ನವದೆಹಲಿ: ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಡಿಯಲ್ಲಿ ಮಸೀದಿ ನಿರ್ಮಿಸಲು ಐದು ಎಕರೆ ಭೂಮಿಯನ್ನು ಅಯೋಧ್ಯೆಯಲ್ಲಿ ಸ್ವಾಧೀನಪಡಿಸಿಕೊಂಡಿರುವ 67 ಎಕರೆ ಭೂಮಿಯಲ್ಲಿರಬೇಕು ಎಂದು ಈ ಪ್ರಕರಣದ ಪ್ರಮುಖ ದಾವೆದಾರ ಇಕ್ಬಾಲ್ ಅನ್ಸಾರಿ ಮತ್ತು ಹಲವಾರು ಸ್ಥಳೀಯ ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.
1991 ರಲ್ಲಿ ಕೇಂದ್ರ ಸರ್ಕಾರ ವಿವಾದಿತ ಸ್ಥಳ ಸೇರಿದಂತೆ 67 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಈಗ ಸುಪ್ರೀಂಕೋರ್ಟ್ ತೀರ್ಪಿನ ನಂತರ ಈ ವ್ಯಾಪ್ತಿ ಪ್ರದೇಶದಲ್ಲಿ ಭೂಮಿಯನ್ನು ನೀಡಬೇಕೆಂದು ಮುಸ್ಲಿಂ ಮುಖಂಡರು ಒತ್ತಾಯಿಸುತ್ತಿದ್ದಾರೆ.
"ಅವರು ನಮಗೆ ಭೂಮಿಯನ್ನು ನೀಡಲು ಬಯಸಿದರೆ, ಅವರು ನಮ್ಮ ಅನುಕೂಲಕ್ಕೆ ಅನುಗುಣವಾಗಿ ನಮಗೆ ಕೊಡಬೇಕು ಮತ್ತು ಸ್ವಾಧೀನಪಡಿಸಿಕೊಂಡಿರುವ 67 ಎಕರೆ ಭೂಮಿಯಲ್ಲಿ ಮಾತ್ರ ನೀಡಬೇಕು ಆಗ ಮಾತ್ರ ನಾವು ಆ ಭೂಮಿಯನ್ನು ತೆಗೆದುಕೊಳ್ಳುತ್ತೇವೆ.'ಚೌಡಾ ಕೋಸ್ ದಿಂದ ಹೊರಗೆ ಹೋಗಿ' ಅಲ್ಲಿ ಮಸೀದಿಯನ್ನು ನಿರ್ಮಿಸಿ ಎಂದು ಹೇಳುತ್ತಿರುವ ವಾದವನ್ನು ನಾವು ತಿರಸ್ಕರಿಸುತ್ತೇವೆ, ಈ ವಾದ ನ್ಯಾಯೋಚಿತವಲ್ಲ ಎಂದು ಅನ್ಸಾರಿ ಹೇಳಿದರು. ಅಯೋಧ್ಯೆ ತೀರ್ಪಿನ ನಂತರ ಪರಿಶೀಲನಾ ಅರ್ಜಿಯನ್ನು ಸಲ್ಲಿಸುವುದಿಲ್ಲ ಎಂದು ಅನ್ಸಾರಿ ಹೇಳಿದ್ದರು.
ಇನ್ನೊಂದೆಡೆ ಸ್ಥಳೀಯ ಇಮಾಮ್ ಮೌಲಾನಾ ಜಲಾಲ್ ಅಶ್ರಫ್ ಮಾತನಾಡಿ 'ಮಸೀದಿ ನಿರ್ಮಿಸಲು ಮುಸ್ಲಿಮರು ಸ್ವಂತವಾಗಿ ಭೂಮಿಯನ್ನು ಖರೀದಿಸಬಹುದು ಎಂದು ಆಗ್ರಹಿಸಿದರು. ಇನ್ನು ಮುಂದುವರೆದು 'ನ್ಯಾಯಾಲಯ ಅಥವಾ ಸರ್ಕಾರ ನಮ್ಮ ಭಾವನೆಗಳನ್ನು ಸ್ವಲ್ಪ ಮಟ್ಟಿಗೆ ಸಮಾಧಾನಗೊಳಿಸಲು ಬಯಸಿದರೆ, 18ನೇ ಶತಮಾನದ ಸೂಫಿ ಸಂತ ಖಾಜಿ ಕುದ್ವಾ ಸೇರಿದಂತೆ ಅನೇಕ ಸ್ಮಶಾನಗಳು ಮತ್ತು ದರ್ಗಾಗಳನ್ನು ಸ್ವಾಧೀನಪಡಿಸಿಕೊಂಡಿರುವ ಪ್ರದೇಶದಲ್ಲಿ ಐದು ಎಕರೆ ಭೂಮಿಯನ್ನು ನೀಡಬೇಕು" ಎಂದು ಹೇಳಿದರು.
ಮುಸ್ಲಿಂ ಕಡೆಯಿಂದ ದಾವೆ ಹೂಡಿದ್ದ ಹಾಜಿ ಮಹಬೂಬ್, 'ನಾವು ಈ ಲಾಲಿಪಾಪ್ ಅನ್ನು ಸ್ವೀಕರಿಸುವುದಿಲ್ಲ. ಅವರು ನಮಗೆ ಎಲ್ಲಿ ಭೂಮಿಯನ್ನು ನೀಡಲು ಬಯಸುತ್ತಾರೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು" ಎಂದು ಒತ್ತಾಯಿಸಿದರು.