ಧಾರವಾಡ: ದುಮ್ಮವಾಡ ಗ್ರಾಮದ ನಿವಾಸಿ ಬಸಯ್ಯ ಹಿರೇಮಠ ಎಂಬುವವರ ಜಮೀನಿನ 50x0 ಜಾಗೆಯಲ್ಲಿ ತಿಂಗಳಿಗೆ ರೂ.3,250/- ರಂತೆ ಬಾಡಿಗೆ ಕೊಡುವ ಕರಾರಿನ ಮೇಲೆ ಜಿ.ಟಿ.ಎಲ್. ಟಾವರ್ ಕಂಪನಿಗೆ ಹತ್ತು ವರ್ಷಗಳ ಕಾಲ ಗುತ್ತಿಗೆ ಪಡೆದು ಟಾವರ್ ನಿರ್ಮಾಣ ಮಾಡಿತ್ತು. ಎರಡು ವರ್ಷಗಳವರೆಗೆ ಸದರಿ ಕಂಪನಿ ದೂರುದಾರರಿಗೆ ಬಾಡಿಗೆ ಕೊಟ್ಟಿತ್ತು. ನಂತರ ಅವರು ಬಾಡಿಗೆ ಕೊಟ್ಟಿರಲಿಲ್ಲ. ಅಥವಾ ಟಾವರ್ ಕಿತ್ತುಕೊಂಡು ದೂರುದಾರರ ಜಾಗೆ ಖಾಲಿ ಮಾಡಿಕೊಟ್ಟಿರಲಿಲ್ಲ.ಅದರಿಂದ ತನಗೆ ತೊಂದರೆಯಾಗಿ ಎದುರುದಾರರಿಂದ ಸೇವಾ ನ್ಯೂನ್ಯತೆ ಆಗಿದೆ ಅಂತಾ ಹೇಳಿ ದೂರುದಾರ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: ಬಿಡಿಎ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಖುದ್ದು ಪರಿಶೀಲನೆ ನಡೆಸಿದ ನ್ಯಾ.ಬಿ.ಎಸ್.ಪಾಟೀಲ್
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಸದಸ್ಯರು ಎದುರುದಾರರು ಗುತ್ತಿಗೆ ಕರಾರಿನಂತೆ ತಿಂಗಳಿಗೆ ರೂ.3,250/- ರಂತೆ ಬಾಡಿಗೆ ಕೊಡದೇ ಮತ್ತು ಜಾಗವನ್ನು ಖಾಲಿ ಮಾಡಿಕೊಡದೇ ಗುತ್ತಿಗೆ ಕರಾರಿನ ಸಂಗತಿಗಳನ್ನು ಉಲ್ಲಂಘಿಸಿ, ಎದುರುದಾರ ಟಾವರ್ ಕಂಪನಿಯವರು ದೂರುದಾರನಿಗೆ ಮೋಸ ಮಾಡಿ ಗ್ರಾಹಕರ ಹಿತರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಇದನ್ನೂ ಓದಿ: ಭಾರತವನ್ನು ಸರ್ವಶ್ರೇಷ್ಠವಾಗಿಸುವ ಧ್ಯೇಯದೊಂದಿಗೆ ಆಡಳಿತ – ಸಿಎಂ ಬೊಮ್ಮಾಯಿ
2009ನೇ ಇಸವಿಯಿಂದ ಇಲ್ಲಿಯವರೆಗೆ ತಿಂಗಳಿಗೆ ರೂ.3,250/- ರಂತೆ ಟಾವರ ಅಳವಡಿಕೆಯ ಬಾಡಿಗೆ ಹಣ ರೂ.3,81,875/-ಗಳನ್ನು ಶೇ.8% ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ, ಮಾನಸಿಕ ತೊಂದರೆ ಮತ್ತು ಹಾನಿಗಾಗಿ ರೂ.50,000/-ಗಳ ಪರಿಹಾರ ಜೊತೆಗೆ ಪ್ರಕರಣದ ಖರ್ಚು ರೂ.10,000/-ಗಳನ್ನು ಈ ಆದೇಶದ ದಿನಾಂಕದಿಂದ 30 ದಿನಗಳ ಒಳಗಾಗಿ ದೂರುದಾರರಿಗೆ ಕೊಡಲು ಎದುರುದಾರರಿಗೆ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ. ಅಲ್ಲದೇ ಈ ತೀರ್ಪು ಆದ 2 ತಿಂಗಳ ಒಳಗಾಗಿ ಎದುರುದಾರರು ತಾವು ಅಳವಡಿಸಿದ ಜಿ.ಟಿ.ಎಲ್. ಟಾವರ್ ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ತೆಗೆದುಕೊಂಡು ಹೋಗಿ ಖಾಲಿ ಜಾಗವನ್ನು ದೂರುದಾರರ ಸ್ವಾಧೀನತೆಗೆ ನೀಡುವಂತೆ ಆದೇಶಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.