ಬೆಳಗಾವಿ: ಅಂಬೇಡ್ಕರ್ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ, ಸಮಸಮಾಜ ನೀಡುತ್ತದೆ. ಇದಕ್ಕೆ ವಿರುದ್ದವಾಗಿ ಬಿಜೆಪಿಯವರು ನಡೆಯುತ್ತಿದ್ದಾರೆ. ಅಂಬೇಡ್ಕರ್ ಅವರು ದೇಶಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯ ಸಾಕಾಗುವುದಿಲ್ಲ. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ದೊರೆಯುವಂತಾಗಬೇಕು ಎಂದಿದ್ದಾರೆ. ಈ ಶಕ್ತಿಯನ್ನು ದುರ್ಬಲರಿಗೆ ತುಂಬವ ಸಲುವಾಗಿಯೇ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದೆ ಎಂದರು.
8 ತಿಂಗಳಲ್ಲಿ 5 ಗ್ಯಾರಂಟಿಳನ್ನು ಜಾರಿ ಮಾಡಿದ ಕಾಂಗ್ರೆಸ್ ನ ಮೇಲೆ ಜನರಿಗೆ ವಿಶ್ವಾಸವಿದೆ
ರಾಜ್ಯದ ಬಡ ಜನರ ತುತ್ತಿನ ಚೀಲ ತುಂಬಿಸುವ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಪೂರೈಸಲು ಕೋರಿದಾಗ, ಅಕ್ಕಿ ದಾಸ್ತಾನಿದ್ದರೂ ಕೇಂದ್ರ ಸರ್ಕಾರ ಅಕ್ಕಿ ನೀಡಲು ಒಪ್ಪಲಿಲ್ಲ. ಆದ್ದರಿಂದ ಕಾಂಗ್ರೆಸ್ ಸರ್ಕಾರ ಅಕ್ಕಿ ಬದಲು 5 ಕೆಜಿಗೆ 34 ರೂ. ನಂತೆ 170 ರೂ.ನಂತೆ ಜುಲೈ ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಗೃಹಜ್ಯೋತಿಯನ್ನು ಜುಲೈ ತಿಂಗಳಲ್ಲಿ ಜಾರಿ ಮಾಡಲಾಯಿತು. 1.60 ಕೋಟಿ ಫಲಾನುಭವಿಗಳಿಗೆ ಅಂದರೆ ರಾಜ್ಯದ ಸುಮಾರು 92% ಜನರಿಗೆ ಇದರಿಂದ ಲಾಭವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ 1.21 ಕೋಟಿ ಮನೆ ಯಜಮಾನಿಯರಿಗೆ ತಲಾ 2000 ರೂ.ನಂತೆ ಆಗಸ್ಟ್ ತಿಂಗಳಿನಿಂದ ಜಾರಿ ಮಾಡಲಾಯಿತು. ನಿರುದ್ಯೋಗಿ ಪದವೀಧರರಿಗೆ 2 ವರ್ಷಗಳವರೆಗೆ ತಿಂಗಳಿಗೆ 3000 ರೂ. ಹಾಗೂ ಡಿಪ್ಲೋಮಾ ಮಾಡಿದವರಿಗೆ ತಲಾ 2000 ರೂ. ನೀಡುವ ಯುವನಿಧಿ ಯೋಜನೆಯನ್ನು ವಿವೇಕಾನಂದ ಜನ್ಮದಿನಾಚರಣೆಯಂದು ಜಾರಿ ಮಾಡಲಾಯಿತು. ಈ ಅವಧಿಯಲ್ಲಿ ಬೇಡಿಕೆಯಿರುವ ತರಬೇತಿಯನ್ನು ಯುವಜನರಿಗೆ ನೀಡಿ, ಅವರಿಗೆ ಉದ್ಯೋಗ ದೊರೆಯಲು ಶಕ್ತಿ ತುಂಬಲಾಗುವುದು. ಹಿಂದೆಯೂ ನಾವು ನೀಡಿದ ಭರವಸೆಗಳನ್ನು ಈಡೇರಿಸಿದ್ದೆವು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ 5 ಗ್ಯಾರಂಟಿಗಳನ್ನು ತುಂಬಿ ಜನರಿಗೆ ವಿಶ್ವಾಸ ಬಂದಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದ್ದೇವೆ ಎಂದರು.
ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿಗಳನ್ನು ನಿಲ್ಲಿಸಬೇಕೆಂಬುದು ಬಿಜೆಪಿ ಹುನ್ನಾರ
ಬಿಜೆಪಿಯವರು ಮೊದಲು ನಮ್ಮ ಗ್ಯಾರಂಟಿಗಳನ್ನು ಆಡಿಕೊಂಡರು. ಬಳಿಕ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುವ ಸುಳ್ಳು ಹರಡಿದರು. ಅಭಿವೃದ್ಧಿ ಕೆಲಸಗಳು ನಿಲ್ಲುತ್ತವೆ ಎಂದರು, ಲೋಕಸಭಾ ಚುನಾವಣೆ ತನಕ ಮಾತ್ರ ನೀಡಿ, ನಂತರ ನಿಲ್ಲಿಸುತ್ತಾರೆ ಎಂಬ ಸುಳ್ಳುಗಳನ್ನು ಸೃಷ್ಟಿಸಿದ್ದಾರೆ. ಬಜೆಟ್ ನಲ್ಲಿ ಗ್ಯಾರಂಟಿಗಳಿಗೆ 52009 ಕೋಟಿ ರೂ.ಗನ್ನು ಇಟ್ಟಿದ್ದೇವೆ. ಅಭಿವೃದ್ಧಿ ಕೆಲಸಗಳಿಗೆ 68 ಸಾವಿರ ಕೋಟಿಗಳನ್ನೂ ಸೇರಿದಂತೆ 2024-25 ರಲ್ಲಿ ಒಟ್ಟು 1.20 ಲಕ್ಷ ಕೋಟಿ ಇಟ್ಟಿದ್ದೆವೆ ಎಂದು ವಿವರಿಸಿದರು.
ನಮ್ಮ ಸರ್ಕಾರದ ಬಜೆಟ್ ಗಾತ್ರ 3.71 ಲಕ್ಷ ಕೋಟಿ , ಬೊಮ್ಮಾಯಿಯವರ ಬಜೆಟ್ 23-24 ರಲ್ಲಿ 3.09 ಲಕ್ಷ ಕೋಟಿ. ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಜನರಿಗೆ ಕಾಂಗ್ರೆಸ್ ನ ಮೇಲೆ ವಿಶ್ವಾಸ ಕಡಿಮೆಯಾಗಲಿ ಎಂದು ಹುನ್ನಾರ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಗ್ಯಾರಂಟಿ ಯೋಜನೆಗಳನ್ನು ಕಂಡರೆ ಆಗುವುದಿಲ್ಲ. ಅದನ್ನು ನಿಲ್ಲಿಸಬೇಕೆಂಬುದು ಅವರ ಪಿತೂರಿಯಾಗಿದೆ ಎಂದರು. ಬಡವರು, ರೈತರು , ಮಹಿಳೆಯರು, ದಲಿತರು , ಅಲ್ಪಸಂಖ್ಯಾತರ ಏಳಿಗೆ ಅವರಿಗೆ ಮುಖ್ಯವಲ್ಲ ಎಂದರು.
ಮೋದಿಯಿಂದ ಮತ ಕ್ರೋಢೀಕರಣಕ್ಕಾಗಿ ದ್ವೇಷದ ಭಾಷಣ
ಮೋದಿಯವರು 10 ವರ್ಷಗಳಿಂದ ಯಾವುದೇ ಸಾಧನೆಗಳನ್ನು ಮಾಡಿಲ್ಲ. 2014 ರಲ್ಲಿ ನೀಡಿರುವ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಆದರೆ ಮೋದಿಯವರು ದ್ವೇಷದ ಭಾಷಣ ಮಾಡುತ್ತಿದ್ದಾರೆ. ಮತಗಳ ಕ್ರೋಢೀಕರಣ, ಧರ್ಮ ಕ್ರೋಢೀಕರಣ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ರಾಹುಲ್ ಗಾಂಧಿಯವರು ದೇಶದ ಉದ್ದಗಲಕ್ಕೂ ಪಾದ ಯಾತ್ರೆ ಹಾಗೂ ನ್ಯಾಯ ಯಾತ್ರೆ ಮಾಡಿದರು. ದೇಶ ವಿಭಜನೆ ಮಾಡಲು ಮೋದಿಯವರು ಮಾಡಿರುವ ಪ್ರಯತ್ನಗಳಿಂದ ಬೇಸತ್ತಿದ್ದ ಜನರ ಒಡೆದ ಮನಸ್ಸನ್ನು ಒಗ್ಗೂಡಿಸಲು ಯಾತ್ರೆ ಕೈಗೊಂಡು ಯಶಸ್ವಿಯಾದರು ಎಂದರು.
ಬಿಜೆಪಿಯವರು ರೈತ ಸಾಲ ಮನ್ನಾ ಮಾಡುವುದಿಲ್ಲ
ಕಾಂಗ್ರೆಸ್ ಪಕ್ಷ ನೀಡಿರುವ 25 ಗ್ಯಾರಂಟಿಗಳಿಗೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜು ಖರ್ಗೆ ಯವರು ಸಹಿ ಮಾಡಿ ಹಂಚಿದ್ದಾರೆ. ಬಡಕುಟುಂಬದ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ. ನೀಡುವ ಮಹಾಲಕ್ಷ್ಮಿ ಯೋಜನೆ, ಯುವನ್ಯಾಯದಡಿ ವರ್ಷಕ್ಕೆ 1 ಲಕ್ಷ ರೂ. ನೀಡುವ ಯೋಜನೆ, ರೈತರ ಬೆಳೆಗೆ ನ್ಯಾಯಯುತ ಬೆಲೆ, ಸಾಲ ಮನ್ನಾ, ಸ್ವಾಮಿನಾಥನ್ ವರದಿ ಜಾರಿ ಬೇಡಿಕೆಗಳನ್ನು ಈಡೇರಿಸುವ ‘ರೈತ ನ್ಯಾಯ’ ಯೋಜನೆಗಳ ಭರವಸೆ ನೀಡಿದೆ. ಮೋದಿಯವರು ರೈತರ ಸಾಲ ಮನ್ನಾ ಮಾಡಲಿಲ್ಲ. ಸ್ವಾಮಿನಾಥನ್ ವರದಿ ಜಾರಿ ಮಾಡಲಿಲ್ಲ. ಆದರೆ ಅಂಬಾನಿ, ಅದಾನಿಗಳಿಗೆ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ರೈತರ ಸಾಲ ಮನ್ನಾ ಮಾಡಲು ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಸಂಸದ ತೇಜಸ್ವಿ ಸೂರ್ಯ , ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ಒಳಿತಲ್ಲ ಎಂದಿದ್ದಾರೆ. ಬಿಜೆಪಿಯವರಿಗೆ ರೈತರ ಸಾಲ ಮನ್ನಾ ಮಾಡಬಾರದೆಂಬುದು ಅವರ ಹಿಡೆನ್ ಅಜೆಂಡಾ ಎಂದರು.
ರಾಜ್ಯಕ್ಕಾಗಿರುವ ಅನ್ಯಾಯವನ್ನು ಪ್ರಶ್ನಿಸಲು ಬಿಜೆಪಿ ಸಂಸದರು ಹೆದರುತ್ತಾರೆ
ಅವಕಾಶ ವಂಚಿತರಿಗೆ ನ್ಯಾಯ ನೀಡಲು, ಸರ್ಕಾರದ ಲಾಭ ದೊರಕಿಸಿಕೊಡಲು ಜಾತಿ ಗಣತಿ ಅತಿ ಮುಖ್ಯ. ಪಾಲುದಾರಿಕೆ ನ್ಯಾಯ, ಶ್ರಮಿಕ ನ್ಯಾಯ ಯೋಜನೆ ಗ್ಯಾರಂಟಿಗಳನ್ನು ಜಾರಿ ಮಾಡಲಾಗುವುದು. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಗ್ಯಾರಂಟಿ ಗಳನ್ನು ಜಾರಿ ಮಾಡಲಾಗಿದೆ. ಮೋದಿಯವರು ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ. ರಾಜ್ಯದಿಂದ 4.30 ಲಕ್ಷ ಕೋಟಿ ತೆರಿಗೆ ಹೋಗುತ್ತದೆ. ಆದರೆ ರಾಜ್ಯಕ್ಕೆ 100 ರೂ. ಗೆ ಕೇವಲ 13 ರೂ. ಮರಳಿ ಬರುತ್ತಿರುವುದು ನಮಗಾಗಿರುವ ಅನ್ಯಾಯ. 11495 ಕೋಟಿ ರೂ.ಗಳನ್ನು 15 ನೇ ಹಣಕಾಸು ಆಯೋಗ ನಿರ್ಧರಿಸಿತ್ತು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಲು ತಿಳಿಸಿದ್ದರೂ ಅವರು ಮಾಡಲಿಲ್ಲ. ರಾಜ್ಯಕ್ಕಾಗಿರುವ ಇಷ್ಟೆಲ್ಲಾ ಅನ್ಯಾಯವನ್ನು ರಾಜ್ಯದ 25 ಸಂಸದರಲ್ಲಿ ಯಾರೊಬ್ಬರೂ ಧ್ವನಿ ಎತ್ತಲಿಲ್ಲ. ಮೋದಿಯವರ ಎದುರು ನಿಂತು ಮಾತನಾಡಲು ಹೆದರುತ್ತಾರೆ. ಆದರೆ ಡಿ.ಕೆ.ಸುರೇಶ್ ಮಾತ್ರ ಪ್ರಶ್ನಿಸಿದರು ಎಂದರು.
ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರ ಅಲ್ಪಪ್ರಮಾಣದ ಬರಪರಿಹಾರ
ರಾಜ್ಯದ ಬಹುತೇಕ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 23 ರಂದು ಬರಪರಿಹಾರಕ್ಕೆ ಮನವಿ ಮಾಡಲಾಗಿದೆ. 18172 ಕೋಟಿ ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಕೇಳಿದೆವು. 48 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ನಾಶವಾಗಿದೆ. ಕೇಂದ್ರ ತಂಡ ಬರಪರಿಹಾರ ಅಧ್ಯಯನ ಮಾಡಿದ್ದಾರೆ. ರಾಜ್ಯದ ಮಂತ್ರಿಗಳು , ನಾನು ಕೇಂದ್ರ ಸಚಿವರು, ಪ್ರಧಾನಿಯವರನ್ನು ಸ್ವತ: ಕೋರಿದರೂ ಮನ್ನಿಸಲಿಲ್ಲ. ಆದ್ದರಿಂದ ಮನವಿ ಸಲ್ಲಿಸಿದ 7 ತಿಂಗಳ ನಂತರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆವು. ಸುಪ್ರೀಂ ಕೋರ್ಟ್ ಚಾಟಿ ಬೀಸುವ ತನಕ ಒಂದು ರೂ. ಕೊಡಲಿಲ್ಲ. 3454 ಕೋಟಿ ನಂತರ ಕೊಟ್ಟರು ಎಂದರು.
ಕನ್ನಡಿಗರ ಸ್ವಾಭಿಮಾನ ಕೆಣಕಿರುವ ಮೋದಿಯವರಿಗೆ ತಕ್ಕ ಪಾಠ ಕಲಿಸಬೇಕು
ರಾಜ್ಯದ ಜನರಿಗೆ ಮೋದಿಯವರ ಆಡಳಿತ ಬದಲಿಸಲು ಅವಕಾಶ ಸಿಕ್ಕಿದೆ. ಕರ್ನಾಟಕಕ್ಕೆ ಮೋದಿಯವರು ಕೇವಲ ಚೊಂಬು ನೀಡಿದ್ದಾರೆ. ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜನರು ತಮ್ಮ ಮತಗಳ ಮೂಲಕ ಛಾಟಿ ಬೀಸುತ್ತಾರೆ. ಈ ಬಾರಿ ಜನ ಕಾಂಗ್ರಸ್ ಮೆಲೆ ವಿಶ್ವಾಸ ಇಟ್ಟಿದ್ದಾರೆ. ರಾಜ್ಯದಿಂದ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿರುವ ಮೋದಿಯವರಿಗೆ ಜನ ತಕ್ಕ ಪಾಠ ಕಲಿಸಬೇಕು ಎಂದು ರಾಜ್ಯದ ಜನರಿಗೆ ಕರೆ ನೀಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.