ನವದೆಹಲಿ: ಯುದ್ಧ, ಸ್ಫೋಟದಂತಹ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡ ಭದ್ರತಾ ಸಿಬ್ಬಂದಿಗಳ ಪೈಕಿ ಶೇ.90 ಮಂದಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಅಧಿಕ ರಕ್ತಸ್ರಾವದಿಂದ ಸಾವನ್ನಪ್ಪಿರುವ ದಾಖಲೆಯನ್ನು ಗಮನದಲ್ಲಿಟ್ಟುಕೊಂಡು, ಗಂಭೀರವಾಗಿ ಗಾಯಗೊಳ್ಳುವ ಯೋಧರ ಪ್ರಾಣ ಉಳಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ವಿಶೇಷ ಔಷಧಿಯೊಂದನ್ನು ಅಭಿವೃದ್ಧಿಪಡಿಸಿದೆ.
ಯೋಧರ ಪ್ರಾಣವನ್ನು ರಕ್ಷಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು 'ಕಾಂಬ್ಯಾಟ್ ಕ್ಯಾಷುಯಲ್ಟಿ ಡ್ರಗ್' ಕಿಟ್ ಅನ್ನು ಅಭಿವೃದ್ಧಿಪಡಿಸಿದೆ. ಇದರಿಂದಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯಲ್ಲೇ ಅಧಿಕ ರಕ್ತಸ್ರಾವದಿಂದ ಸಾವನ್ನಪ್ಪುವ ಗಂಭೀರವಾಗಿ ಗಾಯಗೊಂಡ ಯೋಧರ ಪ್ರಾಣ ಉಳಿಯಲಿದೆ ಎನ್ನಲಾಗಿದೆ. ಈ ಕಿಟ್ ನಲ್ಲಿ ರಕ್ತಸ್ರಾವವನ್ನು ನಿಲ್ಲಿಸುವ ಔಷಧಿ, ಪ್ರಥಮ ಚಿಕಿತ್ಸಾ ಔಷಧಿಗಳು ಮತ್ತು ಗ್ಲಿಸಿರಿನ್ ಹೊಂದಿದ ಸಲೈನ್ ಗಳನ್ನು ಒಳಗೊಂಡಿದ್ದು, ಅರಣ್ಯ ಪ್ರದೇಶ ಮತ್ತು ಎತ್ತರದ ಪ್ರದೇಶಗಳಲ್ಲಿ ಯುದ್ಧ ಅಥವಾ ಭಯೋತ್ಪಾದಕ ದಾಳಿಯಂತಹ ಸಂದರ್ಭದಲ್ಲಿ ಯೋಧರ ಪ್ರಾನರಕ್ಷಣೆಗೆ ನೆರವಾಗಲಿದೆ ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯ ಪ್ರಯೋಗಾಲಯವಾದ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ನ ವಿಜ್ಞಾನಿಗಳ ಪ್ರಕಾರ, 'ಕಾಂಬ್ಯಾಟ್ ಕ್ಯಾಷುಯಲ್ಟಿ ಡ್ರಗ್'ಬಳಸಿ ಗಂಭಿರವಾಗಿ ಗಾಯಗೊಂಡ ಯೋಧರಿಗೆ ಸೂಕ್ತ ಸಮಯದಲ್ಲಿ ಪರಿಣಾಮಕಾರಿಯಾದ ಪ್ರಥಮ ಚಿಕಿತ್ಸೆ ನೀಡಿದ್ದೇ ಆದರೆ, ಅಂಗ ವೈಫಲ್ಯತೆ ಪ್ರಮಾಣ ಕಡಿಮೆಯಾಗಿ ಬದುಕುಳಿಯುವ ಸಾಧ್ಯತೆಗಳು ಹೆಚ್ಚುತ್ತದೆ ಎಂದಿದ್ದಾರೆ.