ಸಿಆರ್ ಪಿಎಫ್ ಘಟಕ ಸ್ಥಳಾಂತರಕ್ಕೆ ನಮ್ಮ ವಿರೋಧವಿದೆ- ದಿನೇಶ್ ಗುಂಡುರಾವ್

ರಾಜ್ಯ ಸರ್ಕಾರದ ಗಮನಕ್ಕೂ ತರದೇ ಗೃಹ ಸಚಿವ ರಾಜನಾಥ್ ಸಿಂಗ್ ಸಿಆರ್ ಪಿಎಫ್ ಘಟಕವನ್ನು ಸ್ಥಳಾಂತರ ಮಾಡಿದ್ದಾರೆ.

Last Updated : Oct 13, 2017, 05:49 PM IST
ಸಿಆರ್ ಪಿಎಫ್ ಘಟಕ ಸ್ಥಳಾಂತರಕ್ಕೆ ನಮ್ಮ ವಿರೋಧವಿದೆ- ದಿನೇಶ್ ಗುಂಡುರಾವ್  title=
Pic: India.com
ಬೆಂಗಳೂರು: ರಾಜ್ಯ ಸರ್ಕಾರದ ಗಮನಕ್ಕೂ ತರದೇ ಗೃಹ ಸಚಿವ ರಾಜನಾಥ್ ಸಿಂಗ್ ಸಿಆರ್ ಪಿಎಫ್ ಘಟಕವನ್ನು ಸ್ಥಳಾಂತರ ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಗೆ ನಮ್ಮ ವಿರೋಧವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
 
ಸುದ್ದಿಗೋಷ್ಠಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಕೇಂದ್ರದ ಗೃಹ ಇಲಾಖೆ ಸಿಆರ್ ಪಿಎಫ್ ಕೇಂದ್ರ ಕಚೇರಿಯನ್ನು ಉತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಿದೆ. ನಮ್ಮ ಸರ್ಕಾರದ ಗಮನಕ್ಕೂ ತರದೆ ಗೃಹ ಸಚಿವ ರಾಜನಾಥ್ ಸಿಂಗ್ ಸ್ಥಳಾಂತರ ಮಾಡಿದ್ದಾರೆ. ಕೇಂದ್ರ ಕಚೇರಿಯ ನಿರ್ಮಾಣಕ್ಕೆ 225ಎಕರೆ ಜಮೀನನ್ನು ರಾಜ್ಯ ಸರ್ಕಾರ ಮೀಸಲಿಟ್ಟಿತ್ತು. ಆದರೂ ಕೂಡ ಬೆಂಗಳೂರಲ್ಲಿ ನಿರ್ಮಾಣವಾಗಬೇಕಿದ್ದ ಕೇಂದ್ರವನ್ನು ಉತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಐದು ಸಿಆರ್ ಪಿಎಫ್ ಕೇಂದ್ರಗಳಿವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
 
ರಾಜ್ಯ ಸರ್ಕಾರದ ವಿಚಾರದಲ್ಲಿ ಕೇಂದ್ರ ಮಲತಾಯಿ ಧೋರಣೆ ಅನುಸರಿಸಿದೆ, ಇದು ಸರಿಯಲ್ಲ, ಇದೊಂದು ಘೋರ ಅನ್ಯಾಯ ರಾಜ್ಯದ ಹಿತ ಕಾಪಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರದ ನಡೆ ವಿರುದ್ದ ದಿನೇಶ್ ಗುಂಡುರಾವ್ ಕಿಡಿಕಾರಿದ್ದಾರೆ.
 
ಬಿಜೆಪಿ ನಾಯಕರು ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡುವ ಮೂಲಕ ಕಾಲ ಹರಣ ಮಾಡುತ್ತಿದ್ದಾರೆ. ಅದರ ಬದಲು ನಾಡಿನ ಹಿತದ ಕುರಿತು ಧ್ವನಿ ಎತ್ತಲಿ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದ ಪ್ರತಿನಿಧಿಯಾಗಿದ್ದಾರೆ. ರಾಜ್ಯದ ಬಿಜೆಪಿ ಸಂಸದರು ಯಾರೂ ರಾಜ್ಯದ ಪರವಾಗಿ ಮಾತನಾಡುತ್ತಿಲ್ಲ. ಚುನಾವಣೆಗೆ ಅನುಕೂಲ ಆಗುವುದಕ್ಕೆ ಹೋರಾಟ ಮಾಡುತ್ತಾರೆ ಎಂದು ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
 
ಬ್ಯಾಂಕುಗಳಲ್ಲೂ ರಾಜ್ಯದವರಿಗೆ ಉದ್ಯೋಗ ನೀಡುತ್ತಿಲ್ಲ. ಬೇರೆ ರಾಜ್ಯದವರು ಬಂದು ಹಳ್ಳಿಗಳಲ್ಲಿ ಕೆಲಸ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಅಲ್ಲದೆ, ಕನ್ನಡಿಗರಿಗೆ 10% ಕೂಡ ಉದ್ಯೋಗ ದೊರೆಯುತ್ತಿಲ್ಲ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪತ್ರ ಬರೆದಿದ್ದಾರೆ ಎಂದು ತಿಳಿಸಿದ ಅವರು, ಸಿಆರ್ ಪಿಎಫ್ ಘಟಕ ಸ್ಥಳಾಂತರಕ್ಕೆ ನಮ್ಮ ವಿರೋಧವಿದೆ. ಸಿಆರ್ ಪಿಎಫ್ ಕೇಂದ್ರ ಸ್ಥಳಾಂತರ ‌ಮಾಡುವ ಕ್ರಮ ಸರಿಯಲ್ಲ ಅನ್ನೋದು ನಮ್ಮ ಆಗ್ರಹ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Trending News