ಮಾಸ್ಕೋ: ರಷ್ಯಾದ ವಿಮಾನವೊಂದು ಟೇಕ್ ಆಫ್ ಆಗುತ್ತಿದ್ದಂತೆ ಹಕ್ಕಿಗಳ ಹಿಂಡೊಂದು ಎಂಜಿನ್ ಗೆ ಬಡಿದ ಪರಿಣಾಮ ವಿಮಾನ ಬೆಂಕಿಗೆ ಆಹುತಿಯಾಗುವ ಸಾಧ್ಯತೆಯನ್ನು ಮನಗಂಡ ಪೈಲೆಟ್, ಜೋಳದ ಹೊಲದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡುವ ಮೂಲಕ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ.
ಮಾಸ್ಕೋ ವಿಮಾನ ನಿಲ್ದಾಣದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, 234 ಪ್ರಯಾಣಿಕರನ್ನು ಹೊತ್ತು ಉರಲ್ ಏರ್ಲೈನ್ಸ್ನ ಏರ್ಬಸ್ 321 ಟೆಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಹಕ್ಕಿಗಳ ಹಿಂಡು ಡಿಕ್ಕಿ ಹೊಡೆದ ಪರಿಣಾಮ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಘಟನೆಯಲ್ಲಿ ಯಾರಿಗೂ ಪ್ರಾನಾಪಾಯವಾಗಿಲ್ಲ ಎಂದು ವಿಮಾನಯಾನ ಮತ್ತು ವಾಯು ಸಾರಿಗೆ ಸಂಸ್ಥೆ ತಿಳಿಸಿದೆ.
ಮೊದಲಿಗೆ ಮಾಸ್ಕೋದ ಜುಕೋವಸ್ಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ನಿರ್ಧರಿಸಿದ್ದ ವಿಮಾನದ ಪೈಲಟ್ ಡ್ಯಾಮಿರ್ ಯೂಸೂಫೋವ್, ಬಳಿಕ ಅನಾಹುತವನ್ನು ತಪ್ಪಿಸುವ ಉದ್ದೇಶದಿಂದ ಜೋಳದ ಹೊಲದಲ್ಲಿ ಲ್ಯಾಂಡ್ ಮಾಡಿ ಸಮಯಪ್ರಜ್ಞೆ ಮೆರೆದಿದ್ದಾರೆ. ಇಲ್ಲವಾದಲ್ಲಿ ಭಾರೀ ಪ್ರಾನಪಾಯ ಸಂಭವಿಸುತ್ತಿತ್ತು ಎನ್ನಲಾಗಿದೆ.