ಮೇಲ್ಜಾತಿಗೆ ಮೀಸಲಾತಿ ನೀಡಲು ಶಿಕ್ಷಣ ಸಂಸ್ಥೆಗಳಲ್ಲಿ ಶೇ.25 ಸೀಟು ಹೆಚ್ಚಳ: ಕೇಂದ್ರ ಸಚಿವ

ಮೀಸಲಾತಿ ಮತ್ತು ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಯೋಜನೆ ಜಾರಿಯಾಗುತ್ತಿದೆ. ಒಂದು ವಾರದೊಳಗೆ ಪೂರ್ಣ ಚಿತ್ರಣ ದೊರೆಯಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

Last Updated : Jan 16, 2019, 07:15 AM IST
ಮೇಲ್ಜಾತಿಗೆ ಮೀಸಲಾತಿ ನೀಡಲು ಶಿಕ್ಷಣ ಸಂಸ್ಥೆಗಳಲ್ಲಿ ಶೇ.25  ಸೀಟು ಹೆಚ್ಚಳ: ಕೇಂದ್ರ ಸಚಿವ title=

ನವದೆಹಲಿ: 2019-20 ನೇ ಸಾಲಿನಲ್ಲಿ ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ಜಾರಿ ಹಾಗೂ ದೇಶಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿನ ಸೀಟುಗಳ ಪ್ರಮಾಣವನ್ನು ಶೇ.25ರಷ್ಟು ಹೆಚ್ಚಳ ಮಾಡಲಾಗುವುದು ಎಂದು ಕೇಂದ್ರೀಯ ಮಾನವ ಸಂಪನ್ಮೂಲ ಇಲಾಖೆ ತಿಳಿಸಿದೆ. 

ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

"2019-2020ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಮೀಸಲಾತಿ ಜಾರಿಗೆ ಬರಲಿದೆ. ಆದರೆ, ಇದರಿಂದ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ವರ್ಗ ಹಾಗೂ ಇತರ ವರ್ಗಗಳ ಮೀಸಲಾತಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈಗಾಗಲೇ ಮೀಸಲಾತಿ ಮತ್ತು ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಯೋಜನೆ ಜಾರಿಯಾಗುತ್ತಿದೆ. ಒಂದು ವಾರದೊಳಗೆ ಪೂರ್ಣ ಚಿತ್ರಣ ದೊರೆಯಲಿದೆ. ಅಲ್ಲದೆ, ಮೀಸಲಾತಿಯನ್ನು ಹೇಗೆ ಜಾರಿ ಮಾಡಬೇಕು ಎಂಬುದರ ಬಗ್ಗೆಯೂ ಕೈಪಿಡಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. 

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಮೇಲ್ಜಾತಿಗೆ ಮೀಸಲು
ಕೇವಲ ಸರ್ಕಾರಿ ವಿಶ್ವವಿದ್ಯಾನಿಲಯಗಳಲ್ಲದೆ, ಖಾಸಗಿ ಶಿಕ್ಷಣ ಸಂಸ್ಥೆಗಳೂ ಸಹ ಮೇಲ್ಜಾಜಿ ಮೀಸಲು ಜಾರಿಗೆ ಸಮ್ಮತಿ ಸೂಚಿಸಿವೆ. ಹಾಗಾಗಿ ಶಿಕ್ಷಣ ಸಂಸ್ಥೆಗಳು ಮಾಹಿತಿ ಪತ್ರದಲ್ಲಿ ಮೀಸಲಾತಿ ಬಗ್ಗೆ ಮಾಹಿತಿ ನೀಡಬೇಕು. ಹಾಗೆಯೇ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಜಾವಡೇಕರ್ ಹೇಳಿದ್ದಾರೆ. 

ಸೋಮವಾರದಿಂದಲೇ ಮೇಲ್ಜಾತಿ ಮೀಸಲಾತಿ ಜಾರಿ
ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರಿ ನೌಕರಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ.10 ಮೀಸಲಾತಿ ನೀಡುವ ಯೋಜನೆ ಸೋಮವಾರದಿಂದಲೇ ಜಾರಿಯಾಗಿದೆ. ಈ ಬಗ್ಗೆ ಸರ್ಕಾರ ಈಗಾಗಲೇ ಪ್ರಕಟಣೆ ಹೊರಡಿಸಿದ್ದು, ಜನವರಿ 14, 2019ರಂದು ಈ ಸಂವಿಧಾನ (103 ತಿದ್ದುಪಡಿ) ಕಾಯಿದೆಗೆ ರಾಷ್ಟ್ರಪತಿ  ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. 

Trending News