ಮೊರದಾಬಾದ್: ಅಪ್ರಾಪ್ತ ಬಾಲಕಿಗೆ ಚಾಕೊಲೇಟ್ ನೀಡಿ ವ್ಯಕ್ತಿಯೋರ್ವ ಅತ್ಯಾಚಾರ ಎಸಗಲು ಯತ್ನಿಸಿದ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.
ಘಟನೆ ಬಗ್ಗೆ ಮಾತನಾಡಿದ ಡಿಎಸ್ಪಿ ರಾಜೇಶ್ ಕುಮಾರ್, "ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಆಸ್ಪತ್ರೆಯ ಸಿಸಿಟಿವಿ ಫೂಟೆಜ್ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದೇವೆ. ಸಿಸಿಟಿವಿ ದೃಶ್ಯಗಳ ಮೂಲಕ ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸುತ್ತೇವೆ, ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.
ಉತ್ತರಪ್ರದೇಶ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ವಿಶೇಷ್ ಗುಪ್ತಾ ಅವರೂ ಸಹ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಘಟನೆಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ಮಾಹಿತಿ ಪಡೆಯಲು ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಆಸ್ಪತ್ರೆಯ ಮಹಿಳಾ ವಾರ್ಡ್'ನಲ್ಲಿ ಭದ್ರತಾ ವೈಫಾಲ್ಯ ಎದ್ದು ಕಾಣುತ್ತಿದೆ. ಹಲವೆಡೆ ಸಿಸಿಟಿವಿ ಅಳವಡಿಸಲಾಗಿಲ್ಲ. ಸಂತ್ರಸ್ತೆಯ ಪೋಷಕರ ಹೇಳಿಕೆಗಳನ್ನೂ ಪಡೆದಿದ್ದೇವೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗುವುದು" ಎಂದು ಹೇಳಿದರು.