ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿದರೆ ಉಗ್ರ ಹೋರಾಟ: ಸಿದ್ದರಾಮಯ್ಯ

ಕೋಟ್ಯಂತರ ಜನರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹ ಮಹತ್ವದ ವ್ಯಾಪಾರಿ ಒಪ್ಪಂದದ ವಿವರವನ್ನು ಸಾರ್ವಜನಿಕ ಚರ್ಚೆಗೆ ಬಿಡದೆ ಗೌಪ್ಯತೆಯನ್ನು ಕಾಪಾಡಿಕೊಂಡು ಬರುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.   

Last Updated : Oct 25, 2019, 06:48 PM IST
ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿದರೆ ಉಗ್ರ ಹೋರಾಟ: ಸಿದ್ದರಾಮಯ್ಯ title=

ಬೆಂಗಳೂರು: 'ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(ಆರ್‌ಸಿಇಪಿ)ದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಯಾವುದೇ ಕಾರಣಕ್ಕೂ ಸಹಿ ಹಾಕಬಾರದು. ಈ ಬಗ್ಗೆ ಜನಾಭಿಪ್ರಾಯ ಪಡೆಯದೆ ಏಕಪಕ್ಷೀಯ ತೀರ್ಮಾನ ಕೈಗೊಂಡರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಭಾರತೀಯ ರೈತರನ್ನು ಮತ್ತೊಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಳಪಡಿಸುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದು ಖಂಡಿತ ನಮ್ಮ ರೈತರ ಹಿತಾಸಕ್ತಿಗೆ ವಿರುದ್ಧವಾದುದು.  ಆರ್‌ಸಿಇಪಿ ಒಪ್ಪಂದ ನಡೆಯದಂತೆ ಇಡೀ ದೇಶ ಹೋರಾಟ ನಡೆಸಬೇಕಾದ ಅಗತ್ಯ ಇದೆ. ಈ ಒಪ್ಪಂದದಿಂದ ನಿರುದ್ಯೋಗ ಸಮಸ್ಯೆ ಹೆಚ್ಚಲಿದ್ದು, ಜಿಡಿಪಿ ಕುಸಿಯಲಿದೆ. ಜತೆಗೆ ಗ್ರಾಮೀಣ ಪ್ರದೇಶದ ಆರ್ಥಿಕತೆ ನಾಶವಾಗಲಿದೆ ಎಂದು ಎಚ್ಚರಿಸಿದರು.

ನವಂಬರ್ 4ಕ್ಕೆ ಒಪ್ಪಂದಕ್ಕೆ ಭಾರತ ಸಹಿ ಹಾಕುವ ನಿರೀಕ್ಷೆಯಿದೆ. ಅದಕ್ಕಿಂತ ಮೊದಲು ಒಪ್ಪಂದದ ಕರಡನ್ನು ಬಹಿರಂಗಗೊಳಿಸಬೇಕು ಮತ್ತು ರೈತರು, ವ್ಯಾಪಾರಿಗಳು, ಉದ್ಯಮಿಗಳು ಹಾಗೆ ಈ ಒಪ್ಪಂದಕ್ಕೆ ಬದ್ಧವಾಗಿರಬೇಕಾದ ಎಲ್ಲ ಪಾಲುದಾರರ ಜೊತೆ ಕೇಂದ್ರ ಸರ್ಕಾರ ಚರ್ಚೆ ನಡೆಸಬೇಕು. ಕೋಟ್ಯಂತರ ಜನರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹ ಮಹತ್ವದ ವ್ಯಾಪಾರಿ ಒಪ್ಪಂದದ ವಿವರವನ್ನು ಸಾರ್ವಜನಿಕ ಚರ್ಚೆಗೆ ಬಿಡದೆ ಗೌಪ್ಯತೆಯನ್ನು ಕಾಪಾಡಿಕೊಂಡು ಬರುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. 

ಈ ಒಪ್ಪಂದದಲ್ಲಿ ಉಳಿದೆಲ್ಲ ದೇಶಗಳಿಗಿಂತ ಚೀನಾ ಸೇರಿಕೊಂಡಿರುವುದು ಭಾರತದ ಚಿಂತೆಗೆ ಕಾರಣವಾಗಿದೆ. ಒಂದೆಡೆ ಚೀನಾ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಅಮೆರಿಕದ ಜೊತೆ ಸಂಘರ್ಷದಲ್ಲಿ ತೊಡಗಿದೆ. ಚೀನಾದ ಜೊತೆ ಭಾರತ ಮುಕ್ತ ವ್ಯಾಪಾರದ ಒಪ್ಪಂದವೇರ್ಪಟ್ಟರೆ ಭಾರತ ಅನಿವಾರ್ಯವಾಗಿ ಅಮೆರಿಕ ವಿರೋಧಿ ನಿಲುವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಅಗ್ಗದ ಬೆಲೆಯ ವಸ್ತುಗಳು ಚೀನಾ ದೇಶದಿಂದ ಆಮದಾಗುತ್ತಿರುವುದರಿಂದ ದೇಶದ ಸಣ್ಣ ಮತ್ತು ಬೃಹತ್ ಉದ್ಯಮಗಳು, ಗುಡಿಕೈಗಾರಿಕೆಗಳು, ಕೃಷಿ ಕ್ಷೇತ್ರ ಅನಾರೋಗ್ಯಕರವಾದ ಪೈಪೋಟಿ ಎದುರಿಸಿ ನಾಶವಾಗುತ್ತಿವೆ ಎಂದು ವಿವರಿಸಿದರು. 

ಹಾಲು, ಹಾಲಿನ ಉತ್ಪನ್ನಗಳಿಗೆ ಭಾರತ ಒಂದು ದೊಡ್ಡ ಮಾರುಕಟ್ಟೆಯಾಗಿದ್ದು, ಒಪ್ಪಂದಕ್ಕೆ ಸಹಿ ಹಾಕಿದರೆ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾದ ಹಾಲು ಉತ್ಪನ್ನಗಳಿಗೆ ಭಾರತ ದೊಡ್ಡ ಮಾರುಕಟ್ಟೆ ಒದಗಿಸಲಿದೆ ಎಂದ ಅವರು, ಹಾಲು ಉತ್ಪಾದನೆಯಲ್ಲಿ ಭಾರತ ನಂ.1 ಸ್ಥಾನದಲ್ಲಿದೆ. ದೇಶದಲ್ಲೇ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೆ ಸ್ಥಾನದಲ್ಲಿದೆ. ರಾಜ್ಯದಲ್ಲಿ 15 ಸಾವಿರ ಹಾಲು ಉತ್ಪಾದಕ ಮಹಾ ಮಂಡಳಿಗಳಿವೆ(ಸೊಸೈಟಿ). ಎಸ್ಸಿ-ಎಸ್ಟಿ, ಒಬಿಸಿ ಸೇರಿದಂತೆ 25 ಲಕ್ಷಕ್ಕೂ ಅಧಿಕ ಮಂದಿ ಸದಸ್ಯರಿದ್ದಾರೆ. ಪ್ರತಿನಿತ್ಯ 78ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ರಾಜ್ಯದಲ್ಲಿ 1.5 ಕೋಟಿ ಜನ ಹೈನುಗಾರಿಕೆಯನ್ನೇ ಅವಲಂಬಿಸಿದ್ದು, ದೇಶದಲ್ಲಿ 10 ಕೋಟಿ ಜನ ಹಾಲು ಉತ್ಪಾದನೆಯಲ್ಲಿ ತೊಡಗಿದ್ದು, ಅವರು ಬೀದಿಗೆ ಬರಲಿದ್ದಾರೆ ಎಂದು ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಇದೇ ವೇಳೆ, ರಾಜ್ಯ ಸರ್ಕಾರದ ವಿರುದ್ದವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆರ್‌ಸಿಇಪಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೂಡಲೇ ಸರ್ವಪಕ್ಷ ಸಭೆ ಕರೆದು ಎಲ್ಲ ಪಕ್ಷಗಳ ಅಭಿಪ್ರಾಯಪಡೆದು, ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯಬೇಕು. ಒಪ್ಪಂದದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಪ್ರಧಾನಿ ಮೋದಿಗೆ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

Trending News