ಬೆಂಗಳೂರು: ಪೊಲೀಸ್ ಸಹಾಯವಾಣಿಗೆ ಕರೆ ಮಾಡುವಾಗ ಸಾರ್ವಜನಿಕರೂ ಎಚ್ಚರಿಕೆಯಿಂದ ಇರಬೇಕು. ಹುಸಿ ಕರೆ ಮಾಡಿ ಕರ್ತವ್ಯಕ್ಕೆ ತೊಂದರೆಕೊಡುವುದು ಸರಿಯಲ್ಲ. ಈ ರೀತಿಯ ಪ್ರಕರಣಗಳು ನಡೆದರೆ ಆರು ತಿಂಗಳವರೆಗೆ ಶಿಕ್ಷೆ ವಿಧಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಾಣ ಹೇಳಿದರು.
ರೇಡಿಯೋ ವಾಹಿನಿ 93.5 ರೆಡ್ ಎಫ್ಎಂನಲ್ಲಿ ಮಂಗಳವಾರ ಬೆಳಗ್ಗೆ ಪ್ರಸಾರವಾದ ಲೈವ್ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಾಣ ಪಾಲ್ಗೊಂಡು ನಾಗರಿಕರ ಕುಂದು ಕೊರತೆಗಳನ್ನು ಆಲಿಸಿ ಕೆಲವೊಂದು ಸಲಹೆಗಳನ್ನು ನೀಡಿದರು.
ನಗರದ ಹಲವು ಸಮಸ್ಯೆಗಳು ಅದಕ್ಕೆ ಇರುವ ಪರಿಹಾರಗಳು, ಹೊಸ ಯೋಜನೆಗಳು ಹಾಗೂ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಕುರಿತಂತೆ ಬಗ್ಗೆ ಉಪಮುಖ್ಯಮಂತ್ರಿಗಳು ತಮ್ಮ ಕನಸುಗಳನ್ನು ರೇಡಿಯೋ ಕಾರ್ಯಕ್ರಮದಲ್ಲಿ ಹಂಚಿಕೊಂಡರು.
ಎಲ್ಲಾ ತುರ್ತು ಸಂದರ್ಭಗಳಲ್ಲಿ ನಾಗರಿಕರ ಸಹಾಯಕ್ಕೆ ಬರುವ '112' ಸಹಾಯವಾಣಿ ಬಗ್ಗೆ ಪ್ರಸ್ತಾಪಿಸಿದ ಅವರು ಈ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿದರು.
ನಾಗರಿಕರಿಗೆ ತುರ್ತು ಸಂದರ್ಭದಲ್ಲಿ ನೆರವಿಗಾಗಿ ಬಿಬಿಎಂಪಿಯಿಂದ ಸಹಾಯ ಆ್ಯಪ್ ಆರಂಭಿಸಿದ್ದು, ಇದನ್ನು ಡೌನ್ ಲೋಡ್ ಮಾಡಿಕೊಂಡು ಅದರ ಮೂಲಕವೂ ದೂರು ನೀಡಲು ಅವಕಾಶವಿದೆ ಎಂದು ಡಿಸಿಎಂ ತಿಳಿಸಿದರು.
ತುರ್ತು ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಿದರೂ ಪೊಲೀಸರು ಸ್ವೀಕರಿಸುತ್ತಿಲ್ಲ ಎಂಬ ಶ್ರೋತೃ ಒಬ್ಬರ ದೂರಿಗೆ ಪ್ರತಿಕ್ರಿಯಿಸಿದ ಅವರು, ಇನ್ನು ಮುಂದೆ ಆ ಸಮಸ್ಯೆ ಎದುರಾಗುವುದಿಲ್ಲ. ಈಗಾಗಲೇ ಈ ಬಗ್ಗೆ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಅದೇ ರೀತಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡುವಾಗ ಸಾರ್ವಜನಿಕರೂ ಎಚ್ಚರಿಕೆಯಿಂದ ಇರಬೇಕು. ಹುಸಿ ಕರೆ ಮಾಡಿ ಕರ್ತವ್ಯಕ್ಕೆ ತೊಂದರೆಕೊಡುವುದು ಸರಿಯಲ್ಲ. ಈ ರೀತಿಯ ಪ್ರಕರಣಗಳು ನಡೆದರೆ ಆರು ತಿಂಗಳವರೆಗೆ ಶಿಕ್ಷೆ ವಿಧಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಾಣ ಮಾಹಿತಿ ಒದಗಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಪಾತ್ ಸೇರಿದಂತೆ ಬೆಂಗಳೂರಿನ ನಾಗರಿಕರಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳ ಬಗ್ಗೆಯೂ ವಿವರಿಸಿದ ಉಪಮುಖ್ಯಮಂತ್ರಿಗಳು, ನಾಗರಿಕರಿಗೆ ಬೇಕಾದ ಎಲ್ಲಾ ಸೌಲಭ್ಯ, ಸಹಕಾರ ನೀಡಲು ಸರ್ಕಾರ ಮತ್ತು ಬಿಬಿಎಂಪಿ ಸಿದ್ಧವಿದೆ. ಅದೇ ರೀತಿ ಜನರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ ಎಂದವರು ತಿಳಿಸಿದರು.