ಬೆಂಗಳೂರು: ಜೆಡಿಎಸ್ ಜೊತೆಯಲ್ಲಿ ಸರ್ಕಾರ ಮಾಡಲು ಇಷ್ಟವಿಲ್ಲದ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರನ್ನು ರಾಜೀನಾಮೆ ಕೊಡದಂತೆ ತಡೆದಿಲ್ಲ ಎಂಬ ಚರ್ಚೆ ನಡೆಯುತ್ತಿರುವಾಗಲೇ ತಮ್ಮ ಆಪ್ತರೆನಿಸಿಕೊಂಡ ಶಾಸಕರ ನಡೆಯ ಬಗ್ಗೆ ಸಿದ್ದರಾಮಯ್ಯ ಸಿಡಿದೆದ್ದಿದ್ದಾರೆ. 'ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಬಳಿ ಎಲ್ಲಾ ಕೆಲಸಗಳನ್ನು ಮಾಡಿಸಿಕೊಂಡ ಶಾಸಕರೇ ಈಗ ನನ್ನ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಈ ಮುಖಾಂತರ ಹೇಸಿಗೆ ತಿನ್ನುವಂತ ಕೆಲಸ ಮಾಡಿದ್ದಾರೆ' ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಭಾನುವಾರ ರಾತ್ರಿ ತಾಜ್ ವಿವಾಂತ ಹೊಟೇಲ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, 'ರಾಜಕೀಯದಲ್ಲಿ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದೇ ತಿಳಿಯುತ್ತಿಲ್ಲ. ನಂಬಿಕೆ ಎಂಬ ಪದಕ್ಕೆ ಅರ್ಥವೇ ಇಲ್ಲ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ನನ್ನಿಂದ ಎಲ್ಲಾ ರೀತಿಯ ಸಹಕಾರ ಪಡೆದುಕೊಂಡವರೇ ಈಗ ದೋಖಾ ಮಾಡಿದ್ದಾರೆ. ನೆರವು ಪಡೆದುಕೊಂಡವರೇ ಬೆನ್ನಿಗೆ ಚೂರಿ ಹಾಕಿದ್ದಾರೆ' ಎಂದು ಹೇಳಿದರು.
ಮೊದಲಿಗೆ ಯಾವ ಶಾಸಕನ ಹೆಸರರನ್ನೂ ಹೇಳದಿದ್ದರೂ ಕಡೆಗೆ ಭೈರತಿ ಬಸವರಾಜು, ಎಸ್.ಟಿ. ಸೋಮಶೇಖರ್, ಮುನಿರತ್ನ, ಎಂಟಿಬಿ ನಾಗರಾಜ್ ಮತ್ತು ಸುಧಾಕರ್ ಹೆಸರನ್ನು ಹೇಳಿಯೇ ತಮ್ಮ ನೋವನ್ನು ತೋಡಿಕೊಂಡರು. ನಾನು ಮುಖ್ಯಮಂತ್ರಿಯಾಗಿದ್ದಾಗ ಇವರೆಲ್ಲರೂ ಹೇಳಿದ ಕೆಲಸಗಳನ್ನೆಲ್ಲಾ ಮಾಡಿಕೊಟ್ಟೆ. ಇವರೆಲ್ಲಾ ಈಗ ರಾಜೀನಾಮೆ ಕೊಡುತ್ತಾರೆ, ಬಿಜೆಪಿ ಜೊತೆ ಹೋಗುತ್ತಾರೆ ಎಂಬ ವಿಷಯಗಳು ಚರ್ಚೆಯಾದಾಗ ಗಂಟೆಗಟ್ಟಲೆ ಕೂರಿಸಿಕೊಂಡು ಮಾತನಾಡಿದೆ. ಬುದ್ದಿವಾದ ಹೇಳಿದೆ. ನನ್ನ ಜೊತೆ ಮಾತನಾಡಿದಾಗ 'ನಾವೂ ಎಲ್ಲೂ ಹೋಗುವುದಿಲ್ಲ' ಎಂದು ಭರವಸೆ ನೀಡಿದ್ದ ಇವರು ಕಡೆಗೆ ಮೋಸ ಮಾಡಿದರು. ಇದಕ್ಕಿಂತ ಇನ್ನೇನು ಮೋಸ ಮತ್ತು ನೋವು ಆಗಬೇಕು ಎಂದು ಹೇಳಿಕೊಂಡರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಈವೇಳೆ ತುಸು ಭಾವುಕರಾದಂತೆ ಕಂಡ ಸಿದ್ದರಾಮಯ್ಯ, ಈ ಎಲ್ಲಾ ಶಾಸಕರಿಗೆ ನಾನು ತೋರಿದ ಪ್ರೀತಿಯಿಂದಾಗಿ ಇವರುಗಳು ಮಾತ್ರ ನನ್ನ ಆಪ್ತರು ಎಂದು ಬಿಂಬಿಸಲಾಗುತ್ತಿದೆ. ನನಗೆ ಎಲ್ಲಾ ಕಾಂಗ್ರೆಸ್ ಶಾಸಕರು ಕೂಡ ಆಪ್ತರೇ. 'ನಾನೇ ಅವರನ್ನು ಮುಂಬೈಗೆ ಕಳುಹಿಸಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಹೋದವರನ್ನು ಬಿಡಿ ಇಲ್ಲಿ ಇರುವ ಯಾರಿಗಾದರೂ ಬಿಜೆಪಿಗೆ ಹೋಗುವಂತೆ ಹೇಳಿದ್ದೀನಾ?' ಎಂದು ಪ್ರಶ್ನಿಸಿದರು. ಕಡೆಗೆ ನಾನು ಎಂದಿಗೂ ಅಂಥ ನೀಚ ಕೆಲಸವನ್ನು ಮಾಡುವುದಿಲ್ಲ ಎಂದು ಒಂದು ಕ್ಷಣ ಮೌನವಾದರು. ಸಿದ್ದರಾಮಯ್ಯ ಮಾತ್ರವಲ್ಲ ಇಡೀ ಸಭೆ ಮೌನಕ್ಕೆ ಶರಣಾಯಿತು.
ಬಳಿಕ ಶ್ರೀಮಂತ ಪಾಟೀಲ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, 'ಮೊದಲಿನಿಂದಲೂ ಶ್ರೀಮಂತ ಪಾಟೀಲ್ ಬಗ್ಗೆ ಅನುಮಾನ ಇತ್ತು. ಅವರ ಮೇಲೆ ಕಣ್ಣಿಡುವಂತೆ ಹೇಳಿದ್ದೆ' ಎಂದು ಹೇಳಿದರು.