ನವದೆಹಲಿ: ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಅದು ಆಂತರಿಕ ವಿಷಯಕ್ಕೆ ಸಂಬಂಧಿಸಿದೆ ಎಂದು ಭಾರತ ಸ್ಪಷ್ಟಪಡಿಸಿದೆ. ಶನಿವಾರದಂದು ಇಸ್ಲಾಮಿಕ್ ಸಹಕಾರ ಸಂಘಟನೆ (OIC) ಕಾಶ್ಮೀರದ ವಿಚಾರವಾಗಿ ಭಾರತವನ್ನು ಟೀಕಿಸಿ ನಿರ್ಣಯ ಕೈಕೊಂಡ 57 ದೇಶಗಳ ಸಂಸ್ಥೆಗೆ ಭಾರತ ಪ್ರತ್ಯುತ್ತರ ನೀಡಿದೆ.
ಈ ಸಮಾವೇಶಕ್ಕೆ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ ಸುಷ್ಮಾ ಸ್ವರಾಜ್ ಭಯೋತ್ಪಾದನೆ ಹಾಗೂ ಉಗ್ರರ ವಿರುದ್ದ ಗುಡುಗಿದ್ದರು.ಇದಾದ ಬೆನ್ನಲ್ಲೇ ಈಗ ಒಐಸಿ ಈ ನಿರ್ಣಯವನ್ನು ಕೈಕೊಂಡಿದೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ '' ನಮ್ಮ ನಿಲುವು ಸ್ಥಿರವಾಗಿದೆ ಮತ್ತು ಚಿರಪರಿಚಿತವಾಗಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದು ಭಾರತ ಆಂತರಿಕ ವಿಷಯ '' ಎಂದು ಪ್ರತ್ಯುತ್ತರ ನೀಡಿದೆ.
ಶನಿವಾರದಂದು ಒಐಸಿ ಕಾಶ್ಮೀರ ವಿಚಾರವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜುಲೈ 2016 ರಿಂದ ತೀವ್ರವಾದ ಭಾರತೀಯ ಕ್ರೂರತೆ ಮತ್ತು ಅಕ್ರಮ ಬಂಧನಗಳು ಮತ್ತು ಕಣ್ಮರೆಗಳು ನಡೆಯುತ್ತಿವೆ ಎಂದು ಹೇಳಿಕೆ ನೀಡಿತ್ತು.ಈ ಹಿನ್ನಲೆಯಲ್ಲಿ ಭಾರತ ಈಗ ಪ್ರತ್ಯುತ್ತರ ನೀಡಿದೆ. ಕಳೆದ ತಿಂಗಳು ಪುಲ್ವಾಮಾ ಭಯೋತ್ಪಾದನಾ ದಾಳಿಯಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ಉಲ್ಬಣಗೊಂಡಿದ್ದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಜಾಗತಿಕ ಭಯೋತ್ಪಾದನೆಯನ್ನು ಎದುರಿಸಲು ಒಟ್ಟಾಗಿ ಕಾರ್ಯನಿರ್ವಹಿಸಲು ಒ.ಐ.ಸಿ ಸಮಾವೇಶದಲ್ಲಿ ಸುಷ್ಮಾ ಸ್ವರಾಜ್ ಒತ್ತಾಯಿಸಿದ್ದರು