ನವದೆಹಲಿ: ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಇದು ಉದ್ಯಮಕ್ಕೆ ದೊಡ್ಡ ಲಾಭವನ್ನು ನೀಡುವುದಲ್ಲದೆ ನೌಕರರ ಮೇಲೆ ಅದರ ನೇರ ಪ್ರಭಾವ ಉಂಟಾಗಲಿದೆ.
ಎಂಎಸ್‌ಎಂಇ ಕ್ಷೇತ್ರಕ್ಕೆ 3 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸುವ ಮೂಲಕ ಪಿಎಫ್ ಕೊಡುಗೆ ಹೆಚ್ಚಿಸುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಘೋಷಿಸಿದ್ದಾರೆ.
ಪಿಎಫ್ (PF) ಕೊಡುಗೆಯಲ್ಲಿ ನೀಡಲಾದ ಪರಿಹಾರವನ್ನು ಸರ್ಕಾರ ಮುಂದಿನ ಮೂರು ತಿಂಗಳು ವಿಸ್ತರಿಸಿದೆ. ಸರ್ಕಾರದ ಈ ಪ್ರಯತ್ನವು ಉದ್ಯೋಗದಾತರಿಗೆ ಪರಿಹಾರವನ್ನು ನೀಡುವುದಲ್ಲದೆ ನೌಕರರ ವೇತನವೂ ಹೆಚ್ಚಾಗುತ್ತದೆ.
ವಾಸ್ತವವಾಗಿ ನೌಕರರ ಪಿಎಫ್ ಅನ್ನು ಶೇಕಡಾ 12 ರಿಂದ 10ಕ್ಕೆ ಇಳಿಸುವ ನಿರ್ಧಾರ ಮುಂದಿನ 3 ತಿಂಗಳವರೆಗೆ ಮುಂದುವರಿಯಲಿದೆ ಎಂದು ಹಣಕಾಸು ಸಚಿವರು ಹೇಳಿದರು. ಈ ಮೊದಲು ಪರಿಹಾರ ಯೋಜನೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳವರೆಗೆ ನೀಡಲಾಗಿತ್ತು. ಇದೀಗ ಇದು ಮುಂದಿನ ಮೂರು ತಿಂಗಳುಗಳು ಅಂದರೆ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳವರೆಗೆ ಮುಂದುವರಿಯುತ್ತದೆ ಎಂದವರು ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದ ಉದ್ಯೋಗಿಗಳ ವೇತನದಲ್ಲಿ 12% ಬದಲಿಗೆ 10% ಪಿಎಫ್ ಕಡಿತಗೊಳಿಸಲಾಗುವುದು. ಅದೇ ಸಮಯದಲ್ಲಿ, ಸರ್ಕಾರ ಮತ್ತು ಪಿಎಸ್ಯುಗಳು ಕೇವಲ 12 ಪ್ರತಿಶತವನ್ನು ಪಾವತಿಸಬೇಕಾಗುತ್ತದೆ.
15,000ಕ್ಕಿಂತ ಕಡಿಮೆ ಸಂಬಳ ಪಡೆಯುವ ನೌಕರರಿಗೆ ಲಾಭ:
15,000ಕ್ಕಿಂತ ಕಡಿಮೆ ಸಂಬಳ ಪಡೆಯುವ ನೌಕರರಿಗೆ ಆಗಸ್ಟ್ ವರೆಗೆ ಕೇಂದ್ರ ಸರ್ಕಾರ ಇಪಿಎಫ್ ನೀಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇದರಲ್ಲಿ ನೌಕರರು ಮತ್ತು ಉದ್ಯೋಗದಾತರಿಗೆ ಸರ್ಕಾರ ಕೊಡುಗೆ ನೀಡುತ್ತಿದೆ. ಸರ್ಕಾರದ ಈ ನಿರ್ಧಾರದಿಂದ 3.67 ಲಕ್ಷ ಕಂಪನಿಗಳು ಮತ್ತು 72.22 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಈ ಪರಿಹಾರದಿಂದ ಸರ್ಕಾರಕ್ಕೆ ಸುಮಾರು 2500 ಕೋಟಿ ರೂ. ಹೊರೆಯಾಗಲಿದೆ ಎಂದವರು ಮಾಹಿತಿ ನೀಡಿದರು.
ಈ ಕಂಪನಿಗಳಿಗೆ ಲಾಭ:
ಸರ್ಕಾರದ ಈ ಪ್ರಕಟಣೆಯು 100ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಿಗೆ ಮತ್ತು ಅವರಲ್ಲಿ 90 ಪ್ರತಿಶತದಷ್ಟು ಜನರು 15,000 ರೂ.ಗಿಂತ ಕಡಿಮೆ ಸಂಬಳವನ್ನು ಹೊಂದಿದ್ದರೆ ಮಾತ್ರ ಪ್ರಯೋಜನವನ್ನು ನೀಡುತ್ತದೆ. 15 ಸಾವಿರಕ್ಕಿಂತ ಹೆಚ್ಚು ಸಂಬಳ ಪಡೆಯುವವರಿಗೆ ಇದರ ಲಾಭ ಸಿಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಇದಲ್ಲದೆ ಇತರ ಕಂಪನಿಗಳಿಗೆ ಪಿಎಫ್ ಮಿತಿಯನ್ನು ಸರ್ಕಾರ ಶೇಕಡಾ 12 ರಿಂದ 10ಕ್ಕೆ ಇಳಿಸಿದೆ. ಈ ಮಿತಿ ಮುಂದಿನ 3 ತಿಂಗಳವರೆಗೆ ಮುಂದುವರಿಯುತ್ತದೆ.
ಇಲ್ಲಿ, ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರ ಪಾಲಿನಿಂದ ಶೇಕಡಾ 10–10 ರಷ್ಟು ಪಿಎಫ್‌ಗೆ ಕೊಡುಗೆ ನೀಡಲಾಗುವುದು. ಆದಾಗ್ಯೂ ಈ ನಿರ್ಧಾರವು ಸರ್ಕಾರಿ ಕಂಪನಿಗಳಿಗೆ ಅನ್ವಯಿಸುವುದಿಲ್ಲ.
ಸರ್ಕಾರದ ಈ ನಿರ್ಧಾರವು ನೌಕರರ ವೇತನವನ್ನು ಹೆಚ್ಚಿಸುತ್ತದೆ. ಅವರ ಸಂಬಳವನ್ನು ಶೇಕಡಾ 2 ರಷ್ಟು ಹೆಚ್ಚಿಸಲಾಗುವುದು. ಮತ್ತೊಂದೆಡೆ ಕಂಪನಿಗಳ ಹೊರೆ ಕೂಡ ಹಗುರವಾಗಿರುತ್ತದೆ. ಈ ನಿರ್ಧಾರವು 6.5 ಲಕ್ಷ ಕಂಪನಿಗಳು ಮತ್ತು 4.3 ಕೋಟಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ. ನೌಕರರು ಮತ್ತು ಉದ್ಯೋಗದಾತರ ಕೈಯಲ್ಲಿ ಪ್ರತ್ಯೇಕ ಮೊತ್ತವು ಬರುತ್ತದೆ ಮತ್ತು ಮಾರುಕಟ್ಟೆಯಲ್ಲಿ ನಗದು ಕೂಡ ಹೆಚ್ಚಾಗುತ್ತದೆ.