ಬೆಂಗಳೂರು : ನಮ್ಮ ಸರ್ಕಾರದ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಅಧಿಕಾರದಲ್ಲಿ ಇದ್ದಾಗ ಭ್ರಷ್ಟಾಚಾರವೆಸಗಿ ಜೈಲಿಗೆ ಹೋಗಿ ಬಂದ ತಮ್ಮ ಪಕ್ಷದ ನಾಯಕ ಯಡಿಯೂರಪ್ಪ ನೆನಪಾಗಲಿಲ್ಲವೇ? ಎಂದು ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಇಂದು ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅಮಿತ್ ಷಾ ರಾಜ್ಯ ಸರ್ಕಾರದ ವಿರುದ್ಧ ನಡೆಸಿದ್ದ ತೀವ್ರವಾದ ವಾಗ್ಧಾಳಿಗೆ ಪ್ರತಿದಾಳಿ ನಡೆಸಿದ ಸಿಎಂ, ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಾಗ ಅಮಿತ್ ಶಾ ಅವರಿಗೆ ಪಕ್ಕದಲ್ಲೇ ಕುಳಿತಿದ್ದ, ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ನೆನಪಾಗಲಿಲ್ಲವೇ? ಅವರೊಂದಿಗೆ ಜೈಲಿಗೆ ಹೋದ ಮಾಜಿ ಮಂತ್ರಿಗಳು ಕಾಣಿಸಲಿಲ್ಲವೇ ? ಎಂದು ಚೀಮಾರಿ ಹಾಕಿದ್ದಾರೆ.
ಕೊಳ್ಳೆಗಾಲದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಿಎಂ, ಸ್ವತಃ ಶಾ ಅವರೇ ಜೈಲಿಗೆ ಹೋಗಿ ಬಂದಿದ್ದಾರೆ. ಅಷ್ಟೇ ಅಲ್ಲ, ಎರಡು ವರ್ಷ ಗಡೀಪಾರು ಆಗಿದ್ದವರು ಎಂದು ವ್ಯಂಗ್ಯವಾಡಿದರು.
ಅಮಿತ್ ಶಾ ಅವರು ಬೆಂಗಳೂರಿಗೆ ಬಂದು ಬೆಳಗಿನ ಜಾವ ಮೂರು ಗಂಟೆವರೆಗೂ ಸಭೆ ಮಾಡಿದ್ದಾರೆ. ಏನೇ ಮಾಡಿದರೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 60ರ ಗಡಿ ದಾಟುವುದಿಲ್ಲ ಎಂಬ ವರದಿ ಕೇಳಿ ಕಂಗಾಲಾಗಿದ್ದಾರೆ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾದವರು ತಮ್ಮ ಪಕ್ಷದಸಭೆಯಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೇಳಬೇಕು. ಆ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗಿ ಅವರ ಮನವೊಲಿಸಿ ಎಂದು ತಿಳಿಸಬೇಕು. ಅದು ಬಿಟ್ಟು ರಾಜ್ಯದಲ್ಲಿ ಕೋಮು ಗಲಭೆ ಮಾಡಿಸಿ, ಗೋಲಿಬಾರ್, ಲಾಠಿ ಚಾರ್ಜ್, ಆಶ್ರುವಾಯು ಪ್ರಯೋಗ ಆಗುವಂತೆ ನೋಡಿಕೊಳ್ಳಿ ಎನ್ನುವ ಅವರ ನಡೆ ಸರಿಯಲ್ಲ ಎಂದು ತಿಳಿಸಿದರು.
ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾದವರು ಪಕ್ಷದ ಸಭೆಯಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೇಳಬೇಕು.ಆ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ ಅವರ ಮನವೊಲಿಸಿ ಎಂದು ತಿಳಿಸಬೇಕು. ಅದು ಬಿಟ್ಟು ರಾಜ್ಯದಲ್ಲಿ ಗೋಲಿಬಾರ್, ಲಾಠಿ ಚಾರ್ಜ್ ಆಗುವಂತೆ ನೋಡಿಕೊಳ್ಳಿ ಎನ್ನುತ್ತಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು. pic.twitter.com/EHPE17nVSd
— Siddaramaiah (@siddaramaiah) January 10, 2018
ರಾಜ್ಯಕ್ಕೆ ಬಂದಾಗಲೆಲ್ಲಾ ಷಾ ಅವರು ಕೇಂದ್ರದ ಅನುದಾನದ ಬಗ್ಗೆ ಲೆಕ್ಕ ಕೇಳುತ್ತಾರೆ. ಅದು ಯಾರ ಹಣ? ರಾಜ್ಯ ಸಂಗ್ರಹಿಸುವ ತೆರಿಗೆ ಪಾಲಿನ ಹಣ. ಅದೇನೂ ಕೇಂದ್ರ ಸರ್ಕಾರ ನಮಗೆ ನೀಡುವ ಭಿಕ್ಷೆ ಅಲ್ಲ. ಅದು ನಮ್ಮ ಸಂವಿಧಾನಬದ್ಧ ಹಕ್ಕು. ಕೇಂದ್ರ ಸರ್ಕಾರ ಅದನ್ನು ನಮಗೆ ಕೊಡಲೇಬೇಕು.
ಕೊಡುವ ಅನುದಾನದ ಬಗ್ಗೆ ಹೇಳಲು ಅಮಿತ್ ಶಾ ಇಲ್ಲಿಗೆ ಬರಬೇಕೇ ? ಅದನ್ನು ಕೇಳಿ ಜನ ಬಿಜೆಪಿಗೆ ಮತ ಹಾಕುವರೇ ಎಂದು ಸಿಎಂ ಪ್ರಶ್ನಿಸಿದರು.
— CM of Karnataka (@CMofKarnataka) January 10, 2018
ಕರ್ನಾಟಕ ಕಾಂಗ್ರೆಸ್ ಮುಕ್ತ ಆದರೆ ಅಚ್ಛೇ ದಿನ್ ಬರುತ್ತದೆ ಎಂದು ಯಡಿಯೂರಪ್ಪ ಅವರು ಹೇಳುತ್ತಾರೆ. ಅವರು ಜೈಲಿಗೆ ಹೋದಾಗ ಎಂತಹ ದಿನ ಬಂದಿತ್ತು ಎಂದು ಅಮಿತ್ ಶಾ ಅವರೇ ಹೇಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ಹೇಳಿಕೆಗೆ ಅಣುಕ ಮಾಡಿದರು.