ಮುಂಬೈ: ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮೇಲೆ 35 ವರ್ಷದ ಪೊಲೀಸ್ ಕಾನ್ಸ್ಟೇಬಲ್ನನ್ನು ಗುರುವಾರ ವಡಾಲಾ ಪೊಲೀಸರು ಬಂಧಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಪೋಕ್ಸೋ ಕಾಯ್ದೆಯಡಿ ಆತನ ವಿರುದ್ಧ ದೂರು ದಾಖಲಾಗಿದೆ.
ಆರೋಪಿ ಕಾನ್ಸ್ಟೇಬಲ್ ಸೋಮವಾರ ಬಾಲಕಿಗೆ ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಸಂತ್ರಸ್ತ ಬಾಲಕಿಯು ಈ ವಿಚಾರವನ್ನು ತನ್ನ ಹಿರಿಯ ಸಹೋದರನಿಗೆ ತಿಳಿಸಿದ್ದು, ಬಳಿಕ ಆತ ಈ ವಿಚಾರವನ್ನು ತಾಯಿಗೆ ವಿವರಿಸಿದ್ದಾನೆ. ಈ ಬಗ್ಗೆ ಬಾಲಕಿಯ ಕುಟುಂಬದವರು ಬುಧವಾರ ವಡಾಲಾ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಟಾರ್ಡಿಯೊ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂಜಯ್ ವಾಘಮೇರ್ ಎಂದು ಗುರುತಿಸಲಾಗಿದೆ. ಆತನನ್ನು ಗುರುವಾರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ ಎಂದು ಪೋಲಿಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.