ಬೆಂಗಳೂರು: ಕೇಂದ್ರ ಸರ್ಕಾರ ಬಡವರಿಗೆ ವಿತರಣೆ ಮಾಡಿದ್ದ ಅಕ್ಕಿ ಮೂಟೆಗಳನ್ನು ಬಿಜೆಪಿ ಮುಖಂಡರು ಗೋದಾಮುಗಳಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆರೋಪ ಆಧಾರ ರಹಿತ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ (K Gopalaiah) ಹೇಳಿದ್ದಾರೆ.
ಸಚಿವ ಗೋಪಾಲಯ್ಯ ಅಧಿಕಾರಗಳ ಜೊತೆ ಹೊಂಗಸಂದ್ರದ ಗೋದಾಮಿಗೆ ಭೇಟಿ ನೀಡಿ ಆಹಾರ ಧಾನ್ಯಗಳನ್ನು ಪರಿಶೀಲನೆ ನಡೆಸಿದರು. ಸಾರ್ವಜನಿಕರಿಗೆ ವಿತರಣೆ ಮಾಡುವ ಉದ್ದೇಶದಿಂದ ಸಂಗ್ರಹಿಸಿರುವ ಪಡಿತರ ಧಾನ್ಯದಲ್ಲಿ ಯಾವುದೇ ರೀತಿಯ ಲೋಪದೋಷಗಳು ಉಂಟಾಗದಂತೆ ಎಚ್ಚರ ವಹಿಸಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚನೆ ಕೊಟ್ಟರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಮಾಡಿರುವ ಆರೋಪ ಸಂಪೂರ್ಣವಾಗಿ ಆಧಾರರಹಿತ. ಈ ಬಗ್ಗೆ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿರುವ ಗೋಪಾಲಯ್ಯ, ರಾಜ್ಯದಲ್ಲಿ ಲಾಕ್ಡೌನ್ ಉಂಟಾದ ಪರಿಣಾಮ ಸ್ಥಳದ ಅಭಾವ ಎದುರಾದ ಕಾರಣ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಒಟ್ಟು 14,260 ಕ್ವಿಂಟಾಲ್ ಆಹಾರ ಧಾನ್ಯಗಳನ್ನು ದೊಮ್ಮಸಂದ್ರದ ರೇಷ್ಮೆ ಬೆಳೆಗಾರರು ಮತ್ತು ರೈತರ ಸೇವಾ ಸಹಕಾರ ಸಂಘಕ್ಕೆ ಸೇರಿದ ಗೋದಾಮುಗಳಲ್ಲಿ ಸಂಗ್ರಹಣೆ ಮಾಡಲು ತೀರ್ಮಾನ ಮಾಡಲಾಗಿತ್ತು ಎಂದಿದ್ದಾರೆ.
ಲಾಕ್ಡೌನ್ (Lockdown) ನಿಂದಾಗಿ ಗ್ರಾಹಕರಿಗೆ ಏಕಕಾಲದಲ್ಲೇ ಎರಡು ತಿಂಗಳ ಪಡಿತರ ಧಾನ್ಯವನ್ನು ವಿತರಣೆ ಮಾಡಲು ತೀರ್ಮಾನಿಸಲಾಯಿತು. ಅದರಂತೆ ಏ.18ರಂದು ಜಿಲ್ಲಾಧಿಕಾರಿಗಳ ಅನುಮತಿಯನ್ನು ಪಡೆದು ಆನೇಕಲ್ ತಾಲ್ಲೂಕಿಗೆ ಪಡಿತರ ಧಾನ್ಯಗಳನ್ನು ಮರು ವಿತರಣೆ ಮಾಡಲು ತೀರ್ಮಾನಿಸಲಾಗಿತ್ತು ಎಂದು ಹೇಳಿದ್ದಾರೆ.
ಆನೇಕಲ್ ತಾಲ್ಲೂಕು ವ್ಯಾಪ್ತಿಯಲ್ಲಿನ ಸರ್ಜಾಪುರ ಹೋಬಳಿಯಲ್ಲಿ ಎಸ್ಎಫ್ಎಸ್ಸಿಎಸ್ ಗೋದಾಮು ಭರ್ತಿಯಾದ ಹಿನ್ನೆಲೆಯಲ್ಲಿ ಖಾಸಗಿ ಗೋದಾಮುಗಳಲ್ಲಿ ಆಹಾರ ಧಾನ್ಯಗಳನ್ನು ಬಟವಾಡೆ ಮಾಡುವಂತೆ ಅಲ್ಲಿನ ತಹಸೀಲ್ದಾರ್ ಅವರೇ ಸೂಚನೆ ಕೊಟ್ಟಿದ್ದರು. ನಿಯಮಾನುಸಾರವಾಗಿಯೇ ಆಹಾರ ಧಾನ್ಯಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಇದಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕೂಡ ಸಮ್ಮತಿ ನೀಡಿ ಪತ್ರವನ್ನು ನೀಡಿದ್ದಾರೆ. ಎಲ್ಲಿಯೂ ಕೂಡ ಆಹಾರ ಧಾನ್ಯಗಳು ಮಧ್ಯವರ್ತಿಗಳ ಪಾಲಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಯಾವುದೇ ರೀತಿಯ ಲೋಪದೋಷ ಉಂಟಾಗಲು ಅಧಿಕಾರಿಗಳು ಅವಕಾಶ ನೀಡಿಲ್ಲ. ಎಲ್ಲ ಪ್ರಕ್ರಿಯೆಗಳೂ ನಿಯಮಬದ್ಧವಾಗಿ ನಡೆದಿವೆ. ಎಲ್ಲೂ ಅಕ್ರಮ ನಡೆದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಏಪ್ರಿಲ್ 13 ರಂದು ರೇಷ್ಮೆ ಹುಳು ಮತ್ತು ಸಾಗಾಣಿಕೆ ಕೇಂದ್ರದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಆಹಾರ ಧಾನ್ಯಗಳನ್ನು ಸರ್ಕಾರಿ ಒಡೆತನದ ಗೋದಾಮುಗಳಲ್ಲಿ ಸ್ಥಳದ ಆಭಾವ ಇರುವ ಕಾರಣ, ಜಿಲ್ಲಾಧಿಕಾರಿ ಹಾಗೂ ತಹಶಿಲ್ದಾರರ ಅನುಮತಿ ಪಡೆದು ಅಹಾರ ಧಾನ್ಯಗಳನ್ನು ಸಂಗ್ರಹಿಸಡಲಾಗಿತ್ತು ಎಂದರು.
ಎರಡು ತಿಂಗಳ ಪಡಿತರವನ್ನು ಒಂದೇ ಕಂತಿನಲ್ಲಿ ವಿತರಣೆ ಮಾಡಬೇಕಾದ ಕಾರಣ ಸ್ಥಳದ ಅಭಾವದ ಹಿನ್ನೆಲೆಯಲ್ಲಿ ಗೋದಾಮಗಳನ್ನು ಬಾಡಿಗೆ ಪಡೆಯಲಾಗಿದೆ. ಇದರಲ್ಲಿ ಎಲ್ಲಿಯೂ ಆಕ್ರಮ ನಡೆಯದಂತೆ ಖುದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿದೇರ್ಶನ ಕೊಟ್ಟಿದ್ದರು.ಅದರಂತೆ ನಾನೇ ರಾಜ್ಯದ ನಾನಾ ಕಡೆ ಗೋದಾಮುಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೇನೆ. ಒಂದು ವೇಳೆ ಇದರಲ್ಲಿ ಯಾವುದೇ ಅಧಿಕಾರಿಗಳು ಷಾಮೀಲಾಗಿರುವುದು ಕಂಡು ಬಂದರೆ, ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವುದಾಗಿ ಗೋಪಾಲಯ್ಯ ಅವರು ಎಚ್ಚರಿಸಿದರು.