ನವದೆಹಲಿ: ಮಹಾತ್ಮ ಗಾಂಧೀಜಿಯವರ ಹೆಸರು ಹೇಳುವುದು ಸುಲಭ, ಆದರೆ ಅವರ ಹಾದಿಯಲ್ಲಿ ನಡೆಯುವುದು ಸುಲಭವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ ದೆಹಲಿಯಲ್ಲಿ ಇಂದು ಕಾಂಗ್ರೆಸ್ ಆಯೋಜಿಸಿದ್ದ 'ಗಾಂಧಿ ಸಂದೇಶ ಯಾತ್ರೆ'ಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಇಂದು ನಮ್ಮೆಲ್ಲರಿಗೂ ಐತಿಹಾಸಿಕವಾಗಿ ಶುಭ ದಿನ, ಇಂದು ಮಹಾತ್ಮ ಗಾಂಧಿಯವರಂತಹ ವ್ಯಕ್ತಿ ಜನಿಸಿದ್ದು, ಇಡೀ ಜಗತ್ತಿಗೆ ಅಹಿಂಸೆಯ ಸ್ಫೂರ್ತಿ. ನಮ್ಮ ದೇಶ ಮತ್ತು ಇಡೀ ಜಗತ್ತು ಗಾಂಧೀಜಿಯ 150ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದೆ ಎಂದು ಹೇಳಿದರು.
Sonia Gandhi, Congress: Bharat aur Gandhi ji ek doosre ke paryay hain, ye alag baat hai aaj kal kuch logon ne ise ulta karne ki zid pakad li hai. Vo chahte hain ki Gandhi ji nahi balki RSS Bharat ka pratik ban jayein. 2/2 https://t.co/B9kMAn9wM0
— ANI (@ANI) October 2, 2019
ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸೋನಿಯಾ, ಗಾಂಧೀಜಿ ಸತ್ಯ ಮತ್ತು ಅಹಿಂಸೆ ತತ್ವಗಳನ್ನು ಪಾಲಿಸುತ್ತಿದ್ದರು ಎಂಬುದು ಸುಳ್ಳಿನ ರಾಜಕೀಯ ಮಾಡುತ್ತಿರುವವರಿಗೆ ಅರ್ಥವಾಗುವುದಿಲ್ಲ. ಎಲ್ಲಾ ಅಧಿಕಾರಗಳೂ ತಮ್ಮ ಕೈಯಲ್ಲೇ ಇರಬೇಕೆಂದು ಬಯಸುವವರಿಗೆ ಗಾಂಧೀಜಿಯವರ ಸ್ವರಾಜ್ಯದ ಉದ್ದೇಶ ಅರ್ಥವಾಗುವುದಿಲ್ಲ. ಕಾಂಗ್ರೆಸ್ ಪಕ್ಷವು ಗಾಂಧೀಜಿಯ ತತ್ವಗಳನ್ನು ಪ್ರತಿಯೊಂದು ಹೆಜ್ಜೆಯಲ್ಲೂ ಅನುಸರಿಸಿತ್ತು, ಅನುಸರಿಸುತ್ತಿದೆ. ನೆಹರೂನಿಂದ ಹಿಡಿದು ಮನಮೋಹನ್ ಸಿಂಗ್ ವರೆಗೆ ಎಲ್ಲರೂ ನವ ಭಾರತ ನಿರ್ಮಾಣಕ್ಕಾಗಿ ಕೆಲಸ ಮಾಡಿದ್ದಾರೆ. ಕಳೆದ 4-5 ವರ್ಷಗಳಲ್ಲಿ ಭಾರತದ ಸ್ಥಿತಿ ಕಂಡು ಗಾಂಧಿಯವರ ಆತ್ಮವೂ ದುಃಖಿತವಾಗಿದೆ ಎಂದು ಸೋನಿಯಾ ಹೇಳಿದರು.
"ಗಾಂಧೀಜಿ ಹೆಸರು ಬಳಸಿಕೊಂಡು ಎಲ್ಲರನ್ನೂ ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಆದರೆ ಅವರು ನಡೆದ ಹಾದಿ, ತತ್ವಗಳನ್ನು ಅನುಸರಿಸುವುದು ಸುಲಭವಲ್ಲ. ಆರ್ಎಸ್ಎಸ್ ದೇಶದ ಸಂಕೇತವಾಗಬೇಕೆಂದು ಬಯಸುವವರು ಗಾಂಧೀಜಿಯ ಹಾದಿಯಲ್ಲಿ ನಡೆಯಲು ಎಂದಿಗೂ ಸಾಧ್ಯವಿಲ್ಲ. ನಮ್ಮ ದೇಶದ ಅಡಿಪಾಯದಲ್ಲಿ ಗಾಂಧಿಯವರ ತತ್ವಗಳ ಅಡಿಪಾಯವಿದೆ. ಕೆಲವರು ಅದನ್ನು ಹಿಮ್ಮುಖಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಬೇರೆ ವಿಷಯ" ಎಂದು ಸೋನಿಯಾ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯಸಭಾ ಸಂಸದ ಅಹ್ಮದ್ ಪಟೇಲ್, ಗುಲಾಮ್ ನಬಿ ಆಜಾದ್ ಮತ್ತು ಪಿಸಿ ಚಾಕೊ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.