ಚುನಾವಣೆ ಬಳಿಕ ಬಿಜೆಪಿ ಸೇರಲ್ಲ: ಸುಮಲತಾ ಸ್ಪಷ್ಟನೆ

ನನ್ನ ಮೊದಲ ಆದ್ಯತೆ ಕಾಂಗ್ರೆಸ್ ಆಗಿತ್ತು. ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದ ಕಾರಣ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ-ಸುಮಲತಾ ಅಂಬರೀಶ್  

Last Updated : Apr 6, 2019, 10:15 AM IST
ಚುನಾವಣೆ ಬಳಿಕ ಬಿಜೆಪಿ ಸೇರಲ್ಲ: ಸುಮಲತಾ ಸ್ಪಷ್ಟನೆ title=
File Image

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ನಾನು ಬಿಜೆಪಿಗೆ ಸೇರ್ಪಡೆಗೊಳ್ಳುವುದಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.

ನಿನ್ನೆ(ಶುಕ್ರವಾರ) ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮುಸ್ಲಿಂ ಮುಖಂಡರ ಮನೆಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದ ಸುಮಲತಾ ನಂತರ ಸಭೆಯಲ್ಲಿ ಮಾತನಾಡುತ್ತಾ, ನನ್ನ ಮೊದಲ ಆದ್ಯತೆ ಕಾಂಗ್ರೆಸ್ ಆಗಿತ್ತು. ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದ ಕಾರಣ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಚುನಾವಣೆ ಬಳಿಕ ಬಿಜೆಪಿ ಸೇರುವುದಿಲ್ಲ ಎಂದಿದ್ದಾರೆ.

ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಅಧಿಕೃತ ಬೆಂಬಲ ಘೋಷಿಸಿದೆ. ಇದರ ಬೆನ್ನಲ್ಲೇ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಸುಮಲತಾ ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿತ್ತು.

ಈ ಮೊದಲೂ ಕೂಡ ಚುನಾವಣೆಯಲ್ಲಿ ಗೆದ್ದರೆ ಬಿಜೆಪಿ ಸೇರುತ್ತಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಸುಮಲತಾ, ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ಜನರಿಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಅಂತೆಯೇ ನನ್ನ ಮುಂದಿನ ರಾಜಕೀಯ ಭವಿಷ್ಯವನ್ನೂ ಜನರೇ ತೀರ್ಮಾನಿಸಲಿದ್ದಾರೆ. ನಾನು ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು(ಸೇರಬೇಕು) ಎಂಬುದನ್ನೂ ಜನರ ಅಭಿಪ್ರಾಯ ಪಡೆದೇ ನಿರ್ಧರಿಸುತ್ತೇನೆ ಎಂದು ಹೇಳಿದ್ದರು.

Trending News