ್ ರ್ಯಾಲಿ ಮೂಲಕ ಬಲ ಪ್ರದರ್ಶನ ಮಾಡಬೇಕು ಎಂಬುದು ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ. ಒಂದು ವೇಳೆ ಬೈಕ್ ರ್ಯಾಲಿಗೆ ಸಮ್ಮತಿ ದೊರೆತರೆ ಬೆಂಗಳೂರಿನಿಂದ ತುಮಕೂರಿನವರೆಗೂ ಮೊದಲ ಹಂತದ ಪರಿವರ್ತನಾ ಯಾತ್ರೆ ನಡೆಸಲು ಬಿಜೆಪಿ ತೀರ್ಮಾನಿಸಿದ್ದು, ಮಾರ್ಗದ ಬಗ್ಗೆ ಅಂತಿಮ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ. ಉತ್ತರ ಪ್ರದೇಶದ ಚುನಾವಣಾ ಮಾದರಿಯಲ್ಲೇ ರಾಜ್ಯದಲ್ಲೂ ಚುನಾವಣಾ ಪ್ರಚಾರಕ್ಕೆ ಬೈಕ್ ಬಳಸಿಕೊಳ್ಳಲು ನಿರ್ಧರಿಸಿದ್ದು, ಬೈಕ್ ರ್ಯಾಲಿಯಿಂದ ಕರ್ನಾಟಕದಲ್ಲಿ ಬಿಜೆಪಿಯಾ ಕಮಲ ಅರಳುವುದೇ ಎಂಬುದನ್ನು ಕಾದು ನೋಡಬೇಕಿದೆ.

Trending News