ಇಲಿಗಳಿಗೆ ಹೆದರಿದ 'ರಾಜಹುಲಿ'!

ಇಲಿ ಕಾಟಕ್ಕೆ ಬೇಸತ್ತು ವಿಧಾನಸೌಧದ ಕೊಠಡಿ ಸಂಖ್ಯೆ 313 ರಲ್ಲಿ ನಿಗದಿಯಾಗಿದ್ದ ಸಭೆಯನ್ನು ಸ್ಥಳಾಂತರ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

Last Updated : Oct 14, 2019, 12:03 PM IST
ಇಲಿಗಳಿಗೆ ಹೆದರಿದ 'ರಾಜಹುಲಿ'! title=
File image

ಬೆಂಗಳೂರು: ವಿಧಾನಸೌಧದಲ್ಲಿ ಇಲಿ ಹೆಗ್ಗಣಗಳ ಉಪಟಳ ಹೆಚ್ಚಾಗಿದೆ. ಇಲಿಗಳ ಆರ್ಭಟಕ್ಕೆ ಬೇಸತ್ತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸೌಧದ ಕೊಠಡಿ ಸಂಖ್ಯೆ 313 ರಲ್ಲಿ ನಿಗದಿಯಾಗಿದ್ದ ಸಭೆಯನ್ನು ವಿಧಾನಸೌಧದ 3 ನೇ ಮಹಡಿಯಲ್ಲಿರುವ ಸಿಎಂ ಕೊಠಡಿಗೆ ಸ್ಥಳಾಂತರಿಸಿದ್ದಾರೆ.

ಮುಖ್ಯಮಂತ್ರಿಗೂ ತಪ್ಪಲಿಲ್ಲ ಇಲಿಗಳ ಕಾಟ:
ವಿಧಾನಸೌಧದ ಕೊಠಡಿ ಸಂಖ್ಯೆ 313 ರಲ್ಲಿ ಇಂದು ಹಲವು ಸಭೆಗಳು ನಿಗದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಲ್ಲಿಗೆ ಆಗಮಿಸಿದ್ದರು. ಆದರೆ ಕೊಠಡಿಯೊಳಗೆ ಕಾಲಿಡುತ್ತಿದ್ದಂತೆ ಅಸಹನೀಯ ವಾಸನೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅದೇನದು ದುರ್ವಾಸನೆ. ಮೊದಲು ಅದನ್ನ ಕ್ಲೀನ್ ಮಾಡಿ ಎಂದು ಅಧಿಕಾರಿಗಳಿಗೆ ಗರಂ ಆಗಿ ಸೂಚನೆ ನೀಡಿದರು.

ಮುಖ್ಯಮಂತ್ರಿ ಕೊಠಡಿಗೇ ಶಿಫ್ಟ್ ಆದ ಸಭೆ:
ವಿಧಾನಸೌಧದ ಕೊಠಡಿ ಸಂಖ್ಯೆ 313 ರಲ್ಲಿ ಇಂದು ನಿಯೋಗದ ಭೇಟಿಗೆ ಸಮಯ ನಿಗದಿಯಾಗಿತ್ತು. ಆದರೆ ಕೊಠಡಿ ಸಂಖ್ಯೆ 313 ರಲ್ಲಿ ಇಲಿ ಹೆಗ್ಗಣಗಳ ಕಾಟ, ಜೊತೆಗೆ ಇಲಿ ಸತ್ತಿರುವ ದುರ್ವಾಸನೆಗೆ ಅಸಮಾಧನಾ ವ್ಯಕ್ತಪಡಿಸಿರುವ ಸಿಎಂ ಯಡಿಯೂರಪ್ಪ, ನನ್ನ ಕಚೇರಿಯಲ್ಲೇ ಸಭೆ ಮಾಡೋಣ, ಇಲ್ಲಿ ಬೇಡ ಬನ್ನಿ ಎಂದು ಅಲ್ಲಿಂದ ತೆರಳಿದ್ದಾರೆ.

ಇಲಿಗಳು ಸತ್ತ ದುರ್ವಾಸನೆಯಲ್ಲೇ ಮುಖ್ಯಮಂತ್ರಿಗಳಿಗಾಗಿ ಕಾದು ಕುಳಿತಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು ಸಿಎಂ ಸೂಚನೆ ಬಳಿಕ ಅವರ ಹಿಂದೆಯೇ ಎದ್ದು ನಡೆದಿದ್ದಾರೆ. ಬಳಿಕ ವಿಧಾನ ಸೌಧದ 3 ನೇ ಮಹಡಿಯಲ್ಲಿರುವ ಸಿಎಂ ಕೊಠಡಿಯಲ್ಲೇ ಸಭೆ ಆರಂಭವಾಗಿದೆ.
 

Trending News