ಬೆಂಗಳೂರು: ಬಡವರಿಗೆ, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಸಿಗಲಿ ಎಂಬ ದೃಷ್ಟಿಯಿಂದ ಈ ಕೆಪಿಎಂಇ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ. ಮಸೂದೆಯ ಹಿಂದೆ ಖಾಸಗಿ ವೈದ್ಯರಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಖಾಸಗಿ ವೈದ್ಯರು ನಮ್ಮ ಶತ್ರುಗಳೂ ಅಲ್ಲ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ.
ಸರ್ಕಾರ ಜಾರಿಗೊಳಿಸಲು ತೀರ್ಮಾನಿಸಿರುವ ಕೆಪಿಎಂಇ ಮಸೂದೆ ಬಗ್ಗೆ ಖಾಸಗಿ ವೈದ್ಯರು ತಪ್ಪಾಗಿ ಗ್ರಹಿಸಿ, ಪ್ರತಿಭಟನೆ ಕೈಗೊಂಡಿದ್ದರು. ಆದರೆ ಶುಕ್ರವಾರ ನಡೆದ ಸಭೆಯಲ್ಲಿ ಅವರಿಗಿದ್ದ ಗೊಂದಲಗಳು ಬಗೆಹರಿದಿದ್ದು ಈಗ ಎಲ್ಲವೂ ಸರಿಹೋಗಿದೆ ಎಂದು ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಪಿಎಂಇ ಮಸೂದೆ ಜಾರಿಗೆಗೊಳಿಸುವುದು ನನ್ನ ರಾಜಕೀಯ ಜೀವನದ ಮಹತ್ವದ ಕಾರ್ಯ ಎಂದು ತಿಳಿಸಿದ ರಮೇಶ್ ಕುಮಾರ್, ರೋಗಿಯ ಸಾವಿನ ನಂತರದಲ್ಲಿ ಪೂರ್ಣ ಹಣ ಪಾವತಿಸುವವರೆಗೆ ಶವ ಹಸ್ತಾಂತರಕ್ಕೆ ನಿರಾಕರಿಸುವಂತಿಲ್ಲ ಎಂಬುದು ಹೊಸ ವಿಧೇಯಕದಲ್ಲಿ ಸೇರಿಸಲಾದ ಅಂಶವಾಗಿದೆ. ಇದನ್ನು ನಾವು ವೈದ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ವಿವರಿಸಿದರು.