ನವದೆಹಲಿ: ಮಂಗಳವಾರ ಮುಂಜಾನೆ ಭಾರತದ ಸೇನೆ ಉಗ್ರರ ನಾಶಕ್ಕಾಗಿ ದೊಡ್ಡ ಹೆಜ್ಜೆಯನ್ನೇ ಇಟ್ಟಿದೆ. ಸಿಆರ್ಪಿಎಫ್ನ 40 ಯೋಧರು ಹುತಾತ್ಮರಾದ ಶೋಕದಲ್ಲಿ ಇಡೀ ದೇಶವೇ ಮುಳುಗಿತ್ತು, ಆದರೆ ಸೇನೆ ಮಾತ್ರ ಪ್ರತೀಕಾರದ ಆಕ್ರೋಶದಲ್ಲಿತ್ತು. ಆತ್ಮಾಹುತಿ ದಾಳಿ ನಡೆಸಿ ಸ್ವರ್ಗ ಸೇರುತ್ತೇವೆ ಎಂಬ ಭ್ರಮೆಯಲ್ಲಿದ್ದ ಉಗ್ರರಿಗೆ ನರಕ ತೋರಿಸುವ ಹೆಜ್ಜೆ ಇಟ್ಟಿತ್ತು. ಪ್ರತೀಕಾರಕ್ಕೆ ಪ್ರಧಾನಿಯಿಂದ ಹಸಿರು ನಿಶಾನೆ ಪಡೆದಿದ್ದ ವಾಯುಸೇನೆ, ಪಾಕಿಸ್ತಾನ ಕನಸಿನಲ್ಲೂ ಎಣಿಸದ ರೀತಿಯಲ್ಲಿ ಪ್ರತ್ಯುತ್ತರ ನೀಡಿದೆ. ಎಲ್ಒಸಿ ದಾಟಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿದ್ದ ಉಗ್ರಗಾಮಿ ಶಿಬಿರವನ್ನು ಗುರಿಯಾಗಿರಿಸಿ ಬಾಲಾಕೋಟ್, ಮುಜಫರಾಬಾದ್ ಮತ್ತು ಚಕೋಟಿಗಳಲ್ಲಿ ಬಾಂಬ್ ದಾಳಿ ನಡೆಸಿ ಮತ್ತೊಂದು ಆತ್ಮಾಹುತಿ ದಾಳಿಗೆ ತರಬೇತಿ ನಡೆಸುತ್ತಿದ್ದ ಜೈಶ್ ಉಗ್ರ ಸಂಘಟನೆಯ ಅಡಗುತಾಣವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಸುಮಾರು 350 ಉಗ್ರರು ಈ ದಾಳಿಗೆ ಬಲಿಯಾಗಿದ್ದಾರೆ.
ಪುಲ್ವಾಮಾ ಭಯೋತ್ಪಾದನಾ ದಾಳಿಯ ನಂತರ ಪಾಕಿಸ್ತಾನ ತನ್ನ ಸುರಕ್ಷತೆಗಾಗಿ ಈ ಭಯೋತ್ಪಾದಕರನ್ನು ಈ ತರಬೇತಿ ಕೇಂದ್ರಕ್ಕೆ ಕಳುಹಿಸಿದೆ. ಎರಡು ನಿಮಿಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಭಾರತೀಯ ವಾಯುಪಡೆಯು ಈ ಕೇಂದ್ರವನ್ನು ನಿರ್ನಾಮ ಮಾಡಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.
ಈ ದಾಳಿ ಯಾವುದೇ ಮಿಲಿಟರಿ ನೆಲೆಯಲ್ಲಿ ನಡೆದಿಲ್ಲ, ಭಯೋತ್ಪಾದಕರ ಅಡಗುತಾಣಗಳ ಮೇಲೆ ಮಾತ್ರವೇ ಈ ದಾಳಿ ನಡೆದಿದೆ. ಮತ್ತೊಂದು ಆತ್ಮಾಹುತಿ ದಾಳಿ ನಡೆಯದಂತೆ ತಡೆಯುವ ಉದ್ದೇಶಕ್ಕಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ದಾಳಿ ನಡೆಸಲಾಗಿದೆ. ಪಂಚತಾರಾ ರೆಸಾರ್ಟ್ ಮಾದರಿಯಲ್ಲಿ ಬಾಲಕೋಟ್ನ ಉಗ್ರರ ತರಬೇತಿ ಕೇಂದ್ರ ನಿರ್ಮಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಪ್ರದೇಶವು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಿಯಂತ್ರಣ ರೇಖೆಯಿಂದ 80 ಕಿಲೋಮೀಟರ್ ದೂರದಲ್ಲಿದೆ ಮತ್ತು 2011ರಲ್ಲಿ ಒಸಾಮಾ ಬಿನ್ ಲಾಡೆನ್ ಅಡಗಿದ್ದ ಅಬೊಟಾಬಾದ್ ಸಮೀಪದಲ್ಲಿದೆ.
ಫೈವ್ ಸ್ಟಾರ್ ರೆಸಾರ್ಟ್ ಮಾದರಿಯ, ಐಶಾರಾಮಿ ವ್ಯವಸ್ಥೆಗಳುಳ್ಳ ಆ ಕೇಂದ್ರದಲ್ಲಿ "ಸುಖವಾಗಿ" ತರಬೇತಿ ಪಡೆಯಲು ಬೇಕಾದ ಎಲ್ಲಾ ಸೌಕರ್ಯವೂ ಇತ್ತು. ಸಾಮಾನ್ಯವಾಗಿ 500 ರಿಂದ 700 ಮಂದಿ ತರಬೇತಿ ಪಡೆಯುವ ಈ ಸ್ಥಳದಲ್ಲಿ, ದಾಳಿ ನಡೆದ ಸಮಯದಲ್ಲಿ 300 ರಿಂದ 400 ಮಂದಿ ಮಾತ್ರ ಇದ್ದರು ಎನ್ನಲಾಗಿದೆ. ಇವರೊಂದಿಗೆ 25 ರಿಂದ 27 ತರಬೇತುದಾರರೂ ಕೂಡ ವಾಸ್ತವ್ಯ ಹೂಡಿದ್ದರು.
ಇವರೆಲ್ಲರ ಜತೆಗೆ, ಜೈಶ್ ಎ ಮೊಹಮ್ಮದ್ ನ ಮಸೂದ್ ಅಜರ್ನ ಸಂಬಂದಿ 1999ರ ಏರ್ ಇಂಡಿಯಾ ವಿಮಾನ ಹೈಜಾಕ್ ಪ್ರಕರಣದಲ್ಲಿ ಸಿಬಿಐಗೆ ಪ್ರಮುಖವಾಗಿ ಬೇಕಾಗಿದ್ದ ಯೂಸುಫ್ ಅಜರ್ ಕೂಡ ಇಲ್ಲೇ ಇದ್ದ.
ಈ ತರಬೇತಿ ಶಿಬಿರದಲ್ಲಿ ಆತ್ಮಾಹುತಿ ದಾಳಿ, ಸುಧಾರಿತ ಸ್ಫೋಟಕಗಳ ತಯಾರಿಕೆ, ಭದ್ರತಾ ಪಡೆಗಳ ಮೇಲೆ ದಾಳಿ ಮಾಡುವ ಕ್ರಮ, ಸ್ಫೋಟಕಗಳ ಬಳಕೆ, ಯುದ್ಧ ಭೂಮಿಯಲ್ಲಿ ಅನುಸರಿಸಬೇಕಾದ ತಂತ್ರಗಾರಿಕೆ, ಆತ್ಮಾಹುತಿ ದಾಳಿಗಳಲ್ಲಿ ವಾಹನಗಳನ್ನು ಬಳಸುವ ತಂತ್ರಗಳು, ದಾಳಿ ನಡೆಸಿದ ಮೇಲೆ ತಪ್ಪಿಸಿಕೊಳ್ಳುವ ರೀತಿಗಳನ್ನು ಪ್ರಾಯೋಗಿಕ ಮಾದರಿಯಲ್ಲಿ ಕಲಿಸಿಕೊಡಲಾಗುತ್ತಿತ್ತು. ಇಲ್ಲಿ ತರಬೇತಿ ಸಿಬಂದಿಯೆಲ್ಲವೂ ಪಾಕಿಸ್ಥಾನ ದ ಸೈನ್ಯದ ನಿವೃತ್ತ ಸೇನಾಧಿಕಾರಿಗಳೇ. ವಿಶಾಲ ಈಜುಕೊಳದಲ್ಲಿ ನೀರಿನಡಿ ಕೈಗೊಳ್ಳಬಹುದಾದ ವಿಧ್ವಂಸಕ ಕೃತ್ಯಗಳು, ತಪ್ಪಿಸಿಕೊಳ್ಳುವ ವಿಧಾನಗಳನ್ನು ಹೇಳಿಕೊಡಲಾಗುತ್ತಿತ್ತು ಎನ್ನಲಾಗಿದೆ.
ಬೆಟ್ಟಗುಡ್ಡ, ಪರ್ವತ ಪ್ರದೇಶಗಳು ಹೆಚ್ಚಾಗಿ ಇರುವುದರಿಂದ ಬಾಲಾಕೋಟ್ನ್ನು ಜೈಶ್ ಸಂಘಟನೆ ತನ್ನ ಪ್ರಮುಖ ನೆಲೆಯನ್ನಾಗಿ ಮಾಡಿಕೊಂಡಿತ್ತು. ಕಾಶ್ಮೀರ ಸೇರಿದಂತೆ ದೇಶದ ಇತರ ಭಾಗಗಳಿಂದ ಜೈಶ್ ಸಂಘಟನೆಗೆ ಕರೆತರಲಾಗುತ್ತಿದ್ದ ಯುವಕರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿತ್ತು. ಅಲ್ಲದೆ ಅವರನ್ನು ಆತ್ಮಾಹುತಿ ಬಾಂಬರ್ ಗಳನ್ನಾಗಿ ಮಾಡಲಾಗುತ್ತಿತ್ತು. ಇಂತದ್ದೊಂದು ತರಬೇತಿ ಶಿಬಿರದ ಬಗ್ಗೆ ಭಾರತೀಯ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಜೈಶ್ ಸಂಘಟನೆಯ ನೆಲೆಯನ್ನು ಕಿತ್ತು ಹಾಕುವ ಸಲುವಾಗಿ ಭಾರತೀಯ ವಾಯುಸೇನೆ ಬಾಲಾಕೋಟ್ನಲ್ಲೇ ಬಾಂಬ್ ದಾಳಿ ನಡೆಸಿದೆ.
ದಾಳಿಯ ಬಳಿಕ ರಾಜಸ್ಥಾನದ ಚುರು ಎಂಬಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ ಮೋದಿ, "ದೇಶವು ಸುರಕ್ಷಿತ ಕೈಗಳಲ್ಲಿದೆ ಎಂದು ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ" ಎಂದು ಹೇಳಿದರು.