ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ನಿಗದಿಯಾಗಿದ್ದು ಮೇ 12ರಂದು ನಡೆಯಲಿದೆ. ಆದರೂ ಬಹಳಷ್ಟು ಜನರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಸಾಧ್ಯವಾಗದೆ ನಿರಾಶರಾಗಿದ್ದರೆ, ಅವರಿಗೆ ಚುನಾವಣಾ ಆಯೋಗ ಮತ್ತೊಂದು ಅವಕಾಶ ನೀಡಿದೆ. ನಾಳೆ(ಏ.8) ಬೆಳಿಗ್ಗೆಯಿಂದ ಸಂಜೆಯವರೆಗೆ ಆಯಾ ಮತದಾನ ಕೇಂದ್ರಗಳಲ್ಲಿ ‘ಮಿಂಚಿನ ನೋಂದಣಿ’ ಅಭಿಯಾನ ಹಮ್ಮಿಕೊಂಡಿದೆ.
ಏ.8ರಂದು ‘ಮಿಂಚಿನ ನೋಂದಣಿ’ ಹೆಸರಲ್ಲಿ ನೋಂದಣಿ ಮತ್ತು ತಿದ್ದುಪಡಿಗಾಗಿ ವಿಶೇಷ ಕಾರ್ಯಕ್ರಮವನ್ನು ಚುನಾವಣಾ ಆಯೋಗ ಹಮ್ಮಿಕೊಂಡಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಮತ್ತು ತಿದ್ದುಪಡಿಗಳನ್ನು ಮಾಡಲು ಇಚ್ಚಿಸುವವರು ಏ.8 ರಂದು ಆಯಾ ವ್ಯಾಪ್ತಿಯ ಮತ ಕೇಂದ್ರಗಳಿಗೆ ತೆರಳಿ ತಿದ್ದುಪಡಿ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆ ಎಲ್ಲಾ ಮತ ಕೇಂದ್ರಗಳಲ್ಲಿ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರಿಸಲು ಮತ್ತು ಬದಲಾವಣೆ ಮಾಡಲು ಏ.14ರವರೆಗೆ ಕಾಲಾವಕಾಶ ನೀಡಲಾಗಿದೆ.
ಮತದಾರರ ಪಟ್ಟಿಯಲ್ಲಿ ನೂತನವಾಗಿ ಹೆಸರು ಸೇರಿಸಲು, ಸ್ಥಳ ಬದಲಾವಣೆ ಬಗ್ಗೆ ಮಾಹಿತಿ ನೀಡಲು ಮತ್ತು ಹೆಸರು ಕಣ್ಮರೆ ಆಗಿದ್ದರೆ ಪುನಃ ಸೇರಿಸಲು ಫಾರಂ 6 ಅನ್ನು, ಪಟ್ಟಿಯಿಂದ ಹೆಸರು ತೆಗೆಸಲು ಫಾರಂ 7, ಮತದಾರರ ಪಟ್ಟಿಯ ತಪ್ಪುಗಳನ್ನು ಬದಲಿಸಲು ಫಾರಂ 8 ಮತ್ತು ಒಂದೇ ಚುನಾವಣಾ ಕ್ಷೇತ್ರದಲ್ಲಿ ಮತದಾರರ ಹೆಸರನ್ನು ಇನ್ನೊಂದು ಜಾಗಕ್ಕೆ ಸ್ಥಳಾಂತರಿಸಲು ಅಂದರೆ ನಿಮ್ಮ ವಿಳಾಸ ಬದಲಾಗಿದ್ದರೆ ಫಾರಂ 8ಎ ಬಳಸಿ ಅರ್ಜಿ ಸಲ್ಲಿಸಬಹುದು. ಮತದಾರರು ಆನ್'ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು.
ಮತದಾರ ಪಟ್ಟಿಗೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಮತ್ತು ನಿಯಮಗಳ ಬಗ್ಗೆ ತಿಳಿಯಲು ಹೆಚ್ಚಿನ ಮಾಹಿತಿಗೆ www.ceokarnataka.kar.nic.in ವೆಬ್ ಸೈಟ್'ಗೆ ಭೇಟಿ ನೀಡಿ.