ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್(Indira Canteen) ಹೆಸರನ್ನು ಬದಲಾಯಿಸಲು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ಇಂದಿರಾ ಕ್ಯಾಂಟೀನ್ ಗಳ ಹೆಸರನ್ನು ಬದಲಾಯಿಸಲು ಹೊರಟಿರುವ ರಾಜ್ಯದ ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸುತ್ತೇನೆ ಮತ್ತು ಇಂತಹ ಕ್ಷುಲಕ ರಾಜಕಾರಣವನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಪಡಿಸುವುದಾಗಿ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ(Indira Gandhi)ಯವರು ಗರೀಬಿ ಹಟಾವೋ ಘೋಷಣೆಯ ಮೂಲಕ ಬಡತನದ ವಿರುದ್ಧ ಯುದ್ದ ಸಾರಿ ಗೆದ್ದವರು. ಅವರು ಕೇವಲ ಕಾಂಗ್ರೆಸ್ ಪಕ್ಷದ ನಾಯಕರಾಗಿರಲಿಲ್ಲ, ದೇಶದ ನಾಯಕಿಯಾಗಿದ್ದರು. ಬಡವರ ಪಾಲಿನ ಆಪತ್ಪಾಂಧವಗಾಗಿದ್ದರು. ಈ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್ ಎಂದು ನಾಮಕರಣ ಮಾಡಲಾಗಿತ್ತು ಎಂದು ಇಂದಿರಾ ಕ್ಯಾಂಟೀನ್ ಹೆಸರಿಟ್ಟಿರುವ ಹಿಂದಿನ ಉದ್ದೇಶವನ್ನು ವಿವರಿಸಿದ್ದಾರೆ.
ಈ ಕ್ಯಾಂಟೀನ್ ಗಳಿಗೆ ನಮ್ಮೆಲ್ಲರ ಹೆಮ್ಮೆಯ ಕವಿ ಮಹರ್ಷಿ ವಾಲ್ಮೀಕಿಯವರ ಹೆಸರು ಇಡುವ ಯೋಚನೆ ಇದೆಯಂತೆ. ಮಹರ್ಷಿ ವಾಲ್ಮೀಕಿಯವರ ಬಗ್ಗೆ ನಮಗೆಲ್ಲ ಅಪಾರವಾದ ಗೌರವ ಇದೆ. ಅವರ ಹೆಸರನ್ನು ಬಿಜೆಪಿ ತನ್ನ ಕ್ಷುಲಕ ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಂಡು ಮಹಾಕವಿಗೆ ಅವಮಾನ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಹರಿಹೈದಿದ್ದಾರೆ.
ಮಹರ್ಷಿ ವಾಲ್ಮೀಕಿಯವರು ಒಬ್ಬ ಮಹಾಕವಿ, ಅವರ ಸಾಧನೆಗೆ ಹೊಂದುವಂತಹ ಯೋಜನೆಯನ್ನು ಬಿಜೆಪಿ ಸರ್ಕಾರ ಪ್ರಾರಂಭಿಸಲಿ, ಒಬ್ಬರಿಗೆ ಅಗೌರವ ಸಲ್ಲಿಸುವ ಮೂಲಕ ಇನ್ನೊಬ್ಬರಿಗೆ ಗೌರವ ಸಲ್ಲಿಸುವುದು ಇಬ್ಬರಿಗೂ ಮಾಡುವ ಅವಮಾನವಾಗಿದೆ ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
ರಾಜ್ಯ ಬಿಜೆಪಿ ಬದಲಾಯಿಸಬೇಕಾಗಿರುವುದು ಇಂದಿರಾ ಕ್ಯಾಂಟೀನ್ ಹೆಸರಲ್ಲ, ತನ್ನೊಳಗಿನ ಸಣ್ಣ ಬುದ್ದಿಯನ್ನು ಬದಲಾಯಿಸಬೇಕು. ನಮ್ಮ ಸರ್ಕಾರ ಜಾರಿಗೆ ತಂದಿರುವ ಪ್ರತಿಯೊಂದು ಬಡವರ ಪರ ಯೋಜನೆಗಳನ್ನು ರದ್ದುಮಾಡಲು ಹೊರಟಿರುವ ರಾಜ್ಯದ ಬಿಜೆಪಿ ಸರ್ಕಾರ ಜನಾಕ್ರೋಶಕ್ಕೆ ಹೆದರಿ ಯೋಜನೆಗಳ ಹೆಸರು ಬದಲಾಯಿಸಲು ಹೊರಟಿದೆ. ಬಡವರ ಪರವಾದ ಹೊಸ ಯೋಜನೆಗಳನ್ನು ರೂಪಿಸುವ ಶಕ್ತಿಯೂ ಇಲ್ಲ, ಮನಸ್ಸೂ ಇಲ್ಲ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರವನ್ನು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.