ಸ್ಯಾನ್ ಅಂಟಾನಿಯೋ : 60 ವರ್ಷಗಳ ಹಿಂದೆ ತನ್ನ ಬಳಿ ಪಾಪ ನಿವೇದನೆಗಾಗಿ ಬಂದಿದ್ದ ಓರ್ವ ಮಾಜಿ ಸೌಂದರ್ಯ ರಾಣಿ ಯನ್ನು ಕೊಲೆಗೈದ ಅಪರಾಧಕ್ಕಾಗಿ 87ರ ಹರೆಯದ ನಿವೃತ್ತ ಕ್ಯಾಥೋಲಿಕ್ ಪಾದ್ರಿಗೆ ದಕ್ಷಿಣ ಟೆಕ್ಸಾಸ್‌ನ ನ್ಯಾಯಾಧೀಶರು ಜೀವಾವಧಿ ಜೈಲು ಶಿಕ್ಷೆ ವಿಧಿಸಿದ್ದಾರೆ.
ಪಾದ್ರಿ ಜಾನ್ ಫೀಟ್ ಅವರು ಈ ಕೊಲೆ ನಡೆಸಿದ್ದಾಗ 27ರ ಹರೆಯದ ತರುಣರಾಗಿದ್ದರು. ಕೊಲೆಗೀಡಾಗಿದ್ದ ಸೌಂದರ್ಯ ರಾಣಿ ಐರೀನ್ ಗಾರ್ಜಾ 25ರ ಹರೆಯದವಳಾಗಿದ್ದಳು ಎನ್ನಲಾಗಿದೆ.
1960ರಲ್ಲಿ ಪಾದ್ರಿ ಜಾನ್ ಫೀಟ್, ಟೆಕ್ಸಾಸ್‌ನ ಮೆಕಾಲೆನ್ ನಲ್ಲಿ ಸಂದರ್ಶಕ ಪಾದ್ರಿಯಾಗಿದ್ದ ಸಂದರ್ಭದಲ್ಲಿ ಒಂದು ದಿನ ಐರೀನ್ ಗಾರ್ಜಾ ಪಾಪ ನಿವೇದನೆಗಾಗಿ ಚರ್ಚಿಗೆ ಬಂದಿದ್ದಳು. ಆಗಲೇ ಗಾರ್ಜಾಳೊಂದಿಗೆ ಸಂಪರ್ಕ ಬೆಳೆಸಿಕೊಂಡ ಪಾದ್ರಿ ಫೀಟ್ ಆಕೆಯನ್ನು ಕೊಂದು ಮುಗಿಸಿದರು.
ಈ ಕೊಲೆ ಕೃತ್ಯ ನಡೆದ 60 ವರ್ಷಗಳ ತರುವಾಯ ಅಪರಾಧ ಸಾಬೀತಾಗಿ ಆರೋಪಿ ಪಾದ್ರಿಯು ದೋಷಿ ಎಂದು ನಿರ್ಧಾರವಾದದ್ದು ಮೊನ್ನೆ ಗುರುವಾರ. ಅಂದು ಟೆಕ್ಸಾಸ್ ನ್ಯಾಯಾಲಯ, ಈಗ 87ರ ಹರೆಯದವರಾಗಿರುವ ಆರೋಪಿ ಪಾದ್ರಿ ಜಾನ್ ಫೀಟ್ ಅವರನ್ನು ಕೊಲೆ ಅಪರಾಧಿ ಎಂದು ಘೋಷಿಸಿತ್ತು. ನಿನ್ನೆ ಶುಕ್ರವಾರ ಅವರಿಗೆ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.