ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ಸ್ಥಾಪನೆ: ಮುಖ್ಯಮಂತ್ರಿ ಭರವಸೆ

ಮುಖ್ಯಮಂತ್ರಿಗಳ ಕೊಡಗು ಪರಿಹಾರ ನಿಧಿಗೆ ಬಂದ ಹಣವನ್ನು ಸಂಪೂರ್ಣವಾಗಿ ಸಂತ್ರಸ್ತರ ಬದುಕು ಬದಲಾಯಿಸಲು ಹಾಗೂ ಅವರ ಪುನರ್ವಸತಿಗೆ ಬಳಕೆ ಮಾಡಲಾಗುವುದು.

Last Updated : Oct 18, 2018, 09:01 AM IST
ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ಸ್ಥಾಪನೆ: ಮುಖ್ಯಮಂತ್ರಿ ಭರವಸೆ title=

ಮಡಿಕೇರಿ: ಪ್ರಾಕೃತಿಕ ವಿಕೋಪದಿಂದ ನಲುಗಿರುವ ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಬುಧವಾರ ನಗರದ ಗಾಂಧೀ ಮೈದಾನದಲ್ಲಿ ಪ್ರಕೃತಿ ವಿಕೋಪದಿಂದ ಕಷ್ಟಕ್ಕೊಳಗಾಗಿರುವ ಕೊಡಗು ಜಿಲ್ಲೆಯ ಸಂತ್ರಸ್ಥರೊಂದಿಗೆ  ಸಂವಾದ ನಡೆಸಿ ಮಾತನಾಡಿದರು.  ಕೊಡಗಿನ ಪುನರ್ ನಿರ್ಮಾಣಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸಲು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿ,  ಪ್ರಾಧಿಕಾರ ರಚಿಸಲಾಗುವುದು. ಇದರಿಂದ ಪುನರ್ ನಿರ್ಮಾಣ ಕಾರ್ಯಕ್ರಮಗಳಿಗೆ ಇನ್ನಷ್ಟು ವೇಗ ಸಿಕ್ಕಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಕೊಡಗು ಜಿಲ್ಲೆಗೆ 127 ಕೋಟಿ ರೂಪಾಯಿ ಬಿಡುಗಡೆ:
ಇದುವರೆಗೆ ಕೊಡಗು ಜಿಲ್ಲೆಗೆ 127 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಕೊಡಗು ಪರಿಹಾರ ನಿಧಿಗೆ ಬಂದ ಹಣವನ್ನು ಸಂಪೂರ್ಣವಾಗಿ ಸಂತ್ರಸ್ತರ ಬದುಕು ಬದಲಾಯಿಸಲು ಹಾಗೂ ಅವರ ಪುನರ್ವಸತಿಗೆ ಬಳಕೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಇದರ ದುರ್ಬಳಕೆ ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಮನೆ ಕಳೆದುಕೊಂಡ ಸುಮಾರು 800 ಕುಟುಂಬಗಳಿಗೆ ತಾತ್ಕಾಲಿಕವಾಗಿ ಮಾಸಿಕ ರೂ. 10,000 ದವರೆಗೆ ಮನೆ ಬಾಡಿಗೆ ನೀಡಲಾಗುವುದು. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ನಿಯಮವನ್ನು ಬದಿಗಿಟ್ಟು ದೇಶದಲ್ಲಿಯೇ ಪ್ರಥಮ ಬಾರಿಗೆ ಮನೆ ಕಳೆದುಕೊಂಡವರಿಗೆ ಅತ್ಯಧಿಕ ಪರಿಹಾರ ನೀಡಲಾಗುತ್ತಿದೆ. ಪ್ರತೀ ಮನೆ ಪುನರ್ ನಿರ್ಮಾಣಕ್ಕೆ ಸಂತ್ರಸ್ತರಿಗೆ ಒಟ್ಟಾರೆಯಾಗಿ ರೂ. 8.53  ಲಕ್ಷ ಮೊತ್ತವನ್ನು ನೀಡಲಾಗುವುದು. ಮನೆಗಳ ಪುನರ್ ನಿರ್ಮಾಣ ಕಾರ್ಯವನ್ನು ಯುದ್ದೋಪಾಧಿಯಲ್ಲಿ ನಡೆಸಲಾಗುವುದು ಎಂದು ಸಿಎಂ ಹೇಳಿದರು.
    
ಗದ್ದೆ, ಕೃಷಿ ಜಮೀನು ಮತ್ತು ತೋಟಗಳಲ್ಲಿ ಕೃಷಿ ಕಾರ್ಯಗಳ ಪುನರ್ ಚಾಲನೆಗೆ ಕೊಡಗು ಜಿಲ್ಲೆಗೆ ಹೆಚ್ಚುವರಿಯಾಗಿ ವಿವಿಧ ಜಿಲ್ಲೆಗಳ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಅವರು ತಿಳಿಸಿದರು.

ಸಂತ್ರಸ್ತರ ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚ ಸರ್ಕಾರ ಭರಿಸಲಿದೆ:
ಸಂತ್ರಸ್ತರ ಮಕ್ಕಳ ಒಂದು ವರ್ಷದ ಸಂಪೂರ್ಣ ಶೈಕ್ಷಣಿಕ ಖರ್ಚುವೆಚ್ಚಗಳನ್ನು ರಾಜ್ಯ ಸರಕಾರ ನೋಡಿಕೊಳ್ಳಲಿದೆ. ಇದಲ್ಲದೇ, ಹಾನಿಗೊಂಡಿರುವ ಶಾಲಾ ಕಾಲೇಜುಗಳನ್ನು ಪುನರ್ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿಗಳು ಪ್ರಕಟಿಸಿದರು.  ಕೊಡಗಿಗೆ ಮತ್ತೊಮ್ಮೆ ಭೇಟಿ ನೀಡಿ ಪುನರ್ ವಸತಿ ಹಾಗೂ ಪರಿಹಾರ ಕಾರ್ಯಗಳನ್ನು ಪರಿಶೀಲಿಸಲಾಗುವುದು ಎಂದರು.

ಅತಿವೃಷ್ಠಿಯಿಂದ ಸಂಕಷ್ಟದಲ್ಲಿರುವ ಸಂತ್ರಸ್ತರಲ್ಲಿ ಆತ್ಮವಿಶ್ವಾಸ ತುಂಬಲು  ಸಂವಾದ ನಡೆಸಲಾಗುತ್ತಿದೆ. ಸಂತ್ರಸ್ತರು ಸರಕಾರದಿಂದ ಏನು ಬಯಸಿದ್ದಾರೆ ಎಂಬುದು ತಿಳಿಯುವುದು ಇದರ ಉದ್ದೇಶ. ಯಾವುದೇ ರಾಜಕೀಯ ಉದ್ದೇಶ ಇದರಲ್ಲಿ ಇಲ್ಲ. ಅಧಿಕಾರ ತನಗೆ ಮುಖ್ಯ ಅಲ್ಲ. ಕೊಡಗು ಸಂಕಷ್ಟದಲ್ಲಿದ್ದಾಗ ಇಲ್ಲಿನ ಸಂಘಸಂಸ್ಥೆಗಳು, ಜನಪ್ರತಿನಿಧಿಗಳು ಸ್ಪಂದಿಸಿದ್ದಾರೆ. 

ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಒದಗಿಸುವ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ ಎಂದು ತಿಳಿಸಿದ ಸಿಎಂ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸಂತ್ರಸ್ತರಿಗೆ  ತಲಾ ರೂ. 50 ಸಾವಿರ ಮೊತ್ತ ಪರಿಹಾರದ ತಿಳಿವಳಿಕೆ ಪತ್ರವನ್ನು ಸಾಂಕೇತಿಕವಾಗಿ ವಿತರಿಸಿದರು.

Trending News