ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ ಜನ್ಮದಿನ: ಕನ್ನಡದಲ್ಲೇ ಶುಭಾಶಯ ಕೋರಿದ ಪ್ರಧಾನಿ ಮೋದಿ

Shivakumara Swamiji Birthaday: ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತಿ ಅಂಗವಾಗಿ ಪ್ರಧಾನಿ ಮೋದಿಯವರು ಕನ್ನಡದಲ್ಲೇ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

Written by - Puttaraj K Alur | Last Updated : Apr 1, 2023, 12:38 PM IST
  • ಸಿದ್ದಗಂಗಾ ಶ್ರೀಗಳ ಕನಸುಗಳನ್ನು ಈಡೇರಿಸಲು ನಾವು ಸದಾ ಶ್ರಮಿಸುತ್ತೇವೆಂದ ಪ್ರಧಾನಿ ಮೋದಿ
  • ಶಿಕ್ಷಣ, ಆಹಾರ, ವಸತಿ ಮುಂತಾದ ಮಾನವೀಯ ಕಾರ್ಯಗಳ ಮೂಲಕ ಲಕ್ಷಾಂತರ ಜನರನ್ನು ತಲುಪಿದ್ದಾರೆಂದ ಜೆಪಿ ನಡ್ಡಾ
  • ಸಿದ್ದಗಂಗಾ ಶ್ರೀಗಳ ಕಾರ್ಯ ಮುಂದಿನ ಪೀಳಿಗೆಗಳಿಗೂ ಪ್ರೇರಣೆ ನೀಡಲಿದೆ ಎಂದ ಕೇಂದ್ರ ಗೃಹ ಸಚಿವ ಅಮಿತ್ ಶಾ
ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ ಜನ್ಮದಿನ: ಕನ್ನಡದಲ್ಲೇ ಶುಭಾಶಯ ಕೋರಿದ ಪ್ರಧಾನಿ ಮೋದಿ title=
ಸಿದ್ಧಗಂಗಾ ಶ್ರೀಗಳ ಜನ್ಮದಿನ

ಬೆಂಗಳೂರು: ನಡೆದಾಡುವ ದೇವರು, ಕಾಯಕ ಯೋಗಿ, ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತಿ ಅಂಗವಾಗಿ ಪ್ರಧಾನಿ ಮೋದಿಯವರು ಕನ್ನಡದಲ್ಲೇ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

‘ಪೂಜ್ಯ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟು ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಅವರಿಗೆ ನನ್ನ ನಮನ. ಅವರು ಲಕ್ಷಾಂತರ ಜನರ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ಸಮಾಜಸೇವೆಗೆ ಉನ್ನತ ಸ್ಥಾನ ಮತ್ತು ಜನರನ್ನು ಸಶಕ್ತಗೊಳಿಸುವುದಕ್ಕೆ ಅವರು ಪ್ರಾಮುಖ್ಯ ನೀಡಿದ್ದರು. ಅವರ ಕನಸುಗಳನ್ನು ಪೂರೈಸಲು ನಾವು ಸದಾ ಶ್ರಮಿಸುತ್ತೇವೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸಹ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದು, ‘ಪರಮಪೂಜ್ಯ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಅವರಿಗೆ ನಮಿಸುತ್ತೇನೆ. ಶಿಕ್ಷಣ, ಆಹಾರ, ವಸತಿ ಮುಂತಾದ ಮಾನವೀಯ ಕಾರ್ಯಗಳ ಮೂಲಕ ಅವರು ಜಗತ್ತಿನಾದ್ಯಂತದ ಲಕ್ಷಾಂತರ ಜನರನ್ನು ತಲುಪಿದ್ದಾರೆ ಮತ್ತು ಅವರ ಕಾರ್ಯಗಳು ನಮೆಗೆಲ್ಲರಿಗೂ ಸಾರ್ವಜನಿಕ ಸೇವೆ ಮಾಡಲು ಸದಾ ಪ್ರೇರಣೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಳಪೆ ಬೀಜ ಪೂರೈಸಿದ ಗಂಗಾ ಕಾವೇರಿ ಸೀಡ್ಸ್ ಕಂಪನಿಗೆ 1.25 ಲಕ್ಷ ರೂ ದಂಡ 

‘ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಅವರ ಜಯಂತಿಯಂದು ಶಿರಬಾಗಿ ನಮಿಸುತ್ತೇನೆ. ನಡೆದಾಡುವ ದೇವರು ಸಮಾಜ ಸೇವೆಗಳ ಮೂಲಕ ಅಪಾರ ಜನರ ಜೀವನ ಪರಿವರ್ತನೆಗೊಳಿಸಿದ್ದಾರೆ. ಹಲವು ಸಂಸ್ಥೆಗಳ ಮೂಲಕ ನಿಸ್ವಾರ್ಥ ಸೇವೆಯ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಅವರ ಕಾರ್ಯ ಮುಂದಿನ ಪೀಳಿಗೆಗಳಿಗೂ ಪ್ರೇರಣೆ ನೀಡಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದು, ‘ಶತಮಾನ ಕಂಡ ಶ್ರೇಷ್ಠ ಸಂತ, ತ್ರಿವಿಧ ದಾಸೋಹಿ ಸಿದ್ದಗಂಗೆಯ ಲಿಂಗೈಕ್ಯ ಪರಮಪೂಜ್ಯ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ನಮನಗಳು. ಕಾಯಕ, ಶಿಕ್ಷಣ ಹಾಗೂ ದಾಸೋಹಕ್ಕೆ ಮಹತ್ವ ನೀಡಿ, ಸಮಾಜವನ್ನು ಪರಿವರ್ತಿಸುವ ಹಾದಿಯಲ್ಲಿ ಶ್ರೀಗಳು ರೂಪಿಸಿರುವ ಪರಂಪರೆ ಶತಶತಮಾನಗಳವರೆಗೆ ಮುಂದುವರೆಯಲಿ’ ಎಂದು ಹೇಳಿದ್ದಾರೆ.

‘ಸೇವೆಯ ಮೂಲಕ ದೇವರ ಸ್ಥಾನಕ್ಕೇರಿದ ಸಂತ, ಬಸವಾದಿ ಶರಣರ ಕಾಯಕ ಮತ್ತು ದಾಸೋಹ ತತ್ವವನ್ನು ನಿಜ ಅರ್ಥದಲ್ಲಿ ಪಾಲಿಸುತ್ತಾ, ಅನ್ನ, ಅಕ್ಷರ, ಜ್ಞಾನ ದಾಸೋಹದ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕು ನೀಡಿದ ದಾರ್ಶನಿಕ, ಬಸವೇಶ್ವರ ಪ್ರತಿರೂಪವಾದ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯಂದು ಅವರಿಗೆ ನನ್ನ ಭಕ್ತಿಪೂರ್ವಕ ನಮನಗಳು’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ನಕಲಿ ಬಿಎಡ್ ಅಂಕಪಟ್ಟಿ ಪಡೆದು ವಾರ್ಡನ್ ಹುದ್ದೆಯಿಂದ ಪ್ರಾಂಶುಪಾಲ ಹುದ್ದೆಗೇರಿದ ಶಿಕ್ಷಕ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ‘ಅನ್ನ, ಅಕ್ಷರ, ಆಶ್ರಯದ ಮೂಲಕ ತ್ರಿವಿಧ ದಾಸೋಹಿಗಳಾಗಿ ನಾಡನ್ನು ಅರಿವಿನತ್ತ ಕೊಂಡೊಯ್ದ ಮಹಾನ್ ಸಂತರು, ದೈವ ಸ್ವರೂಪರೂ ಆಗಿರುವ ಶ್ರೀ ಸಿದ್ದಗಂಗಾ ಮಠದ ಲಿಂಗೈಕ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿಗಳವರ ಜಯಂತಿಯ ಈ ಪುಣ್ಯದಿನದಂದು ನನ್ನ ಶ್ರದ್ಧಾಭಕ್ತಿಯ ಪ್ರಣಾಮಗಳು’ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News