JDS vs Congress: ಡಿಕೆಶಿ ಅವರದ್ದು ‘ಕೈ’ ಎತ್ತುವುದಷ್ಟೇ ಅಲ್ಲ, ‘ಕೈ’ ಕೊಡುವುದರಲ್ಲೂ ಎತ್ತಿದ ‘ಕೈ’!

JDS vs Congress: 135 ಸೀಟು ಗೆದ್ದಿದ್ದೇವೆ ಎನ್ನುವ ಧಿಮಾಕಿನಲ್ಲಿ ಏನು ಹೇಳಿದರೂ ಜನ ನಂಬುತ್ತಾರೆಂಬ ಅಹಂಕಾರವೇ? ಆಗ ಎಚ್.ಡಿ.ದೇವೇಗೌಡರ ಮನೆ ಅಂಗಳದಲ್ಲಿ ಅಂಗಿ ಮಡಚಿ ಮುಖ ಒಣಗಿಸಿಕೊಂಡು ನಿಂತ ಧೀರರು ಯಾರೆಂದು ಗೊತ್ತಿಲ್ಲವೇ? ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

Written by - Prashobh Devanahalli | Edited by - Puttaraj K Alur | Last Updated : Oct 11, 2023, 01:45 PM IST
  • ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ ಜೆಡಿಎಸ್‍ನಿಂದ ಸಿಎಂ, ಡಿಸಿಎಂ ವಿರುದ್ಧ ಆಕ್ರೋಶ
  • ಮಾಜಿ ಸಿಎಂ ಎಸ್.ಎಂ.ಕೃಷ್ಣರನ್ನು ಕೆಳಗಿಳಿಸಿದಾಗ ಕಾಂಗ್ರೆಸ್ ಕೃತಜ್ಞತೆ ಎಲ್ಲಿತ್ತು..?
  • ಕ್ಷುದ್ರವಿದ್ಯೆಗಳಿಗೆಲ್ಲ ಕೇರಾಫ್‌ ಅಡ್ರಸ್ಸೇ ಯಾರು!?, ಗುರುವಾರದ ಬಜಾರ್ ಆಗಿರುವ ವಿಧಾನಸೌಧ!
JDS vs Congress: ಡಿಕೆಶಿ ಅವರದ್ದು ‘ಕೈ’ ಎತ್ತುವುದಷ್ಟೇ ಅಲ್ಲ, ‘ಕೈ’ ಕೊಡುವುದರಲ್ಲೂ ಎತ್ತಿದ ‘ಕೈ’! title=
ಸಿಎಂ, ಡಿಸಿಎಂ ವಿರುದ್ಧ JDS ಆಕ್ರೋಶ

ಬೆಂಗಳೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಬಗ್ಗೆ ಅಸಂಬದ್ಧ ಟೀಕೆ ಮಾಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ತೀವ್ರ ತಿರುಗೇಟು ನೀಡಿದೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜೆಡಿಎಸ್, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದೆ. ‘ಮೂರ್ಖರಿಗೆ ಬುದ್ಧಿ ಮಂದ ಎನ್ನುವುದು ಮಾತು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅದೇ ಆಗಿದೆ. ಅಧಿಕಾರದ ಮದದಿಂದ ಅದರ ಮಿದುಳಿಗೂ ಗೆದ್ದಲು ಹಿಡಿದಿದೆ. 4 ವರ್ಷದ ಹಿಂದೆ ಸರ್ಕಾರ ಮಾಡಲು ಸಿದ್ದರಾಮಯ್ಯ, ಡಿಕೆಶಿ ಅವರ ಮನೆಗೆ ಕುಮಾರಸ್ವಾಮಿಯವರು ಬಂದಿದ್ದರಾ? ಸುಳ್ಳು ಹೇಳುವುದಕ್ಕೆ ಸಾಸಿವೆ ಕಾಳಿನಷ್ಟಾದರೂ ಸಂಕೋಚ ಬೇಡವೇ? ಎಂದು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ.

135 ಸೀಟು ಗೆದ್ದಿದ್ದೇವೆ ಎನ್ನುವ ಧಿಮಾಕಿನಲ್ಲಿ ಏನು ಹೇಳಿದರೂ ಜನ ನಂಬುತ್ತಾರೆಂಬ ಅಹಂಕಾರವೇ? ಆಗ ಎಚ್.ಡಿ.ದೇವೇಗೌಡರ ಮನೆ ಅಂಗಳದಲ್ಲಿ ಅಂಗಿ ಮಡಚಿ ಮುಖ ಒಣಗಿಸಿಕೊಂಡು ನಿಂತ ಧೀರರು ಯಾರೆಂದು ಗೊತ್ತಿಲ್ಲವೇ? ಎಲ್ಲೋ ಇದ್ದ ಕುಮಾರಸ್ವಾಮಿಯವರನ್ನು ಪಾಪರಾಜ್ಜಿಗಳಂತೆ ಬೆನ್ನತ್ತಿ, ಆಮೇಲೆ ಕಾಡಿಬೇಡಿ ದೇವೇಗೌಡರ ಪದತಲಕ್ಕೆ ಬಿದ್ದವರ ಪುರಾಣ ಬಿಚ್ಚಿಡಬೇಕೆ? ಎಂದು ಜೆಡಿಎಸ್ ಕಾಂಗ್ರೆಸ್ಸಿಗೆ ಎಚ್ಚರಿಕೆ ನೀಡಿದೆ. 'ಕೈ' ಅಭಯದ ಸಂಕೇತವೆಂದು ನಂಬಿದ್ದರು ಕುಮಾರಸ್ವಾಮಿ. ಆದರೆ, ಡಿಕೆಶಿಯವರದ್ದು 'ಕೈ' ಎತ್ತುವುದಷ್ಟೇ ಅಲ್ಲ, 'ಕೈ' ಕೊಡುವುದರಲ್ಲೂ ಎತ್ತಿದ 'ಕೈ' ಎಂದು ಅವರಿಗೆ ಗೊತ್ತಾಗಲೇ ಇಲ್ಲ. ಅಸೆಂಬ್ಲಿಯಲ್ಲಿ 'ಕೈ' ಎತ್ತಿದರು, ಮಂಡ್ಯದಲ್ಲೂ 'ಕೈ' ಎತ್ತಿದರು ಮತ್ತು ಬೆಂಗಳೂರು ಗ್ರಾಮಾಂತರದಲ್ಲೂ 'ಕೈ' ಎತ್ತಿದರು!! ಪಾಪ.. ಕುಮಾರಸ್ವಾಮಿಯವರು ನಂಬಿದರು. ಬೆಂಗಳೂರು ಗ್ರಾಮಾಂತರದಲ್ಲಿ ಕುಮಾರಸ್ವಾಮಿಯವರು, ಅವರ 'ಕೈ' ಹಿಡಿದರು. ಮಂಡ್ಯದಲ್ಲಿ ಅದೇ 'ಕೈ' ಅವರನ್ನು ನಡುರಸ್ತೆಯಲ್ಲಿ ಬಿಟ್ಟು ಜಾರಿಕೊಂಡಿತು. ಇದೆಂತಾ ಕೈಚಳಕ? ಅವರ ಹಸ್ತವಾಸಿ ವಿಸ್ವಾಸಘಾತುಕಕ್ಕೇ ಹೆಸರುವಾಸಿ.. ಅಲ್ಲವೇ? ಎಂದು ಜೆಡಿಎಸ್ ಕುಟುಕಿದೆ.

ಇದನ್ನೂ ಓದಿ: ಗುಮ್ಮಟ ನಗರಿ ವಿಜಯಪುರದ ಪೋಲಿಸರು ಭರ್ಜರಿ ಕಾರ್ಯಾಚರಣೆ

ಅಣ್ಣಾ ಎಂದ ಆಚಾರವಿಲ್ಲದ ನಾಲಿಗೆ!: ಕುಮಾರಸ್ವಾಮಿಯವರ ಕಣ್ಣುಗಳಲ್ಲಿ ಕಣ್ಣೀರು ಬರುತ್ತದೆ. ನಿಜ, ಇಲ್ಲ ಎಂದವರು ಯಾರು? ಇನ್ನೊಬ್ಬರ ಕಣ್ಣಲ್ಲಿ ರಕ್ತ ಸುರಿಸುವ ಕೆಲಸವನ್ನು ಅವರೆಂದೂ ಮಾಡಿಲ್ಲ, ಅವರ ನಾಲಿಗೆ ಸತ್ಯದ ಕಡೆಗೆ ಹೊರಳಿದೆಯೇ ಹೊರತು, ಅಸತ್ಯದೆಡೆಗಲ್ಲ. ಅಣ್ಣಾ.. ಅಣ್ಣಾ.. ಎಂದ ಆಚಾರವಿಲ್ಲದ ಆ ನಾಲಿಗೆ, ಇಂಥಾ ನೀಚ ಬುದ್ಧಿ ಬಿಡುವುದು ಯಾವಾಗ? ಪಿಹೆಚ್‍ಡಿ ಮಾಡೋದಕ್ಕೆ ಅವರಿಗಿಂತ ಉತ್ತಮ ಗೈಡ್‌ ಬೇರೆ ಸಿಕ್ಕಾರೆಯೇ ನಿಮಗೆ? ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ. ಮಾತೆತ್ತಿದರೆ ಜಾತಿಗಳನ್ನು ಎಳೆದು ತರುತ್ತೀರಿ. ಕನಕಪುರ ಸುತ್ತಮುತ್ತ ಅದೇ ಮಹಾನುಭಾವರಿಂದ ಒಕ್ಕಲೆದ್ದವರು ಎಷ್ಟೋ ಜನ. ಅವರೆಲ್ಲಾ ಯಾವ ಜಾತಿಯವರು? ಅಧಿಕಾರಕ್ಕೊಂದು ಜಾತಿ, ಕೊಳ್ಳೆ ಹೊಡೆಯುವುದಕ್ಕೊಂದು ಜಾತಿಯೇ!! ಅಲ್ಲಿ ಹರಿದಿದ್ದು ರಕ್ತ ಕಣ್ಣೀರು, ಅವರ ಉಸಿರು ತಟ್ಟಿದ್ದಕ್ಕೇ ತಿಹಾರು! ಕರ್ಮಕ್ಕೆ ತಕ್ಕಂತೆಯೇ ಫಲ!! ಶ್ಲೋಕಗಳನ್ನು ಶೋಕಿಗೆ ಬಳಸಿಕೊಳ್ಳುವ ವ್ಯಕ್ತಿಗೆ ಇಷ್ಟು ಸಾಮಾನ್ಯ ಜ್ಞಾನವೂ ಇಲ್ಲವೇ? ಎಂದಿದೆ ಜೆಡಿಎಸ್.

ಜಾತ್ಯತೀತ ಎಂದ ಪೆನ್ನು ಜಾತಿ ಜಾತಿ ಎಂದು ಗೀಚುತ್ತಿದೆ! ಮಿದುಳಿಗೂ ಪೆನ್ನಿಗೂ ಲಿಂಕ್‌ ತಪ್ಪಿದೆಯಾ ಹೇಗೆ? ಅಥವಾ ಬೇರೆಯವರು ಬೆಪ್ಪರು ಎನ್ನುವ ಮದವೇ? ಅಧಿಕಾರಕ್ಕಾಗಿ ಶಿವಸೇನೆಯ ಜತೆ ಮಹಾ ಶೋ ನಡೆಸಿದಾಗ ಆ ಜಾತ್ಯತೀತತೆಯನ್ನು ಯಾವ ಶೋಕೇಸಿನಲ್ಲಿ ಇಟ್ಟಿದ್ದಿರಿ? ಬಿಜೆಪಿ ಜೊತೆ ಸುದೀರ್ಘ ಕಾಲ ಅಧಿಕಾರದ ಸುಖ ಅನುಭವಿಸಿದ ನಿತೀಶ್‌ ಕುಮಾರ್‌ ಪಕ್ಕದಲ್ಲಿ ಆಸೀನರಾದಾಗ ಜಾತ್ಯತೀತವನ್ನು ಎಲ್ಲಿ ಜೀತಕ್ಕೆ ಇಟ್ಟಿದ್ದಿರಿ? I.N.D.I.A ಕೂಟದಲ್ಲಿರುವ ಬಿಜೆಪಿಯ ಎಲ್ಲಾ ನೇರ ಫಲಾನುಭವಿಗಳ ಪದತಲದಲ್ಲಿ ಹಣೆ ಇಟ್ಟಾಗ ಹಸ್ತದ ಜಾತ್ಯತೀತತೆಯನ್ನು ಮಡಚಿ ಯಾರ ಜೇಬಿನಲ್ಲಿ ಇಟ್ಟಿದ್ದಿರಿ? ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಗೆ ಎರಡು ತಲೆ: ಕೊಳಕುಮಂಡಲಕ್ಕೆ 2 ತಲೆ ಇರುವಂತೆ ಕಾಂಗ್ರೆಸ್ಸಿಗೂ 2 ತಲೆ! ಒಂದರ ನಾಲಿಗೆಯ ಮೇಲೆ ಜಾತ್ಯತೀತ, ಇನ್ನೊಂದರ ನಾಲಿಗೆ ಮೇಲೆ ಜಾತಿಗಣಿತ!! ಜನರು ಛೀ! ಥೂ!! ಎನ್ನುತ್ತಿದ್ದಾರೆ. ಸ್ವತಃ ಕಾಂಗ್ರೆಸ್ಸೇ ಪ್ರಾದೇಶಿಕ ಪಕ್ಷಗಳ ಜೀತಕ್ಕೆ ಬಿದ್ದಿರುವಾಗ ಕುಮಾರಸ್ವಾಮಿಯವರ ಬಗ್ಗೆ ಮಾತನಾಡಲು ನಾಚಿಕೆ ಆಗುವುದಿಲ್ಲವೇ? ಎಂದು ಟೀಕಿಸಿರುವ ಜೆಡಿಎಸ್, ಡಿಕೆಶಿಯವರ ವಿರುದ್ಧ ಕುಮಾರಸ್ವಾಮಿಯವರ ಷಡ್ಯಂತ್ರವಾ !!?? ಅಹಾ.. ಎಂಥಾ ಮಾತು? ಕಾಂಗ್ರೆಸ್ಸಿಗೆ ಸದಾ ಕಾಲಮಾನವೂ ಕಾಮಾಲೆ ರೋಗ ಬಡಿದಿರುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ಕುಯುಕ್ತಿ, ಕುತಂತ್ರ, ಷಡ್ಯಂತ್ರ, ತಂತ್ರ, ಮಂತ್ರ, ಕ್ಷುದ್ರವಿದ್ಯೆಗಳಿಗೆಲ್ಲ ಕೇರಾಫ್‌ ಅಡ್ರಸ್ಸೇ ಡಿಕೆಶಿ!! ಅವರ ಪಾಂಡಿತ್ಯಕ್ಕೆ ಸರಿಸಾಟಿ ಯಾರಿಹರು? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ದಸರಾ ಹಬ್ಬದ ಸಂಭ್ರಮ: ಸಿಲಿಕಾನ್ ಸಿಟಿಗೆ ಕಾಲಿಟ್ಟಿವೆ ವೆರೈಟಿ ವೆರೈಟಿ ಗೊಂಬೆಗಳು!

ಜಾತಿ ಗಣತಿ ಅಲ್ಲ, ಜಾತಿ ಗಣಿತ!: ಕಂಡೋರ ತಟ್ಟೆ ನೋಡಿ ವಿಕೃತಿ ಮೆರೆಯುವುದು ಕಾಂಗ್ರೆಸ್‌ ಸಂಸ್ಕೃತಿ! ಅದು ಮನೋರೋಗವು ಹೌದು. ನಿಮ್ಹಾನ್ಸ್ ನಲ್ಲೂ ಇದಕ್ಕೆ ನಿಖರ ಮದ್ದಿರಲಿಕ್ಕಿಲ್ಲ. ತನ್ನ ತಟ್ಟೆಯಲ್ಲಿ ಸತ್ತ ಹೆಗ್ಗಣವಿದ್ದರೂ, ಪಕ್ಕದ ಎಲೆಯ ಬಗ್ಗೆ ಎಲ್ಲಿಲ್ಲದ ಕಾಳಜಿ, ಚಿಂತೆ, ತೋರಿಕೆ. ಇದು ಆ ಪಕ್ಷದ ಪಾರಂಪರಿಕ ವಾಡಿಕೆ!! 75 ವರ್ಷಗಳಿಂದ ಅದನ್ನೇ ಮಾಡಿದೆ. ತನ್ನ ಅಡಿಗೆ ಬೆಂಕಿ ಬಿದ್ದಾಗಲೆಲ್ಲ ಜಾತ್ಯತೀತತೆ ಜಪ ಮಾಡುತ್ತದೆ. ಕೋಮುವಾದ, ಜಾತ್ಯತೀತವಾದ ಎನ್ನುತ್ತಾ 'ಜಾತಿಗಣಿತ'ದ ಮೂಲಕ ಜನರನ್ನು ಕೂಡಿ ಕಳೆದು ಇಬ್ಬಾಗಿಸುತ್ತದೆ ಎಂದು ಜೆಡಿಎಸ್ ಕಿಡಿಕಾರಿದೆ. ಪ್ರಾದೇಶಿಕ ಪಕ್ಷಗಳ ಪಟ್ಟುಗಳಿಗೆ ಸೂತ್ರವಿಲ್ಲದ ಪತಂಗದಂತೆ ಪತರಗುಟ್ಟುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಅಮಿತ್ ಶಾರ ಹೆಸರು ದುಃಸ್ವಪ್ನದಂತೆ ಕಾಡುತ್ತಿದೆ. ರಾಜಕೀಯ ಸ್ವಾರ್ಥಕ್ಕಾಗಿ ಭಯೋತ್ಪಾದಕರನ್ನೂ ಸಮರ್ಥಿಸುತ್ತಾ, ಈಗ ಭಯ, ಒತ್ತಡ, ಷರತ್ತು ಎಂದು ಪಠಿಸುತ್ತಿದೆ. ಕಾಲಾಯ ತಸ್ಮೈ ನಮಃ, ಇದನ್ನು ಕಾಂಗ್ರೆಸ್ ಮರೆಯದಿದ್ದರೆ ಕ್ಷೇಮ. ಪರಿವಾರ ಪಾಲಿಟಿಕ್ಸ್ʼನಲ್ಲಿ ಕಾಂಗ್ರೆಸ್ಸಿಗೆ ಸಾಟಿ ಮೇಟಿ ಉಂಟೆ? ಜನಪಥ ಹತ್ತರಲ್ಲಿರುವ ಮನೆಗಿಂತಾ ಬೇಕೆ? ಎಷ್ಟು ನಾಯಕರು ಅಲ್ಲಿನ ರಾಜಕೀಯಕ್ಕೆ ಉಸಿರುಗಟ್ಟಿ ನರಳಿದರೆಂಬ ಲೆಕ್ಕಾ ಇದೆಯೇ? ಎಂದು ಕಾಂಗ್ರೆಸ್ ಕಾಲೆಳೆದಿದೆ ಜೆಡಿಎಸ್.

ಖರ್ಗೆಯನ್ನು ದಿಲ್ಲಿಗೆ ಅಟ್ಟಿದವರು ಯಾರು?: ದೇವೇಗೌಡರು, ಕುಮಾರಸ್ವಾಮಿಯವರಿಗೆ ದ್ರೋಹವೆಸಗಿದವರ ಪಟ್ಟಿಯನ್ನು ನೀವೇ ಮಾಡಿದ್ದೀರಿ ಸಂತೋಷ. ಆದರೆ, ಮಲ್ಲಿಕಾರ್ಜುನ ಖರ್ಗೆಯವರನ್ನು ಅಪಮಾನಕರವಾಗಿ ದೆಹಲಿಗೆ ಅಟ್ಟಿದವರು ಯಾರು? ಸಿದ್ದವನದಲ್ಲಿ ಸಿದ್ದಸೂತ್ರ ಹೆಣೆದು ಮೈತ್ರಿ ಸರ್ಕಾರ ತೆಗೆದವರು ಯಾರು? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇ ಕಾಡಿ-ಬೇಡಿ ತಂದ ಸರ್ಕಾರಕ್ಕೆ ಅಂತ್ಯ ಕಾಣಿಸಿದ ಆ ಹ್ಯೂಬ್ಲೆಟ್ ವೀರನ ಬಗ್ಗೆ ಗೊತ್ತಿಲ್ಲವೇ? ಲೋಕಸಭೆ ಚುನಾವಣೆ ಹೊತ್ತಿಗೆ ಮೈತ್ರಿಗೆ ಪಿಂಡ ಪ್ರದಾನ ಮಾಡಿ ಸ್ವಪಕ್ಷವನ್ನೇ ಬೀದಿಯಲ್ಲಿ ನಿಲ್ಲಿಸಿದ ಆ ಲೋಕೋತ್ತರ ಜಾತ್ಯತೀತವಾದಿಯ ಅಸಲಿಮುಖ ಗೋಚರವಾಗಿಲ್ಲವೇ? ಎಂದು ಜೆಡಿಎಸ್ ಪ್ರಶ್ನಿಸಿದೆ.

ಎಸ್.ಎಂ.ಕೃಷ್ಣರಿಗೆ ಅಪಮಾನ: ನಿಮ್ಮ ಪಟ್ಟಿಯಲ್ಲಿರುವ ರಾಜಕೀಯದ ಪರಮ ಪುರುಷೋತ್ತಮರೆಲ್ಲರೂ ನಮ್ಮ ಪಕ್ಷಕ್ಕೆ ಬಂದರು. ಪೊಗದಸ್ತಾಗಿ ಉಂಡರು, ಆಮೇಲೆ ಎದ್ದು ಹೋದರು. ‘ಉಂಡು ಹೋದ, ಕೊಂಡು ಹೋದʼ ಎನ್ನುತ್ತೀವಲ್ಲಾ.. ಹಾಗೆ. ಆದರೆ, ಅದೇ ಸಿದ್ದಪುರುಷನನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡವರು, 'ಅನ್ ಪಾಲಿಷ್ಡ್ ಡೈಮಂಡ್' ಎಂದು ಸೋನಿಯಾ ಗಾಂಧಿ ಅವರ ಮುಂದೆ ವಕಾಲತ್ತು ಹಾಕಿದ ಎಸ್.ಎಂ.ಕೃಷ್ಣ ಅವರ ಬಗ್ಗೆ ಈ ಪರಿಯ ಕೃತಜ್ಞತೆಗೆ ಏನಾಗಿತ್ತು? ಕೃತಜ್ಞತೆ, ಕರುಣೆ, ಉಪಕಾರ ಸ್ಮರಣೆಗಳ ಕತ್ತುಕುಯ್ದು ರಾಜಕೀಯದ ಅಂತ್ಯಕಾಲದಲ್ಲಿ ಅವರು ಬಿಜೆಪಿಗೆ ಹೋಗುವ ಸ್ಥಿತಿ ಸೃಷ್ಟಿಸಿದವರು ಯಾರು? ವಿಶ್ವಸಂಸ್ಥೆಯಿಂದ ದೆಹಲಿಗೆ ಮರಳಿದ ಕೂಡಲೇ ಅಪಮಾನಕರವಾಗಿ ಸಂಪುಟದಿಂದ ಅವರನ್ನು ಕಿತ್ತೊಗೆದದ್ದು ಉಪಕಾರ ಸ್ಮರಣೆಯೇ? ಕಷ್ಟಕಾಲದಲ್ಲಿ ಇಡೀ ಕಾಂಗ್ರೆಸ್ಸಿಗೆ ಆಸರೆ ಆಗಿದ್ದವರನ್ನು ತುಚ್ಛವಾಗಿ ಆಚೆಗಟ್ಟಿದ್ದು ಗೌರವವೇ? ಅವಕಾಶವಾದಿ, ಗೋಸುಂಬೆ, ನರಿಬುದ್ಧಿ ಯಾರದ್ದು? ಎಂದು ಜೆಡಿಎಸ್ ಟಾಂಗ್ ನೀಡಿದೆ.

ಇದನ್ನೂ ಓದಿ: ಮಲೆ ಮಾದಪ್ಪನ ಹುಂಡಿ ಎಣಿಕೆ: ಕೇವಲ 39 ದಿನಗಳಲ್ಲಿ ₹2.28 ಕೋಟಿ ಕಾಣಿಕೆ ಸಂಗ್ರಹ

ಹದ್ದಾಗಿ ಕುಕ್ಕಿದ ವಲಸೆ ಹಕ್ಕಿ!: ಕಾಲಕ್ಕೆ ತಕ್ಕಂತೆ ಕಲರ್ ಬದಲಿಸಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಅರೆಮರೆವು ರೋಗ. 'ಅನ್ ಪಾಲಿಷ್ಡ್ ಡೈಮಂಡ್' ಕೈ ಪಾಲಾದ ಮೇಲೆ, ಅಲ್ಲಿದ್ದ ಮೂಲನಿವಾಸಿಗಳ ಗತಿ ಏನಾಯಿತು? ಬಹುತೇಕರು ಬೀದಿಪಾಲು. ಖರ್ಗೆಯವರೇ ದೆಹಲಿ ಪಾಲು, ಉಳಿದವರನೇಕರು ಬಿಜೆಪಿ ಪಾಲು! ಹೋಗಲಿ, ಸಿ.ಎಂ.ಇಬ್ರಾಹಿಂ ಅವರು ನಮ್ಮ ಪಕ್ಷದ ಪಾಲಾಗಿದ್ದು ಯಾಕೆ? ನಿಮ್ಮ ಪಡಸಾಲೆಯಲ್ಲಿ ಗತಿಗೆಟ್ಟು ಕೂತಿದ್ದ 'ವಲಸೆ ಹಕ್ಕಿ' ನಮ್ಮಲ್ಲಿಗೆ ಬಂದು ಶಾಸಕರಾದರು, ರಾಜ್ಯಾಧ್ಯಕ್ಷರೂ ಆದರು. ಆಮೇಲೆ ಬೇಲಿ ಹಾರಿ ಆಶ್ರಯ ಕೊಟ್ಟವರನ್ನೇ ಈಗ ಹದ್ದಾಗಿ ಕುಕ್ಕುತ್ತಿದ್ದಾರೆ! ಎಂದು ಜೆಡಿಎಸ್ ಟೀಕಿಸಿದೆ.

ಹೀಗೆ ವಲಸೆ ಹಕ್ಕಿಗಳ ಹಿಂಡನ್ನೇ ಕಟ್ಟಿಕೊಂಡು ರಣಹದ್ದುಗಳಂತೆ ಕಾಂಗ್ರೆಸ್ ಮೂಲನಿವಾಸಿಗಳನ್ನು ಕುಕ್ಕಿಕುಕ್ಕಿ ಹರಿದು ತಿನ್ನುತ್ತಿರುವ ‘ಸಿದ್ದಕಲೆʼಯೇ ಕರ್ನಾಟಕ ರಾಜಕೀಯದ ಹೊಸ ಮಾದರಿ! ಅದು ಮಾದರಿ ಅಲ್ಲ, ಮಹಾಮಾರಿ. ಕಷ್ಟದಿಂದ ಗೆದ್ದಲು ಕಟ್ಟಿಕೊಂಡ ಹುತ್ತದೊಳಕ್ಕೆ ವಿಷಸರ್ಪ ಹೊಕ್ಕಿದಂತೆ ಆಗಿದೆ ರಾಜ್ಯ ಕಾಂಗ್ರೆಸ್ ಗತಿ. ತನ್ನ ಮನೆಬಾಗಿಲು ಕಾಯುವ ಗಿರಾಕಿಗಳನ್ನೇ ಸಂಪುಟಕ್ಕೆ ತುಂಬಿಕೊಂಡು ಪಕ್ಷಕ್ಕೆ ರಕ್ತಮಾಂಸ ತುಂಬಿದವರೆಲ್ಲ ಸಿದ್ದಸಿಂಹಾಸನಕ್ಕೆ ದೂರ ದೂರ!! ಎಂದು ಜೆಡಿಎಸ್ ಕಿಡಿಕಾರಿದೆ.

ವಿಧಾನಸೌದದಲ್ಲಿ ಗುರುವಾರದ ಬಜಾರ್: ನಂಬಿಕೆ, ಪ್ರಾಮಾಣಿಕತೆ, ನಿಷ್ಠೆ, ನಿಯತ್ತನ್ನು ಗುಜರಿಗೆ ಹಾಕಿ ‘ಸಂಡೇ ಬಜಾರ್ʼನಂತೆ ವಿಧಾನಸೌಧವನ್ನೇ ‘ಗುರುವಾರದ ಬಜಾರ್ʼ ಮಾಡಿಕೊಂಡವರು ನೀವು. ನಿಜಕ್ಕೂ ನಿಮಗೆ ಲಜ್ಜೆ ಇದೆಯಾ? ವಾರಕ್ಕೊಂದು ದಿನ ಅದೂ ಗುರುವಾರದ ದಿನವಷ್ಟೇ ಸಂಪುಟ ನೆಪದಲ್ಲಿ 3ನೇ ಮಹಡಿಯಲ್ಲಿ ಕೆಲ ಹೊತ್ತಷ್ಟೇ ಠಳಾಯಿಸಿ, 24/7 ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡುತ್ತಿರುವವರು ಲಜ್ಜೆಯಲ್ಲೂ ಕನಿಷ್ಠ-ಗರಿಷ್ಠ ಎಂದು ಅಳತೆ ಮಾಡುತ್ತಿರುವುದು ಅದ್ಭುತ.. ಅಲ್ಲಲ್ಲ.. ಅದ್ಭುತಃ! ಎಂದು ಜೆಡಿಎಸ್ ಟಾಂಗ್ ಕೊಟ್ಟಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News