ರಾಜ್ಯದಲ್ಲಿ 5 ವರ್ಷಗಳ ಸುಭದ್ರ ಆಡಳಿತ ನಡೆಸುತ್ತೇವೆ: ಸಿಎಂ ಕುಮಾರಸ್ವಾಮಿ

ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ 5 ವರ್ಷಗಳನ್ನು ಪೂರೈಸುವ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.   

Last Updated : Jun 6, 2018, 06:52 PM IST
ರಾಜ್ಯದಲ್ಲಿ 5 ವರ್ಷಗಳ ಸುಭದ್ರ ಆಡಳಿತ ನಡೆಸುತ್ತೇವೆ: ಸಿಎಂ ಕುಮಾರಸ್ವಾಮಿ  title=

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ 5 ವರ್ಷಗಳನ್ನು ಪೂರೈಸುವ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. 

ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ ಮೊದಲ ಸಂಪುಟ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮಗಳು ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಯಾವುದೇ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದ್ದರೂ ಮಂತ್ರಿ ಸ್ಥಾನ ಹಂಚಿಕೆಯಲ್ಲಿ ಗೊಂದಲಗಳು ಇರುವುದು ಸಾಮಾನ್ಯ. ಆದರೆ ಅದನ್ನೇ ಮಾಧ್ಯಮಗಳು ದೊಡ್ಡದಾಗಿ ಬಿಂಬಿಸಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ರಾಜ್ಯಕ್ಕೆ ಉತ್ತಮ ಆಡಳಿತ ನೀಡುವಲ್ಲಿ ಎರಡೂ ಪಕ್ಷಗಳೂ ಬದ್ಧವಾಗಿದ್ದು, ಮುಖ್ಯಮಂತ್ರಿಯಾಗಿ ನಾನು ಮತ್ತು ಉಪ ಮುಖ್ಯಮಂತ್ರಿಯಾಗಿ ಜಿ.ಪರಮೇಶ್ವರ್ ಅವರು ಸಚಿವರ ಸಹಕಾರದೊಂದಿಗೆ ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಶ್ರಮಿಸುತ್ತೇವೆ. ಅದಕಾಗಿ ಈಗಾಗಲೇ ಅನ್ನಭಾಗ್ಯ ಸೇರಿದಂತೆ ಹಿಂದಿನ ಸರ್ಕಾರ ಆರಂಭಿಸಿರುವ ಉಪಯುಕ್ತ ಯೋಜನೆಯಗಳನ್ನು ಮುಂದುವರೆಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ನಂತರ ಮಾತನಾಡಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು, ಇಂದು ಸಂಪುಟದ ವಿಸ್ತರಣೆ ಆಗಿದೆ. ಮುಖ್ಯಮಂತ್ರಿಗಳು ಮತ್ತು ನಾನು ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಅಂದಿನಿಂದ ಇಲ್ಲಿಯವರೆಗೆ ಅನೇಕ ಸಭೆಗಳನ್ನು ಕರೆದು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದು, ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಶ್ರಮವಹಿಸಿದ್ದೇವೆ' ಎಂದರು.

ಚುನಾವಣೆ ನಡೆದಾಗ ಎರಡೂ ಪಕ್ಷಗಳು ಎರಡು ಪ್ರತ್ಯೇಕ ಪ್ರಣಾಳಿಕೆಗಳನ್ನು ಜನರ ಮುಂದೆ ಇಟ್ಟಿದ್ದವು. ಈಗ ಎರಡೂ ಪ್ರಣಾಳಿಕೆಗಳು ಮುಖ್ಯ ಅಂಶಗಳನ್ನು ಸೇರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಗುರುತಿಸಿ ಅನುಷ್ಠಾನಗೊಳಿಸುತ್ತೇವೆ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತೇವೆ ಎಂದು ಪರಮೇಶ್ವರ್ ಭರವಸೆ ನೀಡಿದರು. 

Trending News