ನವದೆಹಲಿ: ನಾಲ್ಕು ವಾರಗಳಲ್ಲಿ ಶಬರಿಮಲೆ ದೇವಾಲಯದ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ತರಲು ಕೇರಳ ಸರ್ಕಾರವನ್ನು ಸುಪ್ರೀಂಕೋರ್ಟ್ ಬುಧವಾರ ಕೇಳಿದೆ.
ನ್ಯಾಯಮೂರ್ತಿ ಎನ್ ವಿ ರಮಣ, ಬಿ ಆರ್ ಗವಾಯಿ ಮತ್ತು ಸುಭಾಷ್ ರೆಡ್ಡಿ ಅವರ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ನಾಲ್ಕು ವಾರಗಳಲ್ಲಿ ಕರಡು ಸಲ್ಲಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ ಮತ್ತು ಈ ವಿಷಯವನ್ನು 2020 ರ ಜನವರಿ 3 ನೇ ವಾರಕ್ಕೆ ಮುಂದೂಡಿದೆ. ಪಂಡಲಂ ರಾಜವಂಶಸ್ಥ ಕುಟುಂಬ ತಮ್ಮ ಹಕ್ಕುಗಳ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಯನ್ನು ನಡೆಸುತ್ತಿತ್ತು.
ಎಲ್ಲಾ ವಯೋಮಾನದ ಮಹಿಳೆಯರು ದೇವಾಲಯಕ್ಕೆ ಪ್ರವೇಶಿಸಬಹುದು ಎಂದು ಘೋಷಿಸಿದ ಸುಪ್ರೀಂಕೋರ್ಟ್ ಸೆಪ್ಟೆಂಬರ್ 28, 2018 ರ ತೀರ್ಪನ್ನು ಪ್ರಶ್ನಿಸಿದ ಅರ್ಜಿದಾರರ ಗುಂಪಿನಲ್ಲಿ ರಾಜಮನೆತನವೂ ಕೂಡ ಒಂದಾಗಿದೆ. ಸುಪ್ರೀಂಕೋರ್ಟ್ ಕಳೆದ ವಾರ ಈ ಪರಿಶೀಲನಾ ಅರ್ಜಿಗಳನ್ನು ದೊಡ್ಡ ಏಳು ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖಿಸಿತ್ತು.
56 ಪರಿಶೀಲನಾ ಅರ್ಜಿಗಳು, ನಾಲ್ಕು ಹೊಸ ರಿಟ್ ಅರ್ಜಿಗಳು ಮತ್ತು ಐದು ವರ್ಗಾವಣೆ ಮನವಿಗಳು ಸೇರಿದಂತೆ 65 ಅರ್ಜಿಗಳ ಆಧಾರದ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ಬಂದಿತು. ಅರ್ಜಿಯು ಜನರ ನಂಬಿಕೆಯಲ್ಲಿ ಮಧ್ಯಪ್ರವೇಶಿಸುವ ನ್ಯಾಯಾಲಯದ ಅಧಿಕಾರವನ್ನು ಪ್ರಶ್ನಿಸಿತು.ಶಬರಿಮಲೆ ದೇವರು ಬ್ರಹ್ಮಚಾರಿ ಮತ್ತು ಮುಟ್ಟಿನ ಮಹಿಳಾ ಆರಾಧಕರ ಪ್ರವೇಶದಿಂದ ಶತಮಾನಗಳಷ್ಟು ಹಳೆಯ ನಂಬಿಕೆಗಳು ತೊಂದರೆಗೊಳಗಾಗಬಾರದು ಎಂದು ಅವರು ವಾದಿಸಿದರು.