ನವದೆಹಲಿ: ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕರೆದ ಸರ್ವಪಕ್ಷ ಸಭೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಸೂಕ್ಷ್ಮ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ವಾರದ ಆರಂಭದಲ್ಲಿ ಪೂರ್ವ ಲಡಾಕ್ನಲ್ಲಿ ಚೀನಾದ ಸೈನ್ಯದೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಮೃತಪಟ್ಟ 20 ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುವುದರೊಂದಿಗೆ ಸಭೆ ಪ್ರಾರಂಭವಾಯಿತು.ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಹುತಾತ್ಮ ಸೈನಿಕರನ್ನು ಗೌರವಿಸುವ ಸಂಕೇತವಾಗಿ ಮೌನಾಚರಣೆ ಮಾಡಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್ಸಿಪಿ ಮುಖಂಡ ಶರದ್ ಪವಾರ್, ಟಿಆರ್ಎಸ್ ಮುಖಂಡ ಕೆ.ಚಂದ್ರಶೇಖರ್ ರಾವ್, ಜೆಡಿಯು ಮುಖಂಡ ನಿತೀಶ್ ಕುಮಾರ್, ಡಿಎಂಕೆ ಎಂ ಕೆ ಸ್ಟಾಲಿನ್, ವೈಎಸ್ಆರ್ ಕಾಂಗ್ರೆಸ್ ಪಕ್ಷದ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಸಭೆಯಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ಪಾರದರ್ಶಕವಾಗಿರಬೇಕು ಎಂದು ಸರ್ಕಾರವನ್ನು ಕೇಳುತ್ತಿವೆ ಮತ್ತು ಈ ವಿಷಯವನ್ನು ನಿಭಾಯಿಸುವುದರಲ್ಲಿ ವಾಗ್ದಾಳಿ ನಡೆಸಿದೆ. ಇನ್ನೊಂದೆಡೆಗೆ ಭಾರತೀಯ ಸೈನಿಕರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಮೋದಿ ಪ್ರತಿಪಾದಿಸಿದ್ದಾರೆ.ಭಾರತೀಯ ಸೈನಿಕರು ಕರ್ತವ್ಯದ ಸಾಲಿನಲ್ಲಿ ಅನುಕರಣೀಯ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದರು ಎಂದು ರಕ್ಷಣಾ ಸಚಿವ ಸಿಂಗ್ ಹೇಳಿದ್ದಾರೆ.