ಫೆಬ್ರವರಿ ತಿಂಗಳ ಕೊನೆಯ ವೇಳೆಗೆ, ಎಸ್ಬಿಯು ಅಧಿಕಾರಿಗಳಿಗೆ ಬೆಲಾರಸ್ನಲ್ಲಿದ್ದ ಅವರ ಏಜೆಂಟ್ಗಳು ಸೂಚನೆಗಳನ್ನು ಮೀರಿ, ರಷ್ಯಾದ ವಿಚಕ್ಷಣಾ ವಿಮಾನದ ಮೇಲೆ ದಾಳಿ ನಡೆಸಿದ್ದು, ಅದನ್ನು ಅಮೆರಿಕಾದ ಗುಪ್ತಚರರು ತಿಳಿದುಕೊಂಡಿರುವುದು ಗಮನಕ್ಕೆ ಬಂತು. ಈ ಮಾಹಿತಿ ಅಮೆರಿಕನ್ ಜಾಯಿಂಟ್ ಸ್ಟಾಫ್ ಮಾರ್ಚ್ 1ರಂದು ಬಿಡುಗಡೆಗೊಳಿಸಿದ, ಉಕ್ರೇನ್ ಯುದ್ಧದ ಕುರಿತ ರಹಸ್ಯ ವರದಿಯಲ್ಲಿ ಸೇರಿತ್ತು. ಆದರೆ ಕೆಲವೇ ದಿನಗಳಲ್ಲಿ, ಈ ವರದಿ ಮತ್ತು 50 ಇತರ ವರದಿಗಳು ಆನ್ಲೈನ್ನಲ್ಲಿ ಸೋರಿಕೆಯಾಗಿದ್ದವು. ಇದು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಅಮೆರಿಕಾದ ಅತಿದೊಡ್ಡ ಗುಪ್ತಚರ ವೈಫಲ್ಯ ಎನಿಸಿಕೊಂಡಿದೆ.
ಇತ್ತೀಚೆಗೆ, ಅಮೆರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ರಹಸ್ಯ ಕಡತಗಳು ಸಾರ್ವಜನಿಕರಿಗೆ ಲಭ್ಯವಾಗಿದ್ದು, ಅದರಲ್ಲಿ ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಮಿಲಿಟರಿ ಲೆಕ್ಕಾಚಾರಗಳು, ವಿವಿಧ ಜಾಗತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸಿಐಎ ನೀಡಿದ ವರದಿಗಳೂ ಸೇರಿದ್ದವು. ಈ ಕಡತಗಳು ಮೊದಲು ರಷ್ಯಾದಲ್ಲಿ ಹೆಚ್ಚಾಗಿ ಬಳಸಲಾಗುವ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ ಹರಿದಾಡಿ, ಆ ಮೂಲಕ ಸಾರ್ವಜನಿಕರ ಗಮನಕ್ಕೆ ಬಂದವು. ಬೆಲ್ಲಿಂಗ್ ಕ್ಯಾಟ್ ಎಂಬ ಖಾಸಗಿ ತನಿಖಾ ಸಂಸ್ಥೆ ಈ ದಾಖಲೆಗಳಲ್ಲಿ ಕೆಲವು ಡಿಸ್ಕಾರ್ಡ್ ಎಂಬ ವೀಡಿಯೋ ಗೇಮ್ ಆಸಕ್ತರ ಅಪ್ಲಿಕೇಶನ್ನಲ್ಲಿ ಮಾರ್ಚ್ 1-2ರಂದು ಹರಿದಾಡಿತ್ತು ಎಂದು ವರದಿ ಮಾಡಿತ್ತು. ಬೆಲ್ಲಿಂಗ್ ಕ್ಯಾಟ್ ಪ್ರಕಾರ, ಹಲವು ರಹಸ್ಯ ಮಾಹಿತಿಗಳು ಜನವರಿ ತಿಂಗಳಲ್ಲೇ ಬಯಲಾಗಿದ್ದವು.
ಎಕನಾಮಿಸ್ಟ್ ಪತ್ರಿಕೆಯ ಪ್ರಕಾರ, ಟೆಲಿಗ್ರಾಮ್ ಆ್ಯಪ್ನಲ್ಲಿ ಪ್ರಕಟವಾದ ಹಲವು ಸ್ಲೈಡ್ಗಳಲ್ಲಿನ ಮಾಹಿತಿಗಳನ್ನು ಬದಲಾಯಿಸಿ, ಯುದ್ಧದಲ್ಲಿ ಉಕ್ರೇನ್ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿ, ರಷ್ಯಾದ ಸೈನಿಕರು ಕಡಿಮೆ ಸಾವಿಗೀಡಾಗಿದ್ದಾರೆ ಎಂದು ಪ್ರಚಾರ ಮಾಡಿದ್ದವು. ಆದರೆ ಇನ್ನುಳಿದ ವಿಚಾರಗಳನ್ನು ಇದ್ದ ಹಾಗೆಯೇ ಹಂಚಲಾಗಿತ್ತು. ಮಾಜಿ ಅಮೆರಿಕನ್ ಹಾಗೂ ಯುರೋಪಿಯನ್ ಗುಪ್ತಚರ ಅಧಿಕಾರಿಗಳು ಇವುಗಳು ನಿಜಕ್ಕೂ ಅಮೆರಿಕಾದ ಅಧಿಕೃತ ದಾಖಲೆಗಳಾಗಿರಬಹುದು ಎಂದು ಭಾವಿಸಿದ್ದು, ಪೆಂಟಗನ್ ಸಹ ಇದನ್ನು ಬಹುತೇಕ ದೃಢೀಕರಿಸಿತ್ತು. ಅಮೆರಿಕಾದ ನ್ಯಾಯಾಂಗ ಇಲಾಖೆ ಈ ಮಾಹಿತಿಗಳು ಎಲ್ಲಿಂದ ಸೋರಿಕೆಯಾಗಿರಬಹುದು ಎಂದು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದರೆ, ಬಿಡನ್ ಆಡಳಿತ ಈ ಮಾಹಿತಿಗಳು ಹೇಗೆ ಹಂಚಿಕೆಯಾದವು, ಯಾರಿಗೆ ಹಂಚಿಕೆಯಾದವು ಎಂದು ತಿಳಿಯಲು ಪ್ರಯತ್ನ ನಡೆಸುತ್ತಿದೆ. ಪ್ರಸ್ತುತ ಉಕ್ರೇನ್ ಮರುದಾಳಿಗೆ ಸಿದ್ಧತೆ ನಡೆಸುತ್ತಿದ್ದು, ಇಂತಹ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ರಹಸ್ಯ ಮಾಹಿತಿಗಳು ಉಕ್ರೇನ್ ಸೇನೆಯ ಪರಿಸ್ಥಿತಿಗಳ ಕುರಿತು ಮಾಹಿತಿ ನೀಡುತ್ತವೆ.
ಈ ದಾಖಲೆಗಳಲ್ಲಿ ಉಕ್ರೇನಿನ ಸೇನೆಯನ್ನು ಸಜ್ಜುಗೊಳಿಸಲು, ಆಯುಧಗಳನ್ನು ಪೂರೈಸಲು ಪಾಶ್ಚಾತ್ಯ ದೇಶಗಳ ಕಾರ್ಯತಂತ್ರಗಳು ಮತ್ತು ಪ್ರತಿಯೊಂದು ಉಕ್ರೇನಿಯನ್ ಬ್ರಿಗೇಡಿನ ಪರಿಸ್ಥಿತಿಗಳು, ಅವುಗಳು ಪ್ರತಿದಿನವೂ ಬಳಸುವ ಶೆಲ್ಗಳು ಹಾಗೂ ರಾಕೆಟ್ಗಳ ಸಂಖ್ಯೆಗಳೂ ವಿವರಿಸಲ್ಪಟ್ಟಿವೆ. ಒಂದು ವೇಳೆ ಈ ಮಾಹಿತಿಗಳೇನಾದರೂ ನಿಜವೆಂದು ಸಾಬೀತಾದರೆ, ರಷ್ಯಾದ ಸೇನಾ ಗುಪ್ತಚರರಿಗೆ ಎಷ್ಟು ಉಕ್ರೇನಿನ ಬ್ರಿಗೇಡ್ಗಳು ರಷ್ಯಾದ ರಕ್ಷಣೆಯನ್ನು ಭೇದಿಸಲು ಸಜ್ಜಾಗಿವೆ ಎಂಬುದೂ ತಿಳಿಯುತ್ತದೆ. ಇದು ರಷ್ಯಾಗೆ ತನ್ನ ಮೇಲೆ ಪ್ರತಿದಾಳಿ ನಡೆಯುವ ಪ್ರದೇಶಗಳ ಕುರಿತು ಸೂಕ್ಷ್ಮವಾಗಿ ತಿಳಿಯಲು ಅನುಕೂಲ ಮಾಡಿಕೊಡುತ್ತದೆ. ದಾಖಲೆಗಳ ಒಂದು ಸ್ಲೈಡ್ ಉಕ್ರೇನ್ ಸೇನೆಯ 10ನೇ ಕಾರ್ಪ್ಸ್ ರಷ್ಯಾ ಮೇಲೆ ದಾಳಿ ಕೈಗೆತ್ತಿಕೊಳ್ಳಲಿದೆ ಎಂದಿದ್ದು, ಆ ಪಡೆಯನ್ನು ಸಹಜವಾಗಿಯೇ ರಷ್ಯಾ ತನ್ನ ಗುರಿಯಾಗಿಸಲಿದೆ.
ಅತ್ಯಂತ ತೊಂದರೆದಾಯಕ ಎಂದು ಗುರುತಿಸಲ್ಪಟ್ಟಿರುವ ದಾಖಲೆಗಳು ಉಕ್ರೇನಿನ ವಾಯು ರಕ್ಷಣೆಯ ಸ್ಥಿತಿಯನ್ನು ವಿವರಿಸುತ್ತವೆ. ಅಕ್ಟೋಬರ್ ತಿಂಗಳ ಬಳಿಕ, ರಷ್ಯಾದ ಸತತ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳಿಂದಾಗಿ ಈ ವಾಯು ರಕ್ಷಣೆಗಳು ಸಾಕಷ್ಟು ಆಘಾತಕ್ಕೊಳಗಾಗಿವೆ. ದಾಖಲೆಗಳ ಪ್ರಕಾರ, ಉಕ್ರೇನಿನ ಬುಕ್ ಕ್ಷಿಪಣಿಗಳನ್ನು ಇದೇ ರೀತಿ ಬಳಸುವುದು ಮುಂದುವರಿದರೆ, ಅದು ಮಾರ್ಚ್ 31ರ ವೇಳೆಗೆ ಖಾಲಿಯಾಗಬಹುದು ಎನ್ನಲಾಗಿತ್ತು. ಆದರೆ ಆ ರೀತಿ ಆಗಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅದರೊಡನೆ, ಎಸ್-300 ಕ್ಷಿಪಣಿಗಳು ಬಹುತೇಕ ಮೇ 2ರ ತನಕ ಬಳಕೆಗೆ ಸಿಗಬಹುದು. ಈ ಎರಡೂ ಕ್ಷಿಪಣಿಗಳು ಉಕ್ರೇನಿನ ಮಧ್ಯಮ ವ್ಯಾಪ್ತಿಯ ವಾಯು ರಕ್ಷಣೆಯ 90%ದಷ್ಟು ಭಾಗಗಳಾಗಿವೆ. ಪಾಶ್ಚಾತ್ಯ ವಾಯು ರಕ್ಷಣಾ ವ್ಯವಸ್ಥೆಗಳು ಸೇರಿದಂತೆ, ಇನ್ನುಳಿದ ಬ್ಯಾಟರಿಗಳು ರಷ್ಯಾದ ದಾಳಿಯನ್ನು ಎದುರಿಸುವಷ್ಟು ಸಮರ್ಥವಾಗಿಲ್ಲ ಎಂದು ಪೆಂಟಗನ್ ವರದಿ ಮಾಡಿದೆ. ಆದರೆ ಪೆಂಟಗನ್ ಇತ್ತೀಚೆಗೆ ಇನ್ನಷ್ಟು ಇಂಟರ್ಸೆಪ್ಟರ್ ಕ್ಷಿಪಣಿಗಳನ್ನು ಕಳುಹಿಸುವುದಾಗಿ ಘೋಷಿಸಿದೆ. ರಹಸ್ಯ ಕಡತಗಳ ಪ್ರಕಾರ, ಮೇ 23ರ ವೇಳೆಗೆ ಉಕ್ರೇನಿಗೆ ತನ್ನ ಪ್ರಾಂತ್ಯಗಳನ್ನು ರಕ್ಷಿಸುವ ಸಾಮರ್ಥ್ಯ ಸಂಪೂರ್ಣವಾಗಿ ನಶಿಸಲಿದೆ. ಈ ದಾಖಲೆಗಳಲ್ಲಿನ ಕೋಷ್ಟಕಗಳು ಪ್ರತಿಯೊಂದು ಮಾದರಿಯ ಕ್ಷಿಪಣಿಗಳು ಯಾವಾಗ ಖಾಲಿಯಾಗಬಹುದು ಎಂಬ ದಿನಾಂಕಗಳನ್ನೂ ಹೊಂದಿದ್ದು, ಪ್ರತಿಯೊಂದು ಕ್ಷಿಪಣಿ ಪಡೆಗಳ ಸರಿಯಾದ ಸ್ಥಾನವನ್ನೂ ಗುರುತಿಸುತ್ತದೆ.
ಸೋರಿಕೆಯಾದ ದಾಖಲೆಗಳು ರಷ್ಯಾದ ಮಿಲಿಟರಿ ಸಾಮರ್ಥ್ಯದ ಕುರಿತೂ ಒಂದಷ್ಟು ಬೆಳಕು ಚೆಲ್ಲುತ್ತವೆ. ಉಕ್ರೇನಿನ ಪೂರ್ವದ ಬಾಖ್ಮುಟ್ ನಗರದಲ್ಲಿ ವಿಧ್ವಂಸ ನಡೆಸಿದ ಬಳಿಕವೂ, ರಷ್ಯಾದ ಸೇನಾಪಡೆಗಳು ಸಾಕಷ್ಟು ದುರ್ಬಲವಾಗಿವೆ.
ಉಕ್ರೇನಿನ ಮಿಲಿಟರಿ ಗುಪ್ತಚರ ಮುಖ್ಯಸ್ಥರ ಹೇಳಿಕೆಯೂ ಈ ವರದಿಗಳಲ್ಲಿ ಉಲ್ಲೇಖವಾಗಿದ್ದು, ಫೆಬ್ರವರಿ 28ರ ವೇಳೆಗೆ ಬಾಖ್ಮುಟ್ ನಗರದ ಪರಿಸ್ಥಿತಿ ದುರಂತಮಯವಾಗಿತ್ತು ಎಂದಿದ್ದಾರೆ. ಅಮೆರಿಕನ್ ಡಿಫೆನ್ಸ್ ಇಂಟಲಿಜೆನ್ಸ್ ಏಜೆನ್ಸಿಯ ಲೆಕ್ಕಾಚಾರದ ಪ್ರಕಾರ, ರಷ್ಯಾದ 35,000 - 43,000 ಸೈನಿಕರು ಸಾವಿಗೀಡಾಗಿದ್ದು, ಇದು ಉಕ್ರೇನಿನ ಸೈನಿಕರ ಸಾವಿನ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚಾಗಿದೆ. ಅದರೊಡನೆ, 1,54,000 ರಷ್ಯನ್ ಸೈನಿಕರು ಗಾಯಾಳುಗಳಾಗಿದ್ದು, ಇದು ಉಕ್ರೇನಿನ ಗಾಯಾಳುಗಳ ಸಂಖ್ಯೆಗಿಂತ 40 ಪಟ್ಟು ಹೆಚ್ಚಾಗಿದೆ. ಏಜೆನ್ಸಿ ಈ ಸಂಖ್ಯೆ ಅಷ್ಟೊಂದು ಕರಾರುವಕ್ಕಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದೆ. ಅದಲ್ಲದೆ, ರಷ್ಯಾ 2,000ಕ್ಕೂ ಹೆಚ್ಚು ಯುದ್ಧ ಟ್ಯಾಂಕ್ಗಳನ್ನು ಕಳೆದುಕೊಂಡಿದ್ದು, ಪ್ರಸ್ತುತ ಕೇವಲ 419 ಟ್ಯಾಂಕ್ಗಳು ಕಾರ್ಯಾಚರಣೆ ನಡೆಸುವ ಪರಿಸ್ಥಿತಿಯಲ್ಲಿವೆ. ವರದಿಯ ಒಂದು ಸ್ಲೈಡ್ ಪ್ರಕಾರ, ಉಕ್ರೇನಿನ ಪೂರ್ವದಲ್ಲಿ ರಷ್ಯಾದ ತಿಕ್ಕಾಟ ಹಿನ್ನಡೆಯತ್ತ ಸಾಗುತ್ತಿದೆ ಮತ್ತು ಈ ಯುದ್ಧ 2023ರ ನಂತರವೂ ಮುಂದುವರಿಯುವ ಲಕ್ಷಣಗಳಿವೆ.
ಈ ದಾಖಲೆಯ ಪ್ರಕಾರ, ಬ್ರಿಟನ್, ಲ್ಯಾಟ್ವಿಯಾ, ಫ್ರಾನ್ಸ್, ಹಾಗೂ ಅಮೆರಿಕಾ ಸೇರಿದಂತೆ ನ್ಯಾಟೋ ದೇಶಗಳ 97 ವಿಶೇಷ ಪಡೆಗಳ ಸದಸ್ಯರು ಉಕ್ರೇನಿನಲ್ಲಿದ್ದಾರೆ. ಈ ಮಾಹಿತಿ ಇನ್ನಷ್ಟು ರಾಜಕೀಯ ಪರಿಣಾಮಗಳಿಗೆ ದಾರಿ ಮಾಡಿಕೊಡಲಿದೆ. ಆದರೆ ಈ ವಿಶೇಷ ಪಡೆಯ ಸದಸ್ಯರು ಉಕ್ರೇನ್ ಸೈನಿಕರಿಗೆ ಕೇವಲ ತರಬೇತಿ ನೀಡುತ್ತಿರುವ ಸಾಧ್ಯತೆಗಳು ಇವೆಯಾದರೂ, ರಷ್ಯಾ ಈ ಮಾಹಿತಿಯನ್ನು ತನ್ನ ವಾದಕ್ಕೆ ಪೂರಕವಾಗಿ ಬಳಸಿಕೊಂಡು, ತಾನು ಕೇವಲ ಉಕ್ರೇನ್ ಜೊತೆ ಮಾತ್ರವೇ ಯುದ್ಧ ಮಾಡುತ್ತಿಲ್ಲ, ಬದಲಿಗೆ ಇಡಿಯ ನ್ಯಾಟೋದ ವಿರುದ್ಧ ಸೆಣಸುತ್ತಿದ್ದೇನೆ ಎಂದು ಸಾಬೀತುಪಡಿಸಲು ಪ್ರಯತ್ನ ನಡೆಸಬಹುದು.
ಈ ಸೋರಿಕೆಗಳ ಪ್ರಕಾರ, ಅಮೆರಿಕಾದ ಗುಪ್ತಚರ ಇಲಾಖೆಗಳು ತಮ್ಮ ಮಿತ್ರರಾಷ್ಟ್ರಗಳಿಂದಲೂ ಗುಪ್ತಚರ ಮಾಹಿತಿ ಕಲೆಹಾಕುತ್ತವೆ. 2013ರಲ್ಲಿ ಅಮೆರಿಕಾ ಆಗಿನ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಸೇರಿದಂತೆ ಜಾಗತಿಕ ನಾಯಕರ ವಿರುದ್ಧ ಬೇಹುಗಾರಿಕೆ ನಡೆಸಿದ ಆರೋಪ ಬೆಳಕಿಗೆ ಬಂದಾಗ ಜಗತ್ತಿನಾದ್ಯಂತ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಈಗಿನ ಮಾಹಿತಿಯ ಪ್ರಕಾರ, ಅಮೆರಿಕಾದ ಗುಪ್ತಚರ ಸಂಸ್ಥೆಗಳು ಕೇವಲ ಉಕ್ರೇನಿನ ಮಿಲಿಟರಿ ಅಧಿಕಾರಿಗಳ ಮೇಲೆ ಮಾತ್ರವೇ ಬೇಹುಗಾರಿಕೆ ನಡೆಸುತ್ತಿಲ್ಲ. ಬದಲಿಗೆ ಹಂಗರಿ, ಇಸ್ರೇಲ್, ದಕ್ಷಿಣ ಕೊರಿಯಾ, ಹಾಗೂ ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ ಸೇರಿದಂತೆ ಮಿತ್ರ ರಾಷ್ಟ್ರಗಳ ಮೇಲೂ ಬೇಹುಗಾರಿಕೆ ನಡೆಸಿದೆ. ಸಿಐಎ ವರದಿಯೊಂದರ ಪ್ರಕಾರ, ಇಸ್ರೇಲಿನ ವಿದೇಶೀ ಗುಪ್ತಚರ ಸಂಸ್ಥೆ ಮೊಸಾದ್ನ ನಾಯಕರು ತನ್ನ ಅಧಿಕಾರಿಗಳು ಮತ್ತು ನಾಗರಿಕರನ್ನು ವಿವಾದಾತ್ಮಕ ಕಾನೂನು ಸುಧಾರಣೆಗಳ ವಿರುದ್ಧ ಪ್ರತಿಭಟಿಸುವಂತೆ ಕರೆ ನೀಡಿದ್ದರು. ಅದರ ಪರಿಣಾಮವಾಗಿ ಆ ಸುಧಾರಣೆಗಳನ್ನು ಕ್ರಮೇಣ ಕೈ ಬಿಡಲಾಗಿತ್ತು.
ಈ ಕಡತಗಳು ಕೇವಲ ಅಮೆರಿಕಾದ ಗುಪ್ತಚರ ಚಟುವಟಿಕೆಗಳ ಗುರಿಗಳನ್ನು ಮಾತ್ರ ಬಯಲು ಮಾಡಿಲ್ಲ. ಅದರೊಡನೆ, ಅದಕ್ಕೆ ಬಳಸುವ ವಿಧಾನಗಳನ್ನೂ ಬಯಲು ಮಾಡಿದೆ. ಉದಾಹರಣೆಗೆ, ಬೆಲಾರಸ್ ವಿಮಾನ ದಾಳಿಗೆ ಎಸ್ಬಿಯು ಸಹಕಾರವನ್ನು "ಎಸ್ಐ-ಜಿ" ಎಂದು ಗುರುತಿಸಲಾಗಿದೆ. ಇದೊಂದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಇಲೆಕ್ಟ್ರಾನಿಕ್ ಸಂವಹನ ಮತ್ತು ಫೋನ್ ಟ್ಯಾಪಿಂಗ್ಗಳನ್ನೂ ಒಳಗೊಂಡಿದೆ. ಸೋರಿಕೆಯಾದ ದಾಖಲೆಗಳು ರಷ್ಯನ್ ಗುಪ್ತಚರ ಮತ್ತು ಮಿಲಿಟರಿ ವ್ಯಕ್ತಿಗಳೂ ಸೇರಿದಂತೆ, ವಿವಿಧ ಜನರ ಮತ್ತು ಗುಂಪುಗಳ ನಡುವಿನ ಸಂವಹನವನ್ನು ಒಳಗೊಂಡಿವೆ. ಇದರ ಪರಿಣಾಮವಾಗಿ, ಅಮೆರಿಕಾ ಹೇಗೆ ಗುಪ್ತಚರ ಮಾಹಿತಿ ಕಲೆಹಾಕುತ್ತದೆ ಎನ್ನುವುದು ಅದರ ಗುರಿಗಳಿಗೆ ಎಚ್ಚರಿಕೆಯ ಗಂಟೆಯಾಗಬಹುದು.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿರುವ ಥಾಮಸ್ ರಿಡ್ ಅವರ ಪ್ರಕಾರ, ಈ ರೀತಿಯಲ್ಲಿ ರಹಸ್ಯ ಕಡತಗಳು ಬಯಲಾಗಿರುವುದು ಈ ಶತಮಾನದ ಅತಿದೊಡ್ಡ ಗುಪ್ತಚರ ಲೋಪವಾಗಿದೆ. ಅವರು ಇದನ್ನು 2013ರಲ್ಲಿ ಎಡ್ವರ್ಡ್ ಸ್ನೋಡನ್ ನಡೆಸಿದ ಮಾಹಿತಿ ಕಳವು ಮತ್ತು 2016, 2017ರಲ್ಲಿ ಎನ್ಎಸ್ಎ ಹಾಗೂ ಸಿಐಎಗಳ ಹ್ಯಾಕಿಂಗ್ ಟೂಲ್ ಬಯಲಾದುದಕ್ಕೆ ಹೋಲಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ದಾಖಲೆಗಳು ಬಯಲಾದುದರ ಪರಿಣಾಮ ಅತ್ಯಂತ ಗಂಭೀರವಾಗಿರುವ ಸಾಧ್ಯತೆಗಳಿವೆ. ಯಾಕೆಂದರೆ, ಈ ಮಾಹಿತಿ ಸೋರಿಕೆ ಅಮೆರಿಕಾದ ಗುಪ್ತಚರ ಸಂಸ್ಥೆಗಳು ಎಷ್ಟರಮಟ್ಟಿಗೆ ರಷ್ಯಾದೊಳಗೆ ಪ್ರವೇಶಿಸಿವೆ ಎಂದು ತೋರಿಸಿಕೊಟ್ಟಿದೆ. ಇದರ ಪರಿಣಾಮವಾಗಿ, ರಷ್ಯಾದ ಗುಪ್ತಚರರು ಮತ್ತು ಜನರಲ್ಗಳು ತಮ್ಮ ಸಂವಹನ ವಿಧಾನವನ್ನು ಇನ್ನಷ್ಟು ಸುರಕ್ಷಿತಗೊಳಿಸಬಹುದು.
ಅಮೆರಿಕಾದ ಸಹವರ್ತಿಗಳು ಇನ್ನು ಮುಂದೆ ಅಮೆರಿಕಾದೊಡನೆ ರಹಸ್ಯ ಮಾಹಿತಿಗಳನ್ನು ಹಂಚಿಕೊಳ್ಳದಿರುವ ಸಾಧ್ಯತೆಗಳು ಹೆಚ್ಚಿವೆ. ಅಮೆರಿಕಾದಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ರಹಸ್ಯ ದಾಖಲೆಗಳನ್ನು ಪಡೆಯಲು ಅವಕಾಶವಿದ್ದು, ಸ್ನೋಡೆನ್ ಸೇರಿದಂತೆ 1.3 ಮಿಲಿಯನ್ ಜನರು ಟಾಪ್ ಸೀಕ್ರೆಟ್ ಫೈಲ್ಗಳನ್ನು ನೋಡಲು ಅನುಮತಿ ಹೊಂದಿದ್ದಾರೆ. ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಯೂ ಗುಪ್ತಚರ ಸಂಸ್ಥೆಗಳ ನಡುವಿನ ಮಾಹಿತಿ ವಿನಿಮಯದ ಕೊರತೆಯ ಪರಿಣಾಮವಾಗಿದ್ದು, ಸೂಕ್ಷ್ಮ ಮಾಹಿತಿಗಳು ಅಪಾರ ಪ್ರಮಾಣದಲ್ಲಿ ಹಂಚಲ್ಪಟ್ಟು, ವ್ಯವಸ್ಥೆಯನ್ನೇ ದುರ್ಬಲಗೊಳಿಸಿತು. ಈ ಕಾರಣದಿಂದಲೇ ಮೊದಲಿನಿಂದಲೂ ಉಕ್ರೇನಿನ ಜನರಲ್ಗಳು ತಮ್ಮ ರಹಸ್ಯಗಳನ್ನು ಬಹಿರಂಗ ಪಡಿಸುವ ಕುರಿತು ಆತಂಕ ಹೊಂದಿದ್ದರು. ಈಗ ಇಂತಹ ಸೂಕ್ಷ್ಮ ಸನ್ನಿವೇಶದಲ್ಲೂ ಅವರು ಅಮೆರಿಕಾದೊಡನೆ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಬಹುದು. ರಿಡ್ ಅವರ ಪ್ರಕಾರ, ಇಂತಹ ಮಾಹಿತಿ ಸೋರಿಕೆ ಏನಾದರೂ ಯುಕೆ, ಇಸ್ರೇಲ್, ಜರ್ಮನಿ, ಅಥವಾ ಆಸ್ಟ್ರೇಲಿಯಾಗಳಲ್ಲಿ ನಡೆದಿದ್ದರೆ ಅಮೆರಿಕಾ ಗುಪ್ತಚರ ಮಾಹಿತಿ ಹಂಚಿಕೊಳ್ಳುವುದನ್ನೇ ಸಂಪೂರ್ಣವಾಗಿ ನಿಲ್ಲಿಸಿ ಬಿಡುತ್ತಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.