ಹೆಣ್ಣುಮಕ್ಕಳ ಶಿಕ್ಷಣದ ಉತ್ತೇಜನಕ್ಕೆ ಹಲವು ಕಾರ್ಯಗಳು: ಸಿಎಂ

ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ.

Last Updated : Sep 22, 2017, 05:08 PM IST
ಹೆಣ್ಣುಮಕ್ಕಳ ಶಿಕ್ಷಣದ ಉತ್ತೇಜನಕ್ಕೆ ಹಲವು ಕಾರ್ಯಗಳು: ಸಿಎಂ title=
Pic: Twitter

ಕೊಪ್ಪಳ: ಶಿಕ್ಷಣದ ಅಭಿವೃದ್ಧಿಗೆ ಸರ್ಕಾರ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಕಿತ್ತೂರು ರಾಣಿ ಚೆನ್ನಮ್ಮ ಶಾಲಾ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀಮಂತರ ಮಕ್ಕಳು ಲ್ಯಾಪ್‍ಟಾಪ್ ಖರೀದಿಸುತ್ತಾರೆ; ಬಡವರ ಮಕ್ಕಳಿಂದ  ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪದವಿ ಪ್ರಥಮ ವರ್ಷಕ್ಕೆ ಸೇರ್ಪಡೆಯಾದ ಎಲ್ಲ ವರ್ಗದ 1.96ಲಕ್ಷ ವಿದ್ಯಾರ್ಥಿಗಳಿಗೆ ಈ ವರ್ಷ ಗುಣಮಟ್ಟದ ಲ್ಯಾಪ್‍ಟಾಪ್ ವಿತರಿಸಲು ನಿರ್ಧರಿಸಿದ್ದು, ನವೆಂಬರ್‍ನಲ್ಲಿ ಅದಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

ಶಾಲಾ ಮಕ್ಕಳಿಗೆ ಬಿಸಿಹಾಲು, ಸೈಕಲ್‌, ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್  ವಿತರಿಸಲಾಗುತ್ತಿದೆ. ಒಟ್ಟಿನಲ್ಲಿ ನಮ್ಮ ಸರಕಾರ ಶಿಕ್ಷಣದ ಅಭಿವೃದ್ಧಿಗೆ ನಾನಾ ಕ್ರಮಗಳನ್ನು ಕೈಗೊಂಡಿದೆ ಎಂದು ವಿವರಿಸಿದರು.

ತಮ್ಮವಿದ್ಯಾರ್ಥಿ ದಿಸೆಯ  ಅನುಭವಗಳಿಂದ ಹುಟ್ಟಿದ ಯೋಜನೆಗಳಾದ ವಿದ್ಯಾಸಿರಿ ಮತ್ತು ಶೂ ಭಾಗ್ಯದ ಕಥೆಯನ್ನು ಸಭೆಯಲ್ಲಿ ಹೇಳಿದ ಮುಖ್ಯಮಂತ್ರಿಗಳು, ನಾನು ಹೈಸ್ಕೂಲ್ ಬಂದ್ಮೇಲೆಯೇ ಚಪ್ಪಲಿ ಹಾಕಿಕೊಂಡಿದ್ದು, ಅದು ಟೈರ್‍ನಿಂದ ಮಾಡಿದ್ದಾಗಿತ್ತು. ಜೊತೆಗೆ ಮೂರು ವರ್ಷ ಬಾಳಿಕೆ ಬಂತು ಎಂದರು. 

ರೂಂ ಮಾಡಿಕೊಂಡು ಓದುತ್ತಿದ್ದ ನಾನು ಅನ್ನ ಮಾಡಿ ಹೋಟೆಲ್‍ನಿಂದ ಸಾಂಬಾರು ತರಿಸಿಕೊಂಡು ತಿಂದು ವಿದ್ಯಾಭ್ಯಾಸ ಮಾಡಿದ್ದೆ. ಆ ಕಷ್ಟಗಳು ನಮ್ಮ ಮಕ್ಕಳಿಗೆ ಬರಬಾರದು ಅಂತ ವಿದ್ಯಾಸಿರಿ ಜಾರಿಗೆ ತಂದಿದ್ದೇನೆ. ಅದರ ಪ್ರಯೋಜನವನ್ನು 1ಲಕ್ಷ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ ಎಂದರು.

ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಮ-ಸಮಾಜ ನಿರ್ಮಾಣ ಸಾಧ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಗ ಕೂಡ ಗುಣಮಟ್ಟದ ಶಿಕ್ಷಣ ಪಡೆದಾಗ ಮಾತ್ರ ಸಮಾನತೆ ಬೆಳೆಯಲು ಸಾಧ್ಯ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಒಂದು ಸಮಾಜ, ದೇಶ ಅಭಿವೃದ್ಧಿಯಾಗಿದೆ ಎಂದರೇ ಅಲ್ಲಿನ ಜನರು ಅಕ್ಷರ ಸಂಸ್ಕೃತಿ ಉಳ್ಳವರಾಗಿದ್ದಾರೆಂದು ಅರ್ಥ. ಶಿಕ್ಷಣದಿಂದ ಮಾತ್ರ ಅರಿವು, ಬದುಕು ಕಟ್ಟಿಕೊಳ್ಳಲು ಮತ್ತು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಸಮಾಜದಲ್ಲಿ ಹುಟ್ಟಿದ ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದರು.

ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಬಸವರಾಜ ಅಧ್ಯಕ್ಷತೆ ವಹಿಸಿದ್ದರು.

Trending News