ಹದಿಹರೆಯದ ವಯಸ್ಸೆ ಹಾಗೆ... ಅದು ಪ್ರೀತಿ ಚಿಗುರುವ ಸಮಯ... ಕನಸ್ಸುಗಳಿಗೆ ರೆಕ್ಕೆ ಕಟ್ಟಿ ಹಾರುವ ವಯಸ್ಸಿನಲ್ಲಿ ಅದೆಷ್ಟೋ ಯುವ ಮನಸ್ಸುಗಳು ಪ್ರೀತಿಯ ಬಲೆಯಲ್ಲಿ ಬಿದ್ದು ನಕ್ಕು ನಲಿದು ಹೊಸ ಜೀವನದ ಆಸೆ ಕಾಣುತ್ತಾರೆ. ಪ್ರತಿ ಕ್ಷಣವೂ ಸಂಗಾತಿಯ ಜೊತೆ ಇರಬೇಕು ಅಂತ ಹಾತೋರೆಯುತ್ತಾರೆ. ಒಂದು ಕ್ಷಣವೂ ಬಿಟ್ಟಿರಲಾಗದ ತಳಮಳ. ನನಗೆ, ನನ್ನದು ಮಾತ್ರ ಅನ್ನೋ ಭಾವನೆ ಅರಳುವ ಹಾಗೆ ಈ ಪ್ರೀತಿ ಮಾಡುತ್ತೆ. ಸ್ವಾರ್ಥವೋ... ಭಯವೋ ಒಟ್ಟಾರೆ ನನಗೆ ಬೇಕು.. ನನ್ನ ಜೊತೆ ಮಾತ್ರ ಇರಬೇಕು ಅನ್ನೋ ಹಾಗೆ ಮಾಡಿಬಿಡುತ್ತೆ.
ಪ್ರೀತಿಯಲ್ಲಿ ಬಿದ್ದ ಆ ಕ್ಷಣ ಎಂದಿಗೂ ಮರೆಯಲಾಗದ ನೆನಪು.. ಆ ಕಣ್ಣೋಟ, ತುಂಟಾಟ, ತೊದಲು ನುಡಿ, ನಾಚಿಕೆಯ ಭಾವ, ಮೊದಲ ಸ್ಪರ್ಶ, ಜೊತೆಗಿರುವ ಹಂಬಲ ಹೀಗೆ ಎಲ್ಲವೂ ಪ್ರೇಮಲೋಕವಾಗಿರುತ್ತೆ. ಸಂಗಾತಿಯ ಜೊತೆಗಿದ್ದಾಗ ಯಾರ ವಿಚಾರವೂ ಬೇಡ, ಯಾವ ಕಲ್ಪನೆಗಳು ಬೇಡ.. ನಗುವಿನಂಚಿನಲ್ಲಿ ಮೂಡುವ ಮಾತುಗಳು ಅಮೃತವಾಗಿ ಮನಸ್ಸಿನಂಗಳದಲ್ಲಿ ನಲಿದಾಡುತ್ತಿರುತ್ತವೆ. ಹಾಗಂತ ಪ್ರತಿಯೊಬ್ಬ ಪ್ರೇಮಿಯಲ್ಲೂ ಹೀಗೆ ಆಗಿರುತ್ತೆ ಅಂತ ಅಂದುಕೊಳ್ಳಬೇಡಿ.. ಅದು ಅವರವರ ಮನಸ್ಸು ಮಿಡಿದ ಕ್ಷಣಗಳಲ್ಲಿ ಬರುವ ಭಾವನೆ ಅಷ್ಟೇ... ಸುಮಧುರವೋ... ಸವಿ ವಿಚಾರವೋ ಗೊತ್ತಿಲ್ಲ ಆದ್ರೆ ಪ್ರೀತಿಯಲ್ಲಿ ಬಿದ್ದ ಯುವ ಜೋಡಿಗಳ ಮನಸ್ಸಲ್ಲಿ ಹೊಸದೊಂದು ಪ್ರೇಮಪಯಣ ಮುಂಸಂಜೆಯ ಮಂಜಿನಲ್ಲಿ ತಿಳಿನೀರ ಮೇಲೆ ತೇಲಿದಂತೆ ಸಾಗುತ್ತದೆ.
ಪ್ರೀತಿಯಲ್ಲಿ ಜಗಳವಂತೂ ಮಾಮೂಲಿ ಬಿಡಿ ಅದರಲ್ಲೂ ಈ ಮೊಬೈಲ್ ಯುಗದಲ್ಲಿ ಕಿತ್ತಾಟ ಅನ್ನೋದು ಬೆಳ್ಳಿಗ್ಗೆ ರಾತ್ರಿಯ ಊಟದಂತೆ ಆಗಿಬಿಟ್ಟಿದೆ. ಪ್ರೀತಿ ಹುಟ್ಟಿದಾಗಲೇ ಅಲ್ಲಿ ಸ್ವಾರ್ಥ ಕೂಡ ತನಗೆ ಗೊತ್ತಿಲ್ಲದಂತೆಯೇ ಜನ್ಮ ತಾಳಿರುತ್ತೆ. ಸಂಗಾತಿ ಸಮಯ ಕೊಡದಾಗ.. ಬೇರೆಯವರ ಜೊತೆ ಕೊಂಚ ಸಲುಗೆಯಿಂದ ಇದ್ದಾಗ.. ಮೊಬೈಲ್ ಕಾಲ್ ಬ್ಯೂಸಿ ಬಂದಾಗ ಹೀಗೆ ನಾನಾ ಕೋಪ ತಾಪ ಪ್ರೀತಿಯಲ್ಲಿ ಜಗಳಕ್ಕೆ ಕಾರಣವಾಗಿರುತ್ತೆ. ಹುಸಿ ಮುನಿಸು ಕಂಡ ಕ್ಷಣದಲ್ಲಿ ತುಸು ನಕ್ಕು ಮುನ್ನಡೆದರೆ ಆ ಪ್ರೀತಿ ಶಾಶ್ವತವಾಗಿರುತ್ತೆ. ಆದ್ರೆ ಮನಸ್ಸಿನಲ್ಲಿ ಪ್ರೀತಿಗಿಂತ ಅಹಂಗೆ ಹೆಚ್ಚಿನ ಜಾಗ ಕೊಟ್ಟಾಗ ಪ್ರೀತಿ ಅಹಂ ಎಂಬ ಬೆಂಕಿಯಲ್ಲಿ ಸುಟ್ಟು ಜೀವನಕ್ಕೆ ಬಾಗಿದ ಕಬ್ಬಿನದ ಮೊಳೆಯಾಗಿ ಕಾಣಸಿಬಿಡುತ್ತೆ.
ಇದನ್ನೂ ಓದಿ- ಪ್ರೀತಿಯಲ್ಲಿ ನಂಬಿಕೆಯೇ ಇಲ್ಲದ ಮರುಳುಗಾಡಿನ ಪಯಣ
ಪ್ರೀತಿಯಲ್ಲಿ ಅನುಮಾನ ಅನ್ನೋದು ಕೂಡ ದೊಡ್ಡ ಹೊಂಡದಂತೆ. ಒಮ್ಮೆ ಹೊಂಡದಲ್ಲಿ ಇಳಿದ್ರೆ ಮೇಲಕ್ಕೆ ಬರಲು ಕಷ್ಟಸಾಧ್ಯ. ಅನುಮಾನ ಹುಟ್ಟಿದ ದಿನವೇ ಪ್ರೀತಿಯ ಅಂತರಾಳದಲ್ಲಿ ಕೊಂಚ ವಿಷ ಬೆರತು ಹೋಗಿರತ್ತೆ. ಅಳಿಸಲು ಸಾವಿರ ಪ್ರಯತ್ನ ಪಟ್ಟರೂ ಯಾವುದೋ ಮೂಲೆಯಲ್ಲಿ ಸಣ್ಣ ಕಲೆ ಗಾಯದಂತೆ ಉಳಿದುಬಿಡುತ್ತೆ. ಸದ್ಯ ಈ ಮೊಬೈಲ್ ಅನ್ನೋದು ಅನುಮಾನದ ಅಸ್ತ್ರವಾಗಿದೆ ಎಂದೆನಿಸಿದೆ. ಯಾರದ್ದೋ ಜೊತೆ ಹೆಚ್ಚು ಮಾತನಾಡಿದ್ರೆ, ತುಂಬಾ ಸಮಯ ಕಾಲ್ ಬ್ಯುಸಿ ಬಂದ್ರೆ, ತುಂಬಾ ಸಲ ಕಾಲ್ ಮಾಡಿದಾಗ ರಿಸೀವ್ ಮಾಡದೇ ಹೋದ್ರೆ, ಸಂಗಾತಿಯ ಸ್ನೇಹಿತರ ಜತೆ ಸಲುಗೆಯ ಮಾತುಗಳಾಡಿದ್ರೆ, ಇನ್ನೂ ಸಾವಿರಾರು ಕಾರಣಗಳು ಪ್ರೀತಿಯಲ್ಲಿ ವಿಷ ಬೀಜ ಹುಟ್ಟಲು ಕಾರಣವಾಗುತ್ತವೆ. ಒಂದೊಮ್ಮೆ ಈ ವಿಷ ಸಂಪೂರ್ಣ ಅಳಿಸಿ ಹೋಗಿದ್ದು ಉಂಟು. ಆದ್ರೆ ಪದೇ ಪದೇ ಅಂತಹ ಅನುಭವ ಮೇಲಿಂದ ಮೇಲೆ ಆದಾಗ ಪ್ರೀತಿಯ ದೋಣಿಯಲ್ಲಿ ನೀರು ನುಗ್ಗಿದ ಅನುಭವ ಖಂಡಿತಾ ಆಗುತ್ತೆ.
ಪ್ರೀತಿಯಲ್ಲಿ ಮಾತುಗಳು ಅದೆಷ್ಟು ಬಾಕಿ ಅನಿಸುತ್ತೆ ಅಂದ್ರೆ, ಅದು ಆಕಾದಲ್ಲಿನ ಚುಕ್ಕೆಗಳನ್ನು ಎಣಿಸಿದ ಹಾಗೆ. ಮಾತಾಡಿದ್ದು ಏನು ಅನ್ನೋದು ನೆನಪಲ್ಲಿ ಇರದೆ ಹೋದ್ರೂ ಕೂಡ ಗಂಟೆಗಂಟೆಗಳ ಕಾಲ ಮುಗುಳುನಗೆಯ ಮಾತುಗಳು ಪ್ರೇಮಿಗಳ ತುಟಿಯಂಚಿನಲ್ಲಿ ನಲೆದಾಡುತ್ತಲೇ ಇರುತ್ತವೆ. ಎಷ್ಟು ಮಾತನಾಡಿದ್ರೂ ಮಾತುಗಳೇ ಮುಗಿಯಲ್ಲ. ಮಾತುಗಳು ಮುಗಿದು ಬೇರೆಯವರ ಜೊತೆಗೆ ಇದ್ದಾಗಲೂ ಸಂಗಾತಿಯ ಪಿಸು ನಗು ಕಿವಿಯಲ್ಲಿ ಉಲ್ಲಾಸ ನೀಡಿದಂತೆ ಬಾಸವಾಗುತ್ತೆ.
ಇದನ್ನೂ ಓದಿ- Valentine's Day 2023: ಈ ಬಾರಿಯ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ನೀಡಿ ಈ ವಿಶಿಷ್ಟ ಉಡುಗೊರೆ
ಅದೇನೆ ಇರಲಿ ಮಾಮರದ ಹೊತ್ತಲ್ಲಿ ಕೋಗಿಲೆ ಖುಷಿ ಪಡುವ ಹಾಗೆ ಪ್ರೇಮಿಗಳ ಮನಸ್ಸು ಉಲ್ಲಾಸವಾಗಿರಬೇಕು ಅಷ್ಟೇ. ಜೀವನದ ಸಾಧನೆಯ ಮೆಟ್ಟಿಲುಗಳ ಜೊತೆಗೆ ಪ್ರೀತಿಯ ನಡಿಗೆ ಇದ್ದರೆ ಸಾವಿರ ಜನ್ಮದಲ್ಲೂ ಇದೇ ಸಂಗಾತಿ ಇರಲಿ ಅನ್ನೋ ಭಾವನೆ ಮೂಡತ್ತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.