ಕೊಲ್ಕತ್ತಾ: 'ಮಮತಾ ಬ್ಯಾನರ್ಜಿ ಜಿಂದಾಬಾದ್', 'ತೃಣಮೂಲ ಕಾಂಗ್ರೆಸ್ ಜಿಂದಾಬಾದ್' ಎಂದು ಹೇಳದ ವಿದ್ಯಾರ್ಥಿಗಳ ಮೇಲೆ ತೃಣಮೂಲ ಕಾಂಗ್ರೆಸ್ ಪಕ್ಷದ ಸ್ಟೂಡೆಂಟ್ ವಿಂಗ್ ಕಾರ್ಯಕರ್ತರು ಹಲ್ಲೆ ಮಾಡಿ, ಥಳಿಸಿದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಕಾಲೋಜೊಂದರಲ್ಲಿ ಬುಧವಾರ ನಡೆದಿದೆ.
ಐಎಎನ್ಎಸ್ ಸುದ್ದಿ ಸಂಸ್ಥೆಯ ಪ್ರಕಾರ, ವಿಧಾರ್ಥಿಗಳ ರಕ್ಷಣೆಗೆ ಬಂದ ಪ್ರಾಧ್ಯಾಪಕರ ಮೇಲೂ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಪ್ರಾಧ್ಯಾಪಕ ಸುಬ್ರತಾ ಚಟ್ಟೋಪಾಧ್ಯಾಯ ಅವರ ತಲೆ ಮತ್ತು ಮುಖಕ್ಕೆ ಗಾಯಗಳಾಗಿವೆ. ಹೂಗ್ಲಿ ಬಳಿಯ ಕೊನ್ನಗರದ ನಬಗ್ರಾಮ್ ಹಿರಾಲಾಲ್ ಪಾಲ್ ಕಾಲೇಜಿನಲ್ಲಿ ಈ ಘರ್ಷಣೆ ನಡೆದಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿರುವ ಪ್ರಾಧ್ಯಾಪಕ ಸುಬ್ರತಾ ಅವರು, ತಮ್ಮ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ಹೆಸರು ಹೇಳಲು ನಿರಾಕರಿಸಿದ್ದಾರೆ. ಘಟನೆಯಲ್ಲಿ ಪ್ರಾಧ್ಯಾಪಕರಿಗೆ ಕಪಾಳ ಮೋಕ್ಷ ಮಾಡಿರುವ ದೃಶ್ಯ ಕೆಲವು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್ ಮುಖ್ಯಸ್ಥ ತೃಣಂಕೂರ್ ಭಟ್ಟಾಚಾರ್ಯ ಅವರು, ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಸಂಘಕ್ಕೆ ಸೇರಿದವರೇ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದರೆ ಈ ಕೃತ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಬಗ್ಗೆ ವಿಚಾರಣೆ ನಡೆಸಿ, ತಪ್ಪು ಮಾಡಿದವರಿಗೆ ಖಂಡಿತಾ ತಕ್ಕ ಶಿಕ್ಷೆ ಆಗಲಿದೆ" ಎಂದು ಹೇಳಿದ್ದಾರೆ.