ಮೊರಾದಾಬಾದ್: ರಾಂಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ನಟಿ ಜಯಪ್ರದಾ ವಿರುದ್ಧ ಎಸ್ಪಿ ನಾಯಕ ಅಜಂ ಖಾನ್ ನೀಡಿದ್ದ ಅವಹೇಳನಕಾರಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಅಜಂ ಖಾನ್ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದರು.
ನಟಿ ಜಯಪ್ರದಾ 'ಖಾಕಿ ಅಂಡರ್‌ವೇರ್' ಧರಿಸುತ್ತಾರೆ ಎಂಬ ಅಜಂ ಖಾನ್ ಹೇಳಿಕೆಗೆ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಸಹ ಅಖಿಲೇಶ್ ಯಾದವ್ ಮಾತ್ರ ಅಜಂ ಖಾನ್ ಗೆ ಬೆಂಬಲವಾಗಿ ನಿಂತಿದ್ದಾರೆ. " ಅಜಂ ಖಾನ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅದನ್ನು ಬೇರೆಯವರನ್ನು ಉಲ್ಲೇಖಿಸಿ ಹೇಳಲಾಗಿದೆ. ಆರ್ಎಸ್ಎಸ್ ಉಡುಪಿನ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ ಮಾಧ್ಯಮದವರು ಈ ವ್ಚರವನ್ನು ತಪ್ಪಾಗಿ ಅರ್ಥೈಸಿ ಗೊಂದಲ ಸೃಷ್ಟಿಸಲಾಗಿದೆ" ಎಂದಿದ್ದಾರೆ.
ಉತ್ತರಪ್ರದೇಶದ ರಾಂಪುರದಲ್ಲಿ ಭಾನುವಾರ ಸಮಾಜವಾದಿ ಪಕ್ಷ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದ ರ್ಯಾಲಿಯಲ್ಲೇ "ಜಯಪ್ರದಾ ಅವರನ್ನು ರಾಜಕೀಯಕ್ಕೆ ಕರೆತಂದಿದ್ದೇ ನಾನು. ಇದೇ ರಾಂಪುರದಿಂದ ಆಕೆಗೆ ಟಿಕೆಟ್ ಕೊಡಿಸಿದ್ದೆ. ಆಕೆಯ ಬಾಡಿಗಾರ್ಡ್ ನಂತೆ ಆಕೆಯನ್ನು ಯಾರೂ ಕೂಡ ಸ್ಪರ್ಶಿಸದಂತೆ ನೋಡಿಕೊಂಡೆ. ಆದರೆ ಆಕೆಯ ನಿಜವಾದ ಮುಖವನ್ನು ಅರಿಯಲು ನನಗೆ 17 ವರ್ಷಗಳೇ ಬೇಕಾಯಿತು. 17 ದಿನಗಳ ಹಿಂದಷ್ಟೇ ಆಕೆ ಖಾಕಿ ಅಂಡರ್ ವೇರ್ ಧರಿಸುತ್ತಾರೆ ಎಂದು ತಿಳಿಯಿತು" ಎಂದು ಅಜಂ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಳಿಕ ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.