ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ನೀರಿಗೆ ಬರ, ಟ್ಯಾಂಕರ್ ಗೆ ಮೊರೆ!

ಅದೊಂದು ಬಡವರ ಸಂಜೀವಿನಿ ಆಸ್ಪತ್ರೆ ನಿತ್ಯವೂ ಅಲ್ಲಿ ಸಾವಿರಾರು ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಆದ್ರೀಗ ಅಲ್ಲಿ ನೀರಿಗಾಗಿ ಬರ ಎದುರಾಗಿದೆ.. ಕಳೆದ ಕೆಲ ದಿನಗಳಿಂದ ಅಲ್ಲಿ ನೀರು ಬರ್ತಿಲ್ಲಾ ಎಂಬ ದೂರುಗಳು ಕೇಳಿಬಂದಿವೆ. ಈ ಕುರಿತು ಒಂದು ವರದಿ ಇಲ್ಲಿದೆ.

Written by - Manjunath N | Last Updated : May 31, 2023, 09:34 AM IST
  • ಜಿಲ್ಲಾ ಆಸ್ಪತ್ರೆ ಧಾರವಾಡ ಜಿಲ್ಲೆಗೆ ಮಾತ್ರವೇ ಸಿಮೀತವಾಗಿರುವ ಆಸ್ಪತ್ರೆಯಲ್ಲ
  • ಬದಲಿಗೆ ಉತ್ತರ ಕನ್ನಡ ಜಿಲ್ಲೆಯ ಎರಡು ಹಾಗೂ ಬೆಳಗಾವಿ ಜಿಲ್ಲೆಯ ಮೂರು ತಾಲೂಕಿನ ಜನರಿಗೂ ಇದೇ ಆಸ್ಪತ್ರೆಯೆ ಆಧಾರ
  • ಅದರಲ್ಲಿಯೂ ಇಲ್ಲಿ ಹೊಸದಾಗಿ ನಿರ್ಮಿಸಿರುವ ಹೆರಿಗೆ ಆಸ್ಪತ್ರೆ ಬಡವರಿಗೆ ಉತ್ತಮ ಸೌಕರ್ಯ ನೀಡುತ್ತಿದೆ
ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ನೀರಿಗೆ ಬರ, ಟ್ಯಾಂಕರ್ ಗೆ ಮೊರೆ! title=

ಧಾರವಾಡ: ಅದೊಂದು ಬಡವರ ಸಂಜೀವಿನಿ ಆಸ್ಪತ್ರೆ ನಿತ್ಯವೂ ಅಲ್ಲಿ ಸಾವಿರಾರು ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಆದ್ರೀಗ ಅಲ್ಲಿ ನೀರಿಗಾಗಿ ಬರ ಎದುರಾಗಿದೆ.. ಕಳೆದ ಕೆಲ ದಿನಗಳಿಂದ ಅಲ್ಲಿ ನೀರು ಬರ್ತಿಲ್ಲಾ ಎಂಬ ದೂರುಗಳು ಕೇಳಿಬಂದಿವೆ. ಈ ಕುರಿತು ಒಂದು ವರದಿ ಇಲ್ಲಿದೆ.

ಜಿಲ್ಲಾ ಆಸ್ಪತ್ರೆ ಧಾರವಾಡ ಜಿಲ್ಲೆಗೆ ಮಾತ್ರವೇ ಸಿಮೀತವಾಗಿರುವ ಆಸ್ಪತ್ರೆಯಲ್ಲ. ಬದಲಿಗೆ ಉತ್ತರ ಕನ್ನಡ ಜಿಲ್ಲೆಯ ಎರಡು ಹಾಗೂ ಬೆಳಗಾವಿ ಜಿಲ್ಲೆಯ ಮೂರು ತಾಲೂಕಿನ ಜನರಿಗೂ ಇದೇ ಆಸ್ಪತ್ರೆಯೆ ಆಧಾರ. ಅದರಲ್ಲಿಯೂ ಇಲ್ಲಿ ಹೊಸದಾಗಿ ನಿರ್ಮಿಸಿರುವ ಹೆರಿಗೆ ಆಸ್ಪತ್ರೆ ಬಡವರಿಗೆ ಉತ್ತಮ ಸೌಕರ್ಯ ನೀಡುತ್ತಿದೆ. ಹೀಗಾಗಿ ಬಹುತೇಕರು ಇಲ್ಲಿಯೆ ಹೆರಿಗೆಗೆ ಬರುತ್ತಾರೆ. ಆದ್ರೆ ಇಂತಿಪ್ಪ ಆಸ್ಪತ್ರೆಯಲ್ಲೀಗ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೌದು, ಕಳೆದ ಎರಡ್ಮೂರು ದಿನಗಳಿಂದ ವಾರ್ಡ್ಗಳಲ್ಲಿ ಸರಿಯಾಗಿ ಬಳಕೆಗೆ ನೀರು ಬರುತ್ತಿಲ್ಲವಂತೆ. ಇದೇ ಕಾರಣಕ್ಕೆ ಅನೇಕರು ದೊಡ್ಡ ದೊಡ್ಡ ಡಬ್ಬಗಳಲ್ಲಿ ನೀರು ತುಂಬಿಕೊಂಡು ತಮ್ಮ ರೋಗಿಗಳಿಗೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಆಸ್ಪತ್ರೆಯವರನ್ನು ಕೇಳಿದ್ರೆ, ಸರಿಯಾಗಿ ನೀರು ಪೂರೈಕೆಯಾಗಿಲ್ಲ. ಹೀಗಾಗಿ ಬಂದಿಲ್ಲ ಎಂದು ಹೇಳುತ್ತಿದ್ದಾರಂತೆ.

ಇದನ್ನೂ ಓದಿ: Karnataka Cabinet: ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರ ಅನುಮೋದನೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 82 ವಾರ್ಡ್ಗಳಿಗೆ ನೀರು ಪೂರೈಕೆ ಮಾಡುವ ಜವಾಬ್ದಾರಿಯನ್ನು ಈಗಾಗಲೇ ಸರ್ಕಾರ ಜಲಮಂಡಳಿಯಿಂದ ಎಲ್ ಆ್ಯಂಡ್ ಟಿ ಕಂಪನಿಗೆ ವಹಿಸಿ ಒಂದು ವರ್ಷವೇ ಆಗೋಕೆ ಬಂತು. ಆದ್ರೆ ಕಂಪನಿ ಅಡಿಯಲ್ಲಿ ಸಮರ್ಪಕ ನೀರು ಪೂರೈಕೆ ಮಾತ್ರ ಇನ್ನುವರೆಗೂ ಆಗಿಲ್ಲ. ಸದ್ಯ ಅವಳಿ ನಗರ ಅನೇಕ ಪ್ರದೇಶಗಳಿಗೆ 15 ದಿನ ಕಳೆದರೂ ನೀರು ಬಂದಿಲ್ಲ. ಇದರ ಮಧ್ಯೆಯೆ ಈಗ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿಯೂ ರೋಗಿಗಳು ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸೋದಕ್ಕೆ ಹುಬ್ಬಳ್ಳಿ-ಧಾರವಾಡಕ್ಕೆ ನೀರು ಪೂರೈಕೆ ಮಾಡುವ ಗುತ್ತಿಗೆ ಪಡೆದಿರುವ ಎಲ್ ಆ್ಯಂಡ್ ಟಿ ಕಂಪನಿಯೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಯಾಕಂದ್ರೆ ಅವಳಿ ನಗರದ ಅನೇಕ ಪ್ರದೇಶಗಳಲ್ಲಿ ಹದಿನೈದು ದಿನ ಕಳೆದರೂ ಸರಿಯಾಗಿ ನೀರು ಬಂದಿಲ್ಲ. ಜಿಲ್ಲಾ ಆಸ್ಪತ್ರೆ ಇರುವ ಪ್ರದೇಶಕ್ಕೂ ಇದೇ ಸ್ಥಿತಿ ಆಗಿದೆ. ಹೀಗಾಗಿ ಸಹಜವಾಗಿಯೇ ಜಿಲ್ಲಾ ಆಸ್ಪತ್ರೆಯಲ್ಲಿಯೂ ಹೀಗೆ ನೀರಿನ ಬರ ಉಂಟಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Rain Alert: ರಾಜ್ಯದಲ್ಲಿ ಇನ್ನೂ 2 ದಿನ ವರುಣಾರ್ಭಟ: ಈ ಜಿಲ್ಲೆಗಳಲ್ಲಿ ಗುಡ್ಡ ಕುಸಿತದ ಭೀತಿ-ಹೈ ಅಲರ್ಟ್ ಘೋಷಿಸಿದ ಇಲಾಖೆ!

ಇನ್ನು ತಮ್ಮ ಆಸ್ಪತ್ರೆಯಲ್ಲಿ ನೀರಿಗೆ ಸಮಸ್ಯೆ ಆಗಿರುವುದನ್ನು ಜಿಲ್ಲಾ ಆಸ್ಪತ್ರೆ ಸರ್ಜನ್ ಸಹ ಒಪ್ಪಿಕೊಂಡಿದ್ದಾರೆ. ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದಾಗಿಯೇ ಹೀಗೆಲ್ಲ ಆಗಿದೆ. ನಮಗೆ ನಿತ್ಯ 50 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಆದರೆ ನೀರು ಪೂರೈಕೆ ಆಗಿಲ್ಲ. ನಿರಂತರ ನೀರು ಪೂರೈಕೆ ಲೈನ್ ಇದ್ದರೂ ಅಲ್ಲಿಯೂ ಎರಡು ದಿನ ನೀರು ಬಂದಿಲ್ಲ. ಹೀಗಾಗಿ ಎಲ್ ಆ್ಯಂಡ್ ಟಿ ಕಂಪನಿಯವರು ನಿತ್ಯ ಎರಡು ಟ್ಯಾಂಕರ್ ಕಳುಹಿಸುತ್ತಿದ್ದಾರೆ. ಆದರೆ ಆ ಟ್ಯಾಂಕರ್ ನಿಂದ ಕೇವಲ 24 ಸಾವಿರ ಲೀಟರ್ ಮಾತ್ರ ನೀರು ಸಿಗುತ್ತಿದೆ. ಹೀಗಾಗಿ ಖಾಸಗಿ ಟ್ಯಾಂಕರ್ ಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಸರ್ಕಾರದ ಅಧೀನದಲ್ಲಿದ್ದ ನೀರು ಪೂರೈಕೆ ವ್ಯವಸ್ಥೆಯನ್ನು ಖಾಸಗಿಗೆ ವಹಿಸಿದ ಬಳಿಕ ಸಾರ್ವಜನಿಕರು ಮಾತ್ರವಲ್ಲ, ಸರ್ಕಾರಿ ಆಸ್ಪತ್ರೆಯೂ ಸಹ ನೀರಿಗಾಗಿ ಪರದಾಡಿ ಖಾಸಗಿ ಟ್ಯಾಂಕರ್ ಗಳ ಮೊರೆ ಹೋಗುವಂತಾಗಿದ್ದು, ವಿಪರ್ಯಾಸವಾದರೂ ಸತ್ಯ. ಆದರೆ ಇದೆಲ್ಲದರ ಪರಿಣಾಮ ಸಾಮಾನ್ಯ ಜನರ ಮೇಲೆಯೇ ಆಗುತ್ತಿದ್ದು, ಇನ್ನಾದರೂ ಜಿಲ್ಲಾ ಆಸ್ಪತ್ರೆಗೆ ಸಮರ್ಪಕ ನೀರು ಪೂರೈಕೆಯಾಗುತ್ತಾ? ಕಾದು ನೋಡಬೇಕಿದೆ.

-ವಿಠ್ಠಲ ಕರಡಿಗುಡ್ಡ, ಜೀ ಕನ್ನಡ ನ್ಯೂಸ್, ಧಾರವಾಡ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News