ನವದೆಹಲಿ: ಸರಿಯಾಗಿ ಕಾರ್ಯನಿರ್ವಹಿಸದ ಸರ್ಕಾರಿ ನೌಕರರಿಗೆ ತ್ರಿಪುರ ಸಿಎಂ ಬಿಪ್ಲಾಬ್ ಕುಮಾರ್ ದೇಬ್ ಈಗ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ತ್ರಿಪುರಾ ಸಫಾಯಿ ಕರ್ಮಚಾರಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ತ್ರಿಪುರಾ ಸಿಎಂ 'ಸರಿಯಾಗಿ ಕೆಲಸ ಮಾಡದ ನೌಕರರಿಗೆ ಸ್ವಯಂಪ್ರೇರಿತ ನಿವೃತ್ತಿ ನೀಡಲಾಗುವುದು ಎಂದು ಹೇಳಿದ್ದಾರೆ. 'ನಾನು ಕೆಲಸವನ್ನು ಪೂಜಿಸುತ್ತೇನೆ ಮತ್ತು ಗಂಭೀರವಾಗಿ ಪರಿಗಣಿಸುತ್ತೇನೆ. ಎಲ್ಲರೂ ಸರಿಯಾಗಿ ಕಾರ್ಯ ನಿರ್ವಹಿಸಬೇಕೆಂದು ನಾನು ಬಯಸುತ್ತೇನೆ. ನೀವು ಸರ್ಕಾರಿ ಕೆಲಸ ಮಾಡಲು ಬಯಸಿದರೆ ಅದನ್ನು ಸರಿಯಾಗಿ ಮಾಡಿ. ಸಾವಿರಾರು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಆದ್ದರಿಂದ, ನಿಮಗೆ ಕೆಲಸ ಮಾಡಲು ಆಗದಿದ್ದರೆ ಕೆಲಸವನ್ನು ಬಿಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಕಚೇರಿಗಳಲ್ಲಿ ಇರುವ ಸಮಸ್ಯೆಗಳನ್ನು ಉಲ್ಲೇಖಿಸಿದ ಸಿಎಂ ನೌಕರರಿಗೆ ಸರಿಯಾಗಿ ಕಾರ್ಯ ನಿರ್ವಹಿಸಲು ಸೂಚನೆ ನೀಡಿದ್ದಾರೆ. ಬಿಜೆಪಿ-ಐಪಿಎಫ್ಟಿ ಸರ್ಕಾರ ಮಾರ್ಚ್, 2018 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಹೊಸ ಉದ್ಯೋಗ ನೀತಿಯನ್ನು ಜಾರಿಗೆ ತಂದಿತು. ಅಲ್ಲದೆ ಕೆಲಸಕ್ಕೆ ಗೈರುಹಾಜರಿ ಮತ್ತು ಕರ್ತವ್ಯದ ನಿರ್ಲಕ್ಷ್ಯಕ್ಕಾಗಿ ಸರ್ಕಾರ ಕೆಲವು ನೌಕರರ ವಿರುದ್ಧವೂ ಕ್ರಮ ಕೈಗೊಂಡಿತ್ತು.